ಪದ್ಮಶ್ರೀ ಹಾಜಬ್ಬರ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

Update: 2020-02-15 12:28 GMT

ಕೊಣಾಜೆ: ಇಂದಿನ ಕಾಲದಲ್ಲಿ ಸಮಾಜದೊಂದಿಗೆ ಮನಸ್ಸುಗಳೂ ಪರಿವರ್ತನೆಯಾಗಿದೆ. ನನ್ನದು ನನಗೆ, ನಿನ್ನದೂ ನನಗೇ ಎನ್ನುವವರೇ ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ನಿನ್ನದೂ ನಿನಗೆ, ನನ್ನದೂ ನಿನಗೆ ಧ್ಯೇಯದೊಂದಿಗೆ ಸಮಾಜ ಸೇವೆಯ ಮೂಲಕ ಇಡೀ ಸಮಾಜಕ್ಕೆ ತನ್ನನ್ನು ಅರ್ಪನೆ ಮಾಡಿದ ಹರೇಕಳ ಹಾಜಬ್ಬರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಆರು ತಿಂಗಳ ಅವಧಿಯಲ್ಲಿ ನಾನು ಪ್ರಥಮ ಬಾರಿ ಹಾಜಬ್ಬರನ್ನು ಭೇಟಿಯಾಗಿರುವುದು ನನ್ನ ಜೀವನದ ಮಹತ್ವದ ದಿನವಾಗಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಕರ್ನಾಟಕದ ಜನರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲು ನಾನಿಲ್ಲಿ ಬಂದಿದ್ದೇನೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು. 

ಅವರು ಹರೇಕಳ ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಶಾಲೆಗೆ ಶನಿವಾರದಂದು ಭೇಟಿಯಾಗಿ ಹರೇಕಳ ಹಾಜಬ್ಬರನ್ನು ಅಭಿನಂದಿಸಿ ಮಾತನಾಡಿದರು.

ಇಂದಿನ ಕಾಲದಲ್ಲಿ ಅದೆಷ್ಟೋ ಮಂದಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡು ವ್ಯವಹಾರ ಮಾಡಿಕೊಂಡಿರುವವನ್ನು ನಾವು ಶಿಕ್ಷಣ ತಜ್ಞ ಎಂದು ಕರೆಯುತ್ತೇವೆ. ಆದರೆ ನಾನು ಅನಕ್ಷರಕ್ಷನಾದರೂ ಊರಿನ ಜನ ಅಕ್ಷರಸ್ಥರಾಗಬೇಕೆನ್ನುವ ಆಸೆಯಿಂದ ಕಿತ್ತಲೆ ಮಾರುತ್ತಾ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರೇ ನೈಜವಾದ ಶಿಕ್ಷಣ ತಜ್ಞರಾಗಿದ್ದಾರೆ ಹಾಗೂ ಸಿನಿಮಾ ಪರದೆಯ ಹೀರೋಗಿಂತ ಜೀವನದ ನಿಜವಾದ ಹೀರೋ ಆಗಿದ್ದಾರೆ. ಶಾಲೆಯಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣ, ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ, ಆವರಣ ಗೋಡೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಹಾಜಬ್ಬರು ಇಟ್ಟಿದ್ದು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಮತ್ತು ವ್ಯವಸ್ಥೆಗಳನ್ನು ನೋಡಿಕೊಂಡು ಅವರ ಮನವಿಯನ್ನು ಖಂಡಿತವಾಗಿ ಪರಿಗಣಿಸುತ್ತೇನೆ ಎಂದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ರಾಯಭಾರಿಯಾಗಿದ್ದಾರೆ. ನಿಮ್ಮ ಫಲಿತಾಂಶ ಉತ್ತಮವಾಗಿ ಬಂದರೆ ಮುಂದಿನ ವರ್ಷ ಅಧಿಕ ಮಕ್ಕಳು ಇದೇ ಶಾಲೆಗೆ ಸೇರುತ್ತಾರೆ. ಎಸೆಸೆಲ್ಸಿ  ಪರೀಕ್ಷೆ ಎಂದರೆ ನೀವು ಭಯಪಡಬೇಡಿ. ನಿಮಗೆ ಪಿಯುಸಿ ಪ್ರಶ್ನೆ ಪತ್ರಿಕೆ ಖಂಡಿತಾ ಕೊಡುವುದಿಲ್ಲ, ಎಸೆಸೆಲ್ಸಿ ಪ್ರಶ್ನೆ ಪತ್ರಿಕೆಯನ್ನೇ ಕೊಡುತ್ತೇವೆ. ಶಾಲೆಗೆ ಉತ್ತಮವಾದ ರಿಸಲ್ಟ್ ತರುವ ಮೂಲಕ ಅಕ್ಷರ ಸಂತ ಹರೇಕಳ ಹಾಜಬ್ಬರ ಕನಸನ್ನು ನನಸಾಗಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯು.ಟ.ಖಾದರ್ ಅವರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಯಾಗಿದ್ದುಕೊಂಡು ಹಾಜಬ್ಬರವರು ಶಾಲೆಯನ್ನು ಕಟ್ಟಿಬೆಳೆಸಿದ ರೀತಿ ಅದ್ಬುತವಾದದ್ದು. ಇದೀಗ ಪದ್ಮಶ್ರೀ ಗೌರವದೊಂದಿಗೆ ಇಡೀ ನಾಡಿಗೆ ಗೌರವ ತಂದುಕೊಟ್ಟಿದ್ದಾರೆ ಎಂದರು.

