ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್‌ನಲ್ಲಿಅಮಿತ್‌ ಗೆ ನಂ. 1 ಸ್ಥಾನ

Update: 2020-02-13 18:05 GMT

ಹೊಸದಿಲ್ಲಿ, ಫೆ.13: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಅಮಿತ್ ಪಾಂಗಾಲ್(52 ಕೆ.ಜಿ) ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ ಅರ್ಹತಾ ಸ್ಪರ್ಧೆಗಳಿಗಿಂತ ಮುಂಚಿತವಾಗಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಬಾಕ್ಸಿಂಗ್ ಕಾರ್ಯಪಡೆಯಿಂದ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಮಿತ್ ದಶಕದಲ್ಲಿ 52 ಕೆ.ಜಿ. ವಿಭಾಗದಲ್ಲಿ ಜಾಗತಿಕ ಅಗ್ರ ಸ್ಥಾನವನ್ನು ಗಳಿಸಿದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  2009ರಲ್ಲಿ ಒಲಿಂಪಿಕ್ ಕಂಚು ಪಡೆದ ವಿಜೇಂದರ್ ಸಿಂಗ್ ಅವರು ವಿಶ್ವ ಚಾಂಪಿಯನ್‌ಶಿಪ್‌ನ 75 ಕೆ.ಜಿ ವಿಭಾಗದಲ್ಲಿ ಕಂಚಿನೊಂದಿಗೆ ಭಾರತದ ಖಾತೆಯನ್ನು ತೆರೆದ ನಂತರ ಮೊದಲ ನಂ.1 ಸ್ಥಾನ ತಲುಪಿದ್ದರು. ಐಒಸಿಯ ಬಾಕ್ಸಿಂಗ್ ಟಾಸ್ಕ್ ಫೋರ್ಸ್ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, 24 ವರ್ಷದ ಪಾಂಗಾಲ್ 420 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದಿದ್ದಾರೆ.

ಐಒಸಿ ಕಾರ್ಯಪಡೆ ಒಲಿಂಪಿಕ್ ಅರ್ಹತಾ ಪಂದ್ಯಗಳನ್ನು ಮತ್ತು ಈ ವರ್ಷದ ಕೊನೆಯಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್‌ನ್ನು ನಡೆಸಲಿದೆ. ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ನ್ನು (ಎಐಬಿಎ)ಆರ್ಥಿಕ ಮತ್ತು ಆಡಳಿತಾತ್ಮಕ ದುರುಪಯೋಗದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.

      ಕಳೆದ ಎರಡು ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಮತ್ತು 2019 ರಲ್ಲಿ ನಡೆದ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ನೀಡಿರುವ ಪ್ರದರ್ಶನಗಳನ್ನು ಗಣನೆಗೆ ತೆಗೆದುಕೊಂಡು ರ್ಯಾಂಕಿಂಗ್ ಪಟ್ಟಿ ತಯಾರಿಸಲಾಗಿದೆ. ಏಶ್ಯನ್ ಒಲಿಂಪಿಕ್ ಅರ್ಹತಾ ಸ್ಪರ್ಧೆಗಳು ಮುಂದಿನ ತಿಂಗಳು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯಲಿವೆ.

 2018ರ ಕಾಮನ್‌ವೆಲ್ತ್ ಮತ್ತು ಏಶ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಪಾಂಗಾಲ್ 2017ರಿಂದ ಗೆಲುವಿನ ಅಪೂರ್ವ ಓಟವನ್ನು ಅನುಭವಿಸಿದ್ದಾರೆ. ಕಳೆದ ವರ್ಷ, ಏಶ್ಯನ್ ಚಿನ್ನ ಗೆದ್ದ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

  ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೈನ್ ಅವರು 69 ಕೆಜಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 22 ವರ್ಷದ ಇವರು ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆೆ.

 ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ ಮೇರಿ ಕೋಮ್ 51 ಕೆ.ಜಿ ವಿಭಾಗದಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಂಟನೇ ಪದಕ ( ಕಂಚು ) ಗೆದ್ದ ಮೇರಿ ಕೋಮ್ 225 ಅಂಕಗಳನ್ನು ಹೊಂದಿದ್ದಾರೆ. ಅವರ ಪ್ರತಿಸ್ಪರ್ಧಿ ನಿಖಾತ್ ಝರೀನ್ 75 ಅಂಕಗಳೊಂದಿಗೆ 22ನೇ ಸ್ಥಾನದಲ್ಲಿದ್ದಾರೆ.

  ಏಶ್ಯನ್ ಬೆಳ್ಳಿ ಪದಕ ವಿಜೇತ ಕವಿಂದರ್ ಸಿಂಗ್ ಬಿಶ್ತ್ (57 ಕೆ.ಜಿ) 190 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಕಂಚು ಪಡೆದ ಗೌರವ್ ಬಿಧುರಿ 32ನೇ ಸ್ಥಾನ ಗಳಿಸಿದ್ದಾರೆ.

 ಪುರುಷರ 63 ಕೆ.ಜಿ ವಿಭಾಗದಲ್ಲಿ ವಿಶ್ವ ಕಂಚು ವಿಜೇತ ಮನೀಶ್ ಕೌಶಿಕ್ 12ನೇ ಸ್ಥಾನದಲ್ಲಿದ್ದರೆ, ನಾಲ್ಕು ಬಾರಿ ಏಶ್ಯನ್ ಪದಕ ವಿಜೇತ ಶಿವ ಥಾಪಾ 36ನೇ ಸ್ಥಾನ ಗಳಿಸಿದ್ದಾರೆ.

 ಅನುಭವಿ ಮನೋಜ್ ಕುಮಾರ್ 69 ಕೆ.ಜಿ ವಿಭಾಗದಲ್ಲಿ 71ನೇ ಸ್ಥಾನದಲ್ಲಿದ್ದರೆ, ಆಶಿಶ್ 22 ನೇ ಸ್ಥಾನ ಪಡೆದಿದ್ದಾರೆ.

 ಎರಡು ಬಾರಿ ವಿಶ್ವ ಮತ್ತು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ವಿಜೇತೆ ಸೋನಿಯಾ ಚಾಹಲ್ ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ 10ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News