ಆಸನಕ್ಕಾಗಿ ಜಗಳ: ಕುಟುಂಬಸ್ಥರ ಎದುರೇ ರೈಲಿನಲ್ಲಿ ಪ್ರಯಾಣಿಕನ ಥಳಿಸಿ ಹತ್ಯೆ

Update: 2020-02-13 16:31 GMT

ಪುಣೆ, ಫೆ. 13: ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಆಸನಕ್ಕೆ ಸಂಬಂಧಿಸಿ ವಾಗ್ವಾದ ನಡೆದು 6 ಮಂದಿ ಮಹಿಳೆಯರು ಸಹಿತ 12 ಮಂದಿ ಪ್ರಯಾಣಿಕರು ಸಹ ಪ್ರಯಾಣಿಕರೋರ್ವರನ್ನು ಥಳಿಸಿ ಹತ್ಯೆಗೈದಿದ್ದಾರೆ ಎಂದು ಸರಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ಹಾಗೂ ದೌಂಡ್ ರೈಲ್ವೆ ನಿಲ್ದಾಣಗಳ ನಡುವೆ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಸಾಗರ್ ಮರ್ಕಡ್ ಎಂದು ಗುರುತಿಸಲಾಗಿದೆ. ಸಾಗರ್ ಮರ್ಕಡ್ ತನ್ನ ಪತ್ನಿ ಜ್ಯೋತಿ, ತಾಯಿ ಹಾಗೂ ಎರಡು ವರ್ಷದ ಪುತ್ರಿಯೊಂದಿಗೆ ಪುಣೆ ರೈಲ್ವೆ ನಿಲ್ದಾಣದಿಂದ ಮುಂಜಾನೆ 12.45ಕ್ಕೆ ರೈಲು ಹತ್ತಿದ್ದರು ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೋಗಿಯಲ್ಲಿ ಆಸನ ಭರ್ತಿಯಾಗಿತ್ತು. ಮಗು ಇರುವುದರಿಂದ, ಪತ್ನಿಗೆ ಕುಳಿದುಕೊಳ್ಳಲು ಸ್ವಲ್ಪ ಸ್ಥಳಾವಕಾಶ ಮಾಡಿ ಕೊಡುವಂತೆ ಮರ್ಕಡ್ ಮಹಿಳಾ ಪ್ರಯಾಣಿಕರೋರ್ವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಮಹಿಳೆ ಮಕ್ಕಡ್ ಅವರಿಗೆ ಬೈಯಲು ಆರಂಭಿಸಿದರು. ಇದರಿಂದ ಅವರಿಬ್ಬರು ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭ 6 ಮಹಿಳೆಯರ ಸಹಿತ 12 ಮಂದಿ ಮರ್ಕಡ್ ಅವರಿಗೆ ಥಳಿಸಿದರು. ಇದರಿಂದ ಮರ್ಕಡ್ ಅವರ ಗಂಭೀರ ಗಾಯಗೊಂಡರು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ತಿಳಿದ ರೈಲ್ವೆ ಪೊಲೀಸರು ದೌಂಡ್ ನಿಲ್ದಾಣದಲ್ಲಿ ಬೋಗಿ ಪ್ರವೇಶಿಸಿ ಮರ್ಕಡ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News