ಹರೇಕಳ ಹಾಜಬ್ಬ ಅವರು ಈ ಸಂದರ್ಭದಲ್ಲಿ ಮಾತನಾಡಿ, ಈ ಹಳ್ಳಿಯ ವ್ಯಕ್ತಿಗೆ ಪದ್ಮಶ್ರೀ ಬಂದಿರುವುದು, ಶಿಕ್ಷಣ ಸಚಿವರು ಬಂದು ಗೌರವಿಸಿರುವುದು ನನ್ನ ಪುಣ್ಯವಾಗಿದೆ. ಇದಕ್ಕೆಲ್ಲಾ ಮಾಧ್ಯಮದವರೇ ಕಾರಣರಾಗಿದ್ದಾರೆ ಎಂದರು. 

ಸಮಾರಂಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ಖಾದರ್ ಅವರನ್ನು ಹರೇಕಳ ಹಾಜಬ್ಬ ಅವರು ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕ್ಯಾ.ಗಣೇಶ್ ಕಾರ್ಣಿಕ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಪಂಚಾಯಿತಿ ಅಧ್ಯಕ್ಷ ಅನಿತಾ ಡಿಸೋಜ, ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಾಲ್ಟರ್ ಡಿಮೆಲ್ಲೋ, ಜಿಲ್ಲಾ ದೈಹಿಕ ಶಿಕ್ಷಣ ಸಮಿತಿಯ ರಘುನಾಥ್, ಪ್ರಭಾರ ಬಿ.ಒ. ಪ್ರಶಾಂತ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಸಾದ್ ರೈ ಕಲ್ಲಿಮಾರ್, ಮುಸ್ತಫಾ ಹರೇಕಳ,ಪಂಚಾಯಿತಿ ಸದಸ್ಯರಾದ ಬಶೀರ್, ಬದ್ರುದ್ದೀನ್, ಸತ್ತಾರ್, ಕಲ್ಯಾಣಿ, ರಾಜಗೋಪಾಲ ರೈ, ಪ್ರಭಾರ ಮುಖ್ಯ ಶಿಕ್ಷಕಿ ರೂಪ ಹಾಗೂ ಶಾಲಾ ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು. 

'ಚಪ್ಪಾಳೆ ಚಪ್ಪಾಳೆ ಹಾಜಬ್ಬರಿಗೊಂದು ಚಪ್ಪಾಳೆ'
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ ಮಾಡುತ್ತಿದ್ದ ಕ್ಷಣದಲ್ಲಿ ಹಾಜಬ್ಬರ ಶಾಲೆಯ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ, ಚಪ್ಪಾಳೆ ಚಪ್ಪಾಳೆ ಶಿಕ್ಷಣ ಕ್ಷೇತ್ರದ ಸಾಧಕ ಹಾಜಬ್ಬರಿಗೊಂದು ಚಪ್ಪಾಳೆ ಎಂದು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಗಮನಸೆಳೆದರು. ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಜೊತೆ ಸಂವಾದವನ್ನೂ ನಡೆಸಿ ಹತ್ತನೇ ತರಗಗತಿಯ ಪರೀಕ್ಷೆಯನ್ನು ಎದುರಿಸುವ ಬಗ್ಗೆ ದೈರ್ಯ ತುಂಬಿದರು.

'ಸರ್ಕಾರಿ ಶಾಲೆಯ ಹಿಂದಿನ ಗರಿಮೆ ಪುನರ್ ನಿರ್ಮಾಣವಾಗಬೇಕು'
ಸರ್ಕಾರಿ ಶಾಲೆಯನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇಂದು ಒರ್ವ ಕೂಲಿ ಕಾರ್ಮಿಕ ಕೂಡಾ ತನ್ನ ಮಗನನ್ನು ಖಾಸಗಿ ಶಾಲೆಗೆ ಹಾಕಿ ತನ್ನ ದುಡಿಮೆಯ 40% ಹಣವನ್ನು ಶಿಕ್ಷಣಕ್ಕಾಗಿ ವ್ಯಯಿಸುವ ಪರಿಸ್ಥಿತಿ ಇದೆ. ಅದಕ್ಕಾಗಿ ಹಿಂದೆ ಸರ್ಕಾರಿ ಶಾಲೆಗೆ ಇದ್ದ ಗರಿಮೆ, ಮಹತ್ವವನ್ನು ಮತ್ತೆ ಇಂದು ಪುