ಪುಲ್ವಾಮ ದಾಳಿಯ ದಿನ ಪ್ರಧಾನಿಯ ‘ಡಿಸ್ಕವರಿ’ ಚಾನೆಲ್ ವಿಡಿಯೋ ವಿವಾದ
ಹೊಸದಿಲ್ಲಿ, ಫೆ. 14: ಪುಲ್ವಾಮ ಆತ್ಮಾಹುತಿ ಬಾಂಬ್ ದಾಳಿ ನಡೆದು ಇಂದಿಗೆ ಒಂದು ವರ್ಷ ಸಂದಿದೆ. ಪುಲ್ವಾಮ ದಾಳಿ ನಡೆದ ದಿನ 'ಡಿಸ್ಕವರಿ' ಚಾನೆಲ್ ಗಾಗಿ ವಿಡಿಯೋ ಶೂಟಿಂಗ್ ಒಂದರಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ವಿಚಾರ ಭಾರೀ ಟೀಕೆಗೆ ಗುರಿಯಾಗಿತ್ತು. ಡಿಸ್ಕವರಿ ಚಾನೆಲ್ 2019ರ ಜುಲೈಯಲ್ಲಿ ಪ್ರಸಾರ ಮಾಡಿದ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಪುಲ್ವಾಮ ದಾಳಿ ನಡೆದ ದಿನದಂದು ಈ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು.
“40 ಸಿಆರ್‌ಪಿಎಫ್ ಯೋಧರು ಮೃತಪಟ್ಟಾಗ ಪ್ರಧಾನಿ ಮೋದಿ ಚಿತ್ರೀಕರಣದಲ್ಲಿ ಖುಷಿ ಪಡುತ್ತಿದ್ದರು. ಪುಲ್ವಾಮಾದ ಭೀಕರ ದಾಳಿಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರೂ ಪ್ರಧಾನಿ ಶೂಟಿಂಗ್ ಮುಂದುವರಿಸಲು ಸೂಚಿಸಿದ್ದರು. ಅವರು ಎಷ್ಟೊಂದು ನಿರ್ಲಕ್ಷ ತೋರಿದ್ದಾರೆ ಎಂಬುದು ಟ್ರೈಲರ್‌ನಲ್ಲಿ ಅವರ ನಗೆಯಿಂದಲೇ ತಿಳಿಯುತ್ತದೆ” ಎಂದು ಕಾಂಗ್ರೆಸ್ ಟೀಕಿಸಿತ್ತು.
ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಪ್ರಧಾನಿ ಕಚೇರಿ, ಫೆ.14ರಂದು ಪ್ರಧಾನಿ ಉತ್ತರಾಖಂಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದರು. ಆಗ ಮಳೆ ಸುರಿದ ಕಾರಣ ಅವರು ರ್ಯಾಲಿ ಮುಗಿಸಿ ಮಧ್ಯಾಹ್ನ ಜಿಮ್ ಕಾರ್ಬೆಟ್ ಅರಣ್ಯದಲ್ಲಿ 3 ಗಂಟೆ ತಂಗಿದ್ದರು. ಮಧ್ಯಾಹ್ನದ ಬಳಿಕ ಹುಲಿ ಸಫಾರಿಯಲ್ಲೂ ಪಾಲ್ಗೊಂಡಿದ್ದರು. ಆದರೆ ಪುಲ್ವಾಮಾ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆಯೇ ರುದ್ರಾಪುರಕ್ಕೆ ನೀಡಬೇಕಿದ್ದ ಭೇಟಿಯನ್ನು ರದ್ದುಗೊಳಿಸಿ ದಿಲ್ಲಿಗೆ ವಾಪಸಾಗಿದ್ದಾರೆ ಎಂದು ತಿಳಿಸಿತ್ತು.