ಭಾರತದ ಮಹಿಳಾ ತಂಡದಲ್ಲಿ ಏನೋ ದೋಷವಿದೆ

Update: 2020-02-13 18:11 GMT

ಹೊಸದಿಲ್ಲಿ, ಫೆ.13: ಮುಂಬರುವ ಟ್ವೆಂಟಿ-20 ಐಸಿಸಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸುವ ಉದ್ದೇಶಕ್ಕಾಗಿ ಭಾರತದ ಮಹಿಳಾ ತಂಡವು ಈ ಸಮಯದಲ್ಲಿ ಪದೇ ಪದೇ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ.

      ಫೆಬ್ರವರಿ 21 ರಿಂದ ಆಸ್ಟ್ರೇಲಿಯದಲ್ಲಿ ಪಂದ್ಯಾವಳಿ ನಡೆಯಲಿದೆ. ಬುಧವಾರ ಮೆಲ್ಬೋರ್ನ್‌ನಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 155 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 115 ರನ ಮಾಡಿದ್ದ ಭಾರತ ಆನಂತರ 144 ರನ್‌ಗಳಿಗೆ ಆಲೌಟಾಗಿದೆ.

     ಬಿಸಿಸಿಐ ಆಡಳಿತಗಾರರ ಸಮಿತಿಯ ಸದಸ್ಯರಾಗಿ 33 ತಿಂಗಳ ಅವಧಿಯಲ್ಲಿ ಮಹಿಳಾ ಕ್ರಿಕೆಟ್‌ಗಾಗಿ ಸಾಕಷ್ಟು ಶ್ರಮ ವಹಿಸಿರುವ ಎಡುಲ್ಜಿ ಅವರು ತಂಡವು ಇದೀಗ ಪಂದ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಗೆಲ್ಲುವ ಅಭಿಯಾನ ಆರಂಭಿಸಬೇಕಿದೆ ಎಂದು ಹೇಳಿದರು.

           ಈ ತಂಡದಲ್ಲಿ ಏನೋ ದೋಷವಿದೆ.ಪ್ರತಿ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿರುವ ತಂಡವಾಗಿದೆ. ಆದರೆ ಇದರಲ್ಲಿ ಏನೋ ದೋಷ ಇದೆ. ಆರಂಭದಲ್ಲಿ ತಂಡದ ನಿರ್ವಹಣೆ ಚೆನ್ನಾಗಿದ್ದರೂ ಬಳಿಕ ಸೋಲು ಅನುಭವಿಸುತ್ತದೆ . ಇದಕ್ಕೆ ಕಾರಣವನ್ನು ತಿಳಿದುಕೊಂಡು ಇದನ್ನು ಸರಿಪಡಿಸಬೇಕಾಗಿದೆ ಎಂದರು. ತಂಡದ ಆಟಗಾರ್ತಿಯರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆೆ.ಆದರೆ ಇನ್ನೂ ಸ್ಥಿರ ಕ್ರಿಕೆಟ್ ಆಡಲು ಮತ್ತು ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಇದೇ ರೀತಿಯಲ್ಲಿಯೇ ಆಡಿದರೆ, ಅವರು ಮತ್ತೆ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮತ್ತೆ ಎಡವುತ್ತಾರೆ . ಟ್ರೋಫಿಯನ್ನು ಗೆಲ್ಲುವುದನ್ನು ನೋಡಲು ಸಾಧ್ಯವಿಲ್ಲ ಎಂದು ಜಂಕ್ಷನ್ ಓವಲ್‌ನಲ್ಲಿ ಭಾರತ ತಂಡ ಸೋತ ಸ್ವಲ್ಪ ಸಮಯದ ನಂತರ ಎಡುಲ್ಜಿ ಪಿಟಿಐಗೆ ತಿಳಿಸಿದರು.

