ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ, ಆನಂದ್ ತೇಲ್ತುಂಬ್ಡೆ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

Update: 2020-02-14 17:25 GMT

ಮುಂಬೈ, ಫೆ. 14: ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಗಳಾದ ಗೌತಮ್ ನವ್ಲಾಖ ಹಾಗೂ ಆನಂದ್ ತೇಲ್ತುಂಬ್ಡೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

ಆದರೆ, ಅವರಿಗೆ ಸುಪ್ರೀಂ ಕೋರ್ಟ್ ಸಂಪರ್ಕಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದೆ. ಇಬ್ಬರಿಗೂ ಬಂಧನದಿಂದ ನಾಲ್ಕು ವಾರಗಳ ಮಧ್ಯಂತರ ರಕ್ಷಣೆಯನ್ನು ನ್ಯಾಯಮೂರ್ತಿ ಪ್ರಕಾಶ್ ನಾಯ್ಕಾ ವಿಸ್ತರಿಸಿದ್ದಾರೆ. 2019 ನವೆಂಬರ್ 12ರಂದು ನಿರೀಕ್ಷಣಾ ಜಾಮೀನನ್ನು ಪುಣೆಯ ಯುಎಪಿಎಎ ನ್ಯಾಯಾಲಯ ತಿರಸ್ಕರಿಸಿದ ಬಳಿಕ ನವ್ಲಾಕ್ ಅವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

 ತೇಲ್ತುಂಬ್ಡೆ ಅವರು ನಿರೀಕ್ಷಣಾ ಜಾಮೀನು ಕೋರಿ 2019 ಫೆಬ್ರವರಿಯಲ್ಲಿ ಇದೇ ನ್ಯಾಯಾಲಯ ಸಂಪರ್ಕಿಸಿದ್ದರು. ಸ್ಥಳೀಯ ಬಿಲ್ಡರ್ ತುಷಾರ್ ದಾಮ್‌ಗುಡೆ ದಾಖಲಿಸಿದ ದೂರಿನ ಆಧಾರದಲ್ಲಿ ಪುಣೆಯ ವಿಶ್ರಮ್‌ಬಾಗ್ ಪೊಲೀಸ್ ಠಾಣೆಯಲ್ಲಿ 2018 ಜನವರಿ 8ರಂದು ಪ್ರಕರಣ ದಾಖಲಿಸಲಾಗಿತ್ತು. 2017 ಡಿಸೆಂಬರ್ 31ರಂದು ಪುಣೆಯ ಶನಿವಾರ್ ವಾಡಾದಲ್ಲಿ ನಡೆದ ಎಲ್ಗಾರ್ ಪರಿಷತ್‌ನಲ್ಲಿ ಪ್ರಚೋದಕ ಹಾಡು, ನಾಟಕ ಹಾಗೂ ಭಾಷಣಗಳನ್ನು ಪ್ರಸ್ತುತಪಡಿಸುವ ಮೂಲಕ ಸಿಪಿಐ (ಮಾವೋವಾದಿ) ಹಾಗೂ ಕಬೀರ್ ಮಂಚ್‌ನ ಸದಸ್ಯರು ದ್ವೇಷ ಹರಡಿದ್ದಾರೆ. ಇದು ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ದಾಮ್‌ಗುಡೆ ಮನವಿಯಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News