ಅಂತಿಮ-8ರ ಹಂತಕ್ಕೆ ತಲುಪಿದ ಪಶ್ಚಿಮ ಬಂಗಾಳ

Update: 2020-02-14 18:26 GMT

ಪಾಟಿಯಾಲ, ಫೆ.14: ಎಡಗೈ ಸ್ಪಿನ್ನರ್ ಶಹಝಾದ್ ಅಹ್ಮದ್ ಅವರ ಆಕರ್ಷಕ ಬೌಲಿಂಗ್(11-101)ನೆರವಿನಿಂದ ಬಂಗಾಳ ತಂಡ ಪಂಜಾಬ್ ತಂಡವನ್ನು 48 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ಈ ವರ್ಷದ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ. ಪ್ರವಾಸಿ ಬಂಗಾಳ ತಂಡ 9 ವಿಕೆಟ್‌ಗಳ ನಷ್ಟಕ್ಕೆ 199 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿ ನಿನ್ನೆಯ ಸ್ಕೋರ್‌ಗೆ ಮೂರು ರನ್ ಸೇರಿಸಿ ಎರಡನೇ ಇನಿಂಗ್ಸ್ ನಲ್ಲಿ 202 ರನ್‌ಗೆ ಆಲೌಟಾಯಿತು. ಪಂಜಾಬ್ ಗೆಲುವಿಗೆ 190 ರನ್ ಗುರಿ ನೀಡಿತು. ಬಂಗಾಳದ ಹೊಸ ಚೆಂಡಿನ ಬೌಲರ್‌ಗಳು ಬೆಳಗ್ಗಿನ ಅವಧಿಯಲ್ಲಿ ದಿಟ್ಟ ಪ್ರದರ್ಶನ ನೀಡಿದ್ದು, ಆಫ್ ಸ್ಟಂಪ್ ಲೈನ್‌ಗೆ ಗುರಿ ಮಾಡಿ ನಿರಂತರ ಬೌಲಿಂಗ್ ದಾಳಿ ನಡೆಸಿದರು. ಓಪನರ್ ಅಭಿಜೀತ್ ಗರ್ಗ್ ವಿಕೆಟನ್ನು ಕಬಳಿಸಿದ ಆಕಾಶ್ ದೀಪ್ ಮೊದಲ ಓವರ್‌ನಲ್ಲಿ ಯಶಸ್ಸು ಪಡೆದರು. ಆ ಬಳಿಕ ಶರದ್ ಲುಂಬಾ ವಿಕೆಟನ್ನು ಪಡೆದರು. ಸ್ಪಿನ್ನರ್‌ಗಳು ಪಂಜಾಬ್‌ನ ಮಿನಿ ಕುಸಿತಕ್ಕೆ ಕಾರಣರಾದರು. ಆಗ ಪಂಜಾಬ್‌ನ ಸ್ಕೋರ್ 37ಕ್ಕೆ5. ಅನ್ಮೋಲ್ ಮಲ್ಹೋತ್ರಾ ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ರಮಣ್‌ದೀಪ್ ಸಿಂಗ್ ಆರನೇ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಭೋಜನ ವಿರಾಮದ ಬಳಿಕ ಶಹಬಾಝ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಶಹಬಾಝ್ ಅವರು ಅಭಿಷೇಕ್ ಗುಪ್ತಾರನ್ನು ಚುರುಕಿನ ರಿಟರ್ನ್ ಕ್ಯಾಚ್‌ನಿಂದ ಪೆವಿಲಿಯನ್‌ಗೆ ಕಳುಹಿಸಿದರು. ಇದು ಪಂದ್ಯದಲ್ಲಿ ಶಹಬಾಝ್ ಪಡೆದ 10ನೇ ವಿಕೆಟ್ ಆಗಿದೆ. ಸಿಂಗ್ ಔಟಾಗದೆ 69 ರನ್ ಗಳಿಸಿದರು. ಪಂಜಾಬ್ 141 ರನ್‌ಗೆ ಆಲೌಟಾಗಿ ತನ್ನ ಹೋರಾಟ ಮುಗಿಸಿತು. ಬಂಗಾಳ 2006-07ರಲ್ಲಿ ಕೊನೆಯ ಹಾಗೂ ಸತತ ಎರಡನೇ ಬಾರಿ ರಣಜಿ ಟ್ರೋಫಿಯಲ್ಲಿ ಫೈನಲ್ ತಲುಪಿತ್ತು. ಬಳಿಕ ಅದು ಮುಂಬೈಗೆ ಶರಣಾಗಿ ಪ್ರಶಸ್ತಿ ವಂಚಿತವಾಗಿತ್ತು. 2005-06ರಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದ್ದಾಗ ಉತ್ತರಪ್ರದೇಶಕ್ಕೆ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News