ವ್ಯಕ್ತಿತ್ವ ನಿರ್ಮಾಣದಲ್ಲಿ‌‌ ಶಿಕ್ಷಣ ಸಂಸ್ಥೆಗಳ‌ ಪಾತ್ರ ಪ್ರಮುಖ : ಶ್ಯಾಮಲಾ‌ ಕುಂದರ್

Update: 2020-02-14 07:13 GMT

ಕೊಣಾಜೆ: ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಸಂಸ್ಥೆಗಳೆಂದರೆ ಅದು ಶಿಕ್ಷಣ ಸಂಸ್ಥೆಗಳು. ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಇಂತಹ ಘಟನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ, ವಿದ್ಯಾರ್ಥಿಗಳ ಮೇಲೂ‌ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಇಂತಹ ಘಟನೆ ನಡೆಯದಂತೆ ಸಮರ್ಪಕ ಕ್ರಮ ತೆಗೆದುಕೊಂಡು ಮುನ್ನೆಚ್ಚರಿಕೆ‌ ವಹಿಸಿ ಮುನ್ನಡೆಯುವುದು ಅತ್ಯಗತ್ಯ ಎಂದು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕೆ.ಕುಂದರ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿವಿಯ ಯು.ಆರ್.ರಾವ್ ಸಭಾಂಗಣದಲ್ಲಿ ಗುರುವಾರ  ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಎಂಬ ವಿಷಯದಲ್ಲಿ  ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ‌ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಾಬಲ್ಯವನ್ನು ಮೆರೆದಿದ್ದಾರೆ. ಮಹಿಳೆಯ‌ರಿಗೆ ಆಗುವ ಅನ್ಯಾಯ, ಸುರಕ್ಷತೆಗೆ ಸಂಬಂಧಿಸಿದಂತೆ‌ ಹಲವು ಕಾನೂನು ಕ್ರಮಗಳನ್ನು ರೂಪಿಸಲಾಗಿದ್ದು,  ಈ ಬಗ್ಗೆ ಎಲ್ಲರಿಗೂ ತಿಳಿಯ ಪಡಿಸುವ ಕಾರ್ಯ ಆಗಬೇಕಿದೆ. ಅಲ್ಲದೆ ಕಾನೂನು ಇದೆ ಎಂದು ಅದರ ದುರುಪಯೋಗವೂ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ‌ ಮಂಗಳೂರು ‌ವಿವಿ‌ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ‌ ಭದ್ರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ‌ಈಗಾಗಲೇ ಕ್ಯಾಂಪಸ್ ನ ಪ್ರತಿಯೊಂದು‌ ಕಡೆಯೂ ಸಿ.ಸಿ.ಕ್ಯಾಮರಾ ಅಳವಡಿಸಲಾಗುತ್ತಿದ್ದು ಅಲ್ಲದೆ ಪ್ರತಿ ಬ್ಲಾಕ್ ನಲ್ಲೂ ಲೇಡಿಸ್ ರೂಮ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಹೆಚ್ಚೆಚ್ಚು‌ ಅರಿವನ್ನು ಮೂಡಿಸುವ ಇಂತಹ ಕಾರ್ಯಾಗಾರವು ಎಲ್ಲಾ ಘಟಕ ಕಾಲೇಜುಗಳಲ್ಲಿಯೂ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡೀಡ್ಸ್ ನಿರ್ದೇಶಕಿ ಮರ್ಲಿನ್ ಮ್ಯಾಟೀಸ್ ಭಾಗವಹಿಸಿದ್ದರು. ಸಮಾರಂಭದಲ್ಲಿ‌ ಮಂಗಳೂರು‌ ‌ವಿವಿ ಮಹಿಳಾ ಅಧ್ಯಯನ ‌ಕೇಂದ್ರದ ನಿರ್ದೇಶಕಿ ಡಾ.ಅನಿತಾ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರೀತಿ‌ ಕೀರ್ತಿ‌ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News