   

  

     ತ್ರಿಕೋನ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧ ಲೀಗ್ ಹಂತದಲ್ಲಿ ತಲಾ ಒಂದು ಪಂದ್ಯಗಳಲ್ಲಿ ಜಯ ಗಳಿಸಿದೆ ಮತ್ತು ತಲಾ 1 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ದೊಡ್ಡ ಪಂದ್ಯಗಳಲ್ಲಿ ತಂಡವು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ.2018ರ ವಿಶ್ವ ಟ್ವೆಂಟಿ-20 ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ತಲುಪಿದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. 2017ರ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಭಾರತವು ತಮ್ಮ ಮೊದಲ ಏಕದಿನ ವಿಶ್ವಕಪ್ ಎತ್ತುವ ಅಭಿಯಾನವನ್ನು ಫೈನಲ್‌ನಲ್ಲಿ ಕೊನೆಗೊಳಿಸಿತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 9 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ‘‘ಕೆಲವು ಆಟಗಾರ್ತಿಯರು ತುಂಬಾ ಸೋಮಾರಿಯಾಗಿದ್ದಾರೆ, ಅವರು ಎರಡನೇ ರನ್‌ಗಾಗಿ ಪ್ರಯತ್ನಿಸುವುದು ಕಡಿಮೆ. ಇದು ತಂಡದ ಮೇಲೆ ಪರಿಣಾಮ ಬೀರುತ್ತದೆ. ಒಂದು ರನ್ ಗಳಿಸುವುದು ಮತ್ತು ಬೌಂಡರಿ ಬಾರಿಸುವುದು ಇದನ್ನು ಬಿಟ್ಟರೆ ಏನೂ ಇಲ್ಲ’’ ಎಂದು 20 ಟೆಸ್ಟ್ ಮತ್ತು 36 ಏಕದಿನ ಪಂದ್ಯಗಳನ್ನು ಆಡಿರುವ 64ರ ಹರೆಯದ ಎಡುಲ್ಜಿ ಆರೋಪಿಸಿದರು.

  ಸ್ಮತಿ ಮಂಧಾನ ಅಗ್ರ ಸರದಿಯಲ್ಲಿ ಚೆನ್ನಾಗಿ ಆಡುತ್ತಾರೆ. ಆದರೆ ಜೆಮಿಮಾ ರೊಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಅವರಂತಹ ಆಟಗಾರ್ತಿಯರ ಬ್ಯಾಟಿಂಗ್ ಸ್ಥಿರವಾಗಿಲ್ಲ.

           ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಇಲ್ಲ. ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಇಬ್ಬರೂ ತಮ್ಮ ಬ್ಯಾಟಿಂಗ್ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಬಹುಶಃ ಹರ್ಮನ್ ನಾಯಕತ್ವವನ್ನು ತ್ಯಜಿಸಿ ನೈಜ ಆಟವನ್ನು ಆಡಬೇಕು. ನಾಯಕತ್ವದ ಹೊರೆ ಅವರ ಆಟಕ್ಕೆ ಅಡ್ಡಿಯಾಗಿದೆ. ಆದರೆ ಅವರನ್ನು ಬಿಟ್ಟು ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು ಯಾರು ? ಸ್ಮತಿಗೆ ನಾಯಕತ್ವವನ್ನು ಹಸ್ತಾಂತರಿಸಿದರೆ, ಅವರ ಬ್ಯಾಟಿಂಗ್‌ನ ಮೇಲೆ ಪರಿಣಾಮ ಬೀರಬಹುದು ಎಂದು ಎಡುಲ್ಜಿ ಹೇಳಿದರು.

  ಬೌಲಿಂಗ್ ವಿಭಾಗದಲ್ಲಿ ತಂಡವು ಸ್ಪಿನ್ನರ್‌ಗಳನ್ನು ಅವಲಂಬಿಸಿದೆ. ಯಾಕೆಂದರೆ ಯಾವುದೇ ಗುಣಮಟ್ಟದ ಬೌಲಿಂಗ್ ನಡೆಸುವ ವೇಗಿಗಳು ಇಲ್ಲ. ದೇಶೀಯ ಕ್ರಿಕೆಟ್‌ನಿಂದ ಗುಣಮಟ್ಟದ ವೇಗಿಗಳು ರೂಪುಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

 ನಾವು ಜೂನಿಯರ್ ಕ್ರಿಕೆಟ್‌ನ ಕಡೆಗೆ ಹೆಚ್ಚು ಗಮನಹರಿಸುತ್ತಿಲ್ಲ.120 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ವೇಗಿಗಳನ್ನು ತಯಾರು ಮಾಡಲು ಆಸ್ಟ್ರೇಲಿಯಕ್ಕೆ ಸಾಧ್ಯವಾಗುವುದಾದರೆ ನಮಗೆ ಯಾಕೆ ಸಾಧ್ಯವಾಗುತ್ತಿಲ್ಲ?’’ ಎಂದು ಎಡುಲ್ಜಿ ಪ್ರಶ್ನಿಸಿದರು?

  ಟ್ವೆಂಟಿ -20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಭಾರತ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News