ಸಂವಿಧಾನದ ವಿಶೇಷ ಚರ್ಚೆಯ ಹಿಂದೆ ಹಿಡನ್ ಅಜೆಂಡಾ: ಐವನ್ ಡಿಸೋಜ

Update: 2020-02-15 08:15 GMT

ಮಂಗಳೂರು, ಫೆ.15: ವಿಧಾನಸಭೆಯ 6ನೆ ಅಧಿವೇಶನದಲ್ಲಿ ಎರಡು ದಿನ ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಸುವುದಾಗಿ ಸ್ಪೀಕರ್ ಹೇಳಿದ್ದು, ಇದರ ಹಿಂದೆ ಹಿಡನ್ ಅಜೆಂಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಸಿಎಎ ಹಾಗೂ ಎನ್‌ಆರ್‌ಸಿಯನ್ನು ಸಮರ್ಥಿಸಲು ಈ ಚರ್ಚೆಗೆ ಮುಂದಾಗಿರುವಂತೆ ಭಾಸವಾಗುತ್ತಿದೆ. ಇಂತಹ ಚರ್ಚೆ ಅಸಂವಿಧಾನಿಕ ಮಾತ್ರವಲ್ಲದೆ, ಸರಕಾರ ಹಾಗೂ ಸಭಾಧ್ಯಕ್ಷರ ಅಧಿಕಾರ ದುರುಪಯೋಗದ ಪರಮಾವಧಿ ಎಂದು ಅವರು ಟೀಕಿಸಿದರು.

ವಿಧಾನಸಭೆಯಲ್ಲಿ ವಿಶೇಷ ಚರ್ಚೆಗೆ ಸಂಬಂಧಿಸಿ ಬಿಎಸಿ (ಬಿಸಿನೆಸ್ ಸಲಹಾ ಸಮಿತಿ)ಯಲ್ಲಿ ಯಾವ ವಿಷಯ ಬಗ್ಗೆ ಚರ್ಚೆ ನಡೆಸಬೇಕು ಎಂಬ ನಿರ್ಧಾರವಾಗಬೇಕು. ಆದು ಆಗದೆ, ಈ ರೀತಿ ಚರ್ಚೆಗೆ ಅವಕಾಶವಿಲ್ಲ. ಚರ್ಚೆ ಮಾಡಲೇಬೇಕೆಂದರೆ 100 ವರ್ಷ ಹಳೆಯ ಐಪಿಸಿ, ಸಿಆರ್‌ಪಿಸಿ, ಭೂ ಕಂದಾಯ ಕಾಯ್ದೆ ಬಗ್ಗೆ ಚರ್ಚೆ ನಡೆಸಬಹುದು. ಅದು ಬಿಟ್ಟು ಸಂವಿಧಾನದ ಬಗ್ಗೆ ವಿಶೇಷ ಚರ್ಚೆ ಯಾಕಾಗಿ ಎಂದು ಪ್ರಶ್ನಿಸಿದ ಐವನ್, ಈ ಬಗ್ಗೆ ವಿಧಾನಸಭಾಧ್ಯಕ್ಷರು ಮರು ಪರಿಶೀಲನೆ ನಡೆಸಬೇಕು ಎಂದರು.

ಪ್ರತಿಭಟನೆ ವೇಳೆ 144 ಸೆಕ್ಷನ್ ಜಾರಿ ಮಾಡಿದ ಆಯುಕ್ತರ ಆದೇಶ ಕಾನೂನು ಬಾಹಿರ ಎಂಬ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ ಐವನ್ ಡಿಸೋಜ, ಮಂಗಳೂರಿನಲ್ಲೂ ಗೋಲಿಬಾರ್ ನಡೆದ ಹಿಂದಿನ ದಿನ ಸೆಕ್ಷನ್ ವಿಧಿಸಲಾಗಿತ್ತು. ಗೋಲಿಬಾರ್‌ನಲ್ಲಿ ಇಬ್ಬರು ಮೃತರಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಮೃತರ ಕುಟುಂಬಸ್ಥರಲ್ಲಿ ಕ್ಷಮೆ ಯಾಚಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರತಿಭಟಿಸುವುದಾಗಿ ಅವರು ಹೇಳಿದರು.

ಶಾಸಕ ಯು.ಟಿ.ಖಾದರ್ ಹಾಗೂ ಬೀದರ್ ಶಾಹೀನ್ ಶಾಲೆಯ ಮಕ್ಕಳು, ಪೋಷಕರ ಮೇಲೆ ದೇಶದ್ರೋಹದ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು, ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ನೆನಪು ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ, ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಕುರಿತಂತೆ ಪೊಲೀಸ್ ಅಧಿಕಾರಿಗಳ ಎದುರಲ್ಲೇ ನಾಟಕ ಪ್ರದರ್ಶನ ಮಾಡಿದ್ದನ್ನು ದೇಶದ್ರೋಹವಾಗಿ ಸ್ವಯಂಪ್ರೇರಿತ ಪ್ರಕರಣ ಯಾಕೆ ದಾಖಲಿಸಲಾಗಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ದ.ಕ. ಜಿಲ್ಲೆಗೆ ವಿಶೇಷ ಪ್ಯಾಕೇಜ್ ಏನು?

ಜಿಲ್ಲಾ ಉಸ್ತುವಾರಿ ಸಚಿವರು ದ.ಕ. ಜಿಲ್ಲೆಗೆ ವಿಶೇಷ ಪ್ಯಾಕೇಜ್ ಎಂದು ಹೇಳುತ್ತಿದ್ದಾರೆ. ಯಾವ ರೀತಿಯ ಪ್ಯಾಕೇಜ್ ಎಂಬುದನ್ನು ಅವರು ಹೇಳಲಿ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್‌ನಲ್ಲಿ ವಿಶೇಷ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬೇಕಾದರೆ ಎಲ್ಲಾ ಶಾಸಕರನ್ನು ಕರೆಸಿ ಯೋಜನೆ ತಯಾರಿಸಬೇಕು. ಬಜೆಟ್‌ನಲ್ಲಿ ಏನು ಚರ್ಚೆಯಾಗಬೇಕು ಎಂಬ ನಿರ್ಧಾರವಾಗಬೇಕು. ಹಾಗಾಗಿ ಉಸ್ತುವಾರಿ ಸಚಿವರು ತಕ್ಷಣ ಸಭೆ ಕರೆದು ಸಲಹೆ ಪಡೆಯಬೇಕು ಎಂದು ಐವನ್ ಡಿಸೋಜ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News