ಸಿಎಎ ಪ್ರತಿಭಟನಾಕಾರರಿಂದ ನಷ್ಟ ವಸೂಲಿ ನೋಟಿಸಿಗೆ ಹೈಕೋರ್ಟ್ ತಡೆ

Update: 2020-02-14 15:39 GMT

ಅಲಹಾಬಾದ್,ಫೆ.14: ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿ.20ರಂದು ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಆಸ್ತಿಗೆ ಉಂಟಾದ ನಷ್ಟವನ್ನು ಭರಿಸುವಂತೆ ಸೂಚಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಸ್ಥಳೀಯ ನಿವಾಸಿ ಮುಹಮ್ಮದ್ ಫೈಝಾನ್‌ಗೆ ಜಾರಿಗೊಳಿಸಿದ್ದ ನೋಟಿಸಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ.

 ನಷ್ಟ ವಸೂಲಿ ನೋಟಿಸ್‌ನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಫೈಝಾನ್ ಪರ ವಕೀಲರು,ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸುವಂತಿಲ್ಲ. ’ಕ್ಲೇಮ್ಸ್ ಕಮಿಷನರ್’ ಆಗಿ ಉಚ್ಚ ನ್ಯಾಯಾಲಯದ ಹಾಲಿ/ನಿವೃತ್ತ ನ್ಯಾಯಾಧೀಶರು ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮಾತ್ರ ಇಂತಹ ಆದೇಶಗಳನ್ನು ಹೊರಡಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ ಎಂದು ವಾದಿಸಿದ್ದರು.

ಉತ್ತರ ಪ್ರದೇಶದಾದ್ಯಂತ ಪ್ರತಿಭಟನಾಕಾರರಿಗೆ ಜಾರಿಗೊಳಿಸಲಾಗಿರುವ ನಷ್ಟ ವಸೂಲಿ ನೋಟಿಸ್‌ಗಳ ಪೈಕಿ ಹೆಚ್ಚಿನವುಗಳನ್ನು ಸ್ಥಳೀಯ ಆಡಳಿತಾಧಿಕಾರಿಗಳು ಹೊರಡಿಸಿರುವ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್‌ನ ಶುಕ್ರವಾರದ ಆದೇಶವು ಮಹತ್ವವನ್ನು ಪಡೆದುಕೊಂಡಿದೆ.

ಒಂದು ತಿಂಗಳೊಳಗೆ ಪ್ರಕರಣದಲ್ಲಿ ಪ್ರತಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

ಡಿಸೆಂಬರ್ ಪ್ರತಿಭಟನೆಗಳಲ್ಲಿ ಕನಿಷ್ಠ 1.9 ಕೋ.ರೂ.ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ 295 ಜನರಿಗೆ ಸರಕಾರವು ವಸೂಲಿ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News