‘ಡೈಮಂಡ್ ಪ್ರಿನ್ಸೆಸ್’ ಹಡಗಿನಿಂದ ಹೊರ ಬಂದ ವಯೋ ವೃದ್ಧರು

Update: 2020-02-14 16:36 GMT

ಯೊಕೊಹಾಮ (ಜಪಾನ್), ಫೆ. 14: ಜಪಾನ್‌ನ ಯೊಕೊಹಾಮದಲ್ಲಿ ದಿಗ್ಬಂಧನದಲ್ಲಿ ಇರಿಸಲ್ಪಟ್ಟಿರುವ ‘ಡೈಮಂಡ್ ಪ್ರಿನ್ಸೆಸ್’ ಪ್ರವಾಸಿ ಹಡಗಿನಲ್ಲಿರುವ ಕೊರೋನವೈರಸ್ ಸೋಂಕು ತಗಲಿರದ ಪ್ರಯಾಣಿಕರಿಗೆ ಸರಕಾರವೇ ಸೂಚಿಸಿರುವ ವಾಸ್ತವ್ಯಗಳಿಗೆ ಹೋಗಲು ಅನುಮತಿ ನೀಡಲಾಗಿದೆ.

 80 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ವಾಸ್ತವ್ಯಗಳಿಗೆ ಸ್ಥಳಾಂತರಿಸಲು ಸರಕಾರ ಈಗಾಗಲೇ ಅಂಗೀಕಾರ ನೀಡಿದೆ. ಕಿಟಿಕಿಯಿರದ ಒಳ ಕ್ಯಾಬಿನ್‌ಗಳಲ್ಲಿರುವ ವೃದ್ಧರಿಗೂ ಭೂಮಿಯ ಮೇಲಿನ ವಾಸ್ತವ್ಯ ಕೋಣೆಗಳಿಗೆ ಸ್ಥಳಾಂತರಿಸಲು ಅವಕಾಶವಿದೆ.

ಆದರೆ, ನೂತನ ಕೊರೋನವೈರಸ್ ಸೋಂಕು ತಗಲಿರದ ಪ್ರವಾಸಿಗರಿಗೆ ಮಾತ್ರ ಈ ಅವಕಾಶ ಲಭಿಸುತ್ತದೆ. ಈಗಾಗಲೇ ಹಡಗಿನಲ್ಲಿರುವ 200ಕ್ಕೂ ಅಧಿಕ ಪ್ರವಾಸಿಗರಿಗೆ ಸೋಂಕು ತಗಲಿದೆ.

  ಈ ಪ್ರಯಾಣಿಕರ ಮೊದಲ ಗುಂಪು ಶುಕ್ರವಾರ ಅಪರಾಹ್ನ ಬೃಹತ್ ಹಡಗಿನಿಂದ ಹೊರ ಹೋಗಿದೆ. ಕಪ್ಪು ಗಾಜುಗಳಿಂದ ಮುಚ್ಚಿದ ಬಸ್‌ಗಳಲ್ಲಿ ಅವರನ್ನು ಸಾಗಿಸಲಾಗಿದೆ. ಆ ಬಸ್‌ಗಳ ಚಾಲಕರು ಅಡಿಯಿಂದ ಮುಡಿಯನ್ನು ಸಂಪೂರ್ಣವಾಗಿ ಮುಚ್ಚುವ ದಿರಿಸನ್ನು ಧರಿಸಿದ್ದಾರೆ.

ಈಗಾಗಲೇ 11 ಮಂದಿ ಹೊರಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೂ ಹೆಚ್ಚು ಮಂದಿ ಹೊರಡುತ್ತಾರೆಯೇ ಎನ್ನುವುದನ್ನು ತಿಳಿಸಲು ಅವರು ನಿರಾಕರಿಸಿದರು.

ಸುಮಾರು 3,700ಕ್ಕಿಂತಲೂ ಹೆಚ್ಚು ಪ್ರವಾಸಿಗರನ್ನು ಒಳಗೊಂಡ ಹಡಗು ಕಳೆದ ವಾರ ಜಪಾನ್‌ಗೆ ಬಂದಿತ್ತು. ಅಂದಿನಿಂದ ಅದು ದಿಗ್ಬಂಧನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News