ಬರೋಡವನ್ನು ಮಣಿಸಿದ ಕರ್ನಾಟಕ: ಕ್ವಾರ್ಟರ್ ಫೈನಲ್‌ಗೆ ಕರುಣ್ ನಾಯರ್ ತಂಡ

Update: 2020-02-14 18:05 GMT

ಬೆಂಗಳೂರು, ಫೆ.14: ಬರೋಡ ವಿರುದ್ಧ ರಣಜಿ ಟ್ರೋಫಿ 9ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ 8 ವಿಕೆಟ್‌ಗಳ ಜಯ ಗಳಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

    ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾಗಿರುವ ಶುಕ್ರವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 149 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ 44.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿತು.

ನಾಯಕ ಕರುಣ್ ನಾಯರ್ ಔಟಾಗದೆ 71 ರನ್(126 ಎಸೆತ, 7ಬೌಂಡರಿ) ಮತ್ತು ಕೃಷ್ಣ ಮೂರ್ತಿ ಸಿದ್ಧಾರ್ಥ್ ಔಟಾಗದೆ 29 ರನ್(68ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ನಾಲ್ಕು ದಿನಗಳ ಆಟ ಮೂರೇ ದಿನಗಳಲ್ಲಿ ಕೊನೆಗೊಂಡಿದೆ.

ಟೀ ವಿರಾಮದ ಬಳಿಕ ಕರ್ನಾಟಕ 40 ನಿಮಿಷಗಳಲ್ಲಿ ಗೆಲುವಿನ ವಿಧಿ ವಿಧಾನವನ್ನು ಪೂರೈಸಿತು. ಈ ಗೆಲುವಿನೊಂದಿಗೆ ಕರ್ನಾಟಕ 6 ಅಂಕಗಳನ್ನು ಪಡೆದಿದೆ.

ಎರಡನೇ ದಿನದಾಟದಂತ್ಯಕ್ಕೆ ಬರೋಡ ಎರಡನೇ ಇನಿಂಗ್ಸ್‌ನಲ್ಲಿ 67 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸುವುದರೊಂದಿಗೆ 60 ರನ್‌ಗಳ ಮುನ್ನಡೆ ಸಾಧಿಸಿತ್ತು.ಅಭಿಮನ್ಯು ರಜಪೂತ್ 31 ಮತ್ತು ಪಾರ್ಥ ಕೊಹ್ಲಿ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

    

 ಬರೋಡ ಶುಕ್ರವಾರ ಆಟ ಮುಂದುವರಿಸಿ ಈ ಮೊತ್ತಕ್ಕೆ 88 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು. ಪ್ರಸಿದ್ಧ ಕೃಷ್ಣ (45ಕ್ಕೆ 4), ರೋನಿತ್ ಮೋರೆ (68ಕ್ಕೆ 3), ಕೃಷ್ಣಪ್ಪ ಗೌತಮ್ (99ಕ್ಕೆ 2) ಮತ್ತು ಅಭಿಮನ್ಯು ಮಿಥುನ್(43ಕ್ಕೆ 1) ದಾಳಿಗೆ ಸಿಲುಕಿದ ಬರೋಡ ತಂಡ ಬೇಗನೇ ತನ್ನ ಆಟವನ್ನು ಮುಗಿಸಿತು. ರಜಪೂತ್ ಮತ್ತು ಪಾರ್ಥ್ ಕೊಹ್ಲಿ ಎರಡನೇ ದಿನದ ಆಟ ಮುಂದುವರಿಸಿ 6ನೇ ವಿಕೆಟ್ ಜೊತೆಯಾಟದಲ್ಲಿ ತಂಡದ ಸ್ಕೋರ್‌ನ್ನು 240ಕ್ಕೆ ಏರಿಸಿದರು. ರಜಪೂತ್ ಅರ್ಧಶತಕ(52) ದಾಖಲಿಸಿ ಮೋರೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ಕ್ರೀಸ್‌ಗೆ ಆಗಮಿಸಿದ ಭಾರ್ಗವ ಭಟ್ 6 ರನ್ ಗಳಿಸಿ ಗೌತಮ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ವಾಪಸಾದರು. ಶುಐಬ್ ಸೋಪಾರಿಯಾ 4 ರನ್ ಗಳಿಸಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಸಮರ್ಥ್‌ಗೆ ಕ್ಯಾಚ್ ನೀಡಿದರು. ಏಕಾಂಗಿ ಹೋರಾಟ ನಡೆಸುತ್ತಿದ್ದ ಪಾರ್ಥ್ ಕೊಹ್ಲಿ 42 ರನ್(88ಎ, 3ಬೌ,1ಸಿ) ಗಳಿಸಿದರು. ಅವರನ್ನು ಮಿಥುನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಾಬಾಶಾಫಿ ಪಠಾಣ್ ಖಾತೆ ತೆರೆಯದೆ ನಿರ್ಗಮಿಸಿದ್ದರೂ ಕೊನೆಯ ವಿಕೆಟ್‌ಗೆ ವಿರಾಜ್ ಭೋಸ್ಲೆಗೆ ಸಾಥ್ ನೀಡಿದರು. ಇವರ ಜೊತೆಯಾಟದಲ್ಲಿ 16 ರನ್‌ಬಂತು. ವಿರಾಜ್ 16 ರನ್(19ಎ, 2ಬೌ) ಗಳಿಸಿ ಅಜೇಯರಾಗಿ ಉಳಿದರು. ಕರ್ನಾಟಕ ತಂಡ ಎರಡನೇ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ 6 ರನ್ ಗಳಿಸಿ ಭಾರ್ಗವ್ ಭಟ್ ಎಸೆತದಲ್ಲಿ ಪ್ರತ್ಯೂಷ್ ಕುಮಾರ್‌ಗೆ ಕ್ಯಾಚ್ ನೀಡಿದರು. ಅವರು ಒಂದು ಬಾರಿ ಸಿಕ್ಸರ್ ಎತ್ತಿದರು. ಇನ್ನೊಂದು ಯತ್ನದಲ್ಲಿ ಎಡವಿದರು. ಆಗ ತಂಡದ ಸ್ಕೋರ್ 5.3 ಓವರ್‌ಗಳಲ್ಲಿ 14 ಆಗಿತ್ತು. 22ನೇ ಓವರ್‌ನ ಮೊದಲ ಎಸೆತದಲ್ಲಿ ರವಿಕುಮಾರ್ ಸಮರ್ಥ್ (25) ಅವರು ಭಾರ್ಗವ್ ಭಟ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಕರುಣ್ ನಾಯರ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಮುರಿಯದ ಜೊತೆಯಾಟದಲ್ಲಿ 92 ರನ್ ಜಮೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬರೋಡದ ಭಾರ್ಗವ್ ಭಟ್ 62ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News