ಫೋಟೊ ತೆಗೆದ ಬಾಲಕನಿಗೆ ಮನೆಮಂದಿ ಎದುರಲ್ಲೇ ಥಳಿಸಿದ ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ: ಆರೋಪ

Update: 2020-02-14 08:53 GMT

ಬಜ್ಪೆ: ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಾಲಕನೊಬ್ಬನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಘಟನೆ‌ ಬುಧವಾರ ರಾತ್ರಿ ನಡೆದಿದೆ. ಮಂಜೇಶ್ವರ ಸಮೀಪದ ಮಚ್ಚಂಪಾಡಿಯ ದಿ. ಹನೀಫ್ ಎಂಬವರ ಪುತ್ರ ಅನಸ್ (17) ಹಲ್ಲೆಗೊಳಗಾದ ಬಾಲಕ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ತನ್ನ ಅಣ್ಣ ಹಾರಿಸ್‌ ದುಬೈಗೆ ತೆರಳುತ್ತಿದ್ದ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿಯುತ್ತಿದ್ದಾಗ ಅಲ್ಲಿಗೆ ಧಾವಿಸಿ ಬಂದ ಭದ್ರತಾ ಸಿಬ್ಬಂದಿ ಇಲ್ಲಿ ಅನಸ್‌ ಬಳಿಯಿದ್ದ ಮೊಬೈಲನ್ನು ಬಲವಂತವಾಗಿ ಕಿತ್ತು ಅದರಲ್ಲಿದ್ದ ಫೋಟೊಗಳನ್ನು‌ ಅಳಿಸಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಫೋಟೊವನ್ನು ಅಳಿಸಿ ಹಾಕಿದ್ದು ಯಾಕೆ ಎಂದು ಅನಸ್‌ ಪ್ರಶ್ನಿಸಿದ್ದರಿಂದ ಕೋಪಗೊಂಡ ಸಿಬ್ಬಂದಿ ಅನಸ್‌ನ ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು,  ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ನಾಲ್ಕೈದು ಸಿಬ್ಬಂದಿ ಬಾಲಕನ ಮೇಲೆ ಆತನ ತಾಯಿ ಮತ್ತು ಸಹೋದರ, ಸಹೋದರಿಯರ ಎದುರಲ್ಲೇ ಅಮಾನುಷವಾಗಿ ಹಲ್ಲೆ‌ ನಡೆಸಿದ್ದಾರೆ. ತಾಯಿ, ಸಹೋದರಿಯರು ಹಲ್ಲೆ ನಡೆಸದಂತೆ ಗೋಗರೆದರೂ ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಲ್ಲೆ ನಡೆಸಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಈ ಬಗ್ಗೆ "ವಾರ್ತಾಭಾರತಿ" ಯ ಜೊತೆ ಮಾತನಾಡಿದ ಬಾಲಕ ಅನಸ್ , "ಬುಧವಾರ ರಾತ್ರಿ ಸುಮಾರು 10 ಗಂಟೆಗೆ‌‌ ನನ್ನ ಅಣ್ಣ ಹಾರಿಸ್‌ ದುಬೈಗೆ ತೆರಳಲು ವಿಮಾನ ನಿಲ್ದಾಣದೊಳಗೆ ಪ್ರವೇಶಿಸುವ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದೆ. ಅಷ್ಟರಲ್ಲಿ ಅಲ್ಲಿದ್ದ ಐದಾರು ಮಂದಿ ಭದ್ರತಾ ಸಿಬ್ಬಂದಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ಫೋಟೊ ಡಿಲೀಟ್ ಮಾಡಿದ್ದಾರೆ. ಅದನ್ನು ಆಕ್ಷೇಪಿಸಿದ್ದಕ್ಕೆ ಕಾಲರ್ ಪಟ್ಟಿ ಹಿಡಿದಿದ್ದಾರೆ. ಆವಾಗ ನನ್ನ ತಾಯಿ ಮತ್ತು ಮೂವರು ಸಹೋದರಿಯರೂ ಇದ್ದರು. 15ರ ಹರೆಯದ ನನ್ನ‌ ತಮ್ಮ ಕೂಡ ಇದ್ದ. ಅವರೆಲ್ಲಾ ಬೊಬ್ಬಿಟ್ಟು ಬಿಟ್ಟು ಬಿಡುವಂತೆ ಕೇಳಿಕೊಂಡರೂ ಬೆನ್ನಟ್ಟಿ ಹೊಡೆದರು. ತಮ್ಮ ಅರ್ಫಾದ್‌ ಗೂ ಹಲ್ಲೆ ನಡೆಸಿದರು. ಬಳಿಕ ಬಜ್ಪೆ ಪೊಲೀಸರನ್ನು ಕರೆಸಿ ನನ್ನನ್ನು ಅವರಿಗೆ ಹಸ್ತಾಂತರಿಸಿದರು. ಅಲ್ಲಿ ತಪ್ಪೊಪ್ಪಿಕೊಂಡ ಬಳಿಕ ಬಿಟ್ಟುಬಿಟ್ಟರು" ಎಂದಿದ್ದಾರೆ.

"ಗೊತ್ತಿಲ್ಲದೆ ನಾನು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದೆ. ಅದನ್ನು ಸಮಾಧಾನದಿಂದ ಹೇಳಿದ್ದರೆ ನಾನೇ ಅಳಿಸಿ ಹಾಕಿತ್ತಿದ್ದೆ" ಎಂದು ಅನಸ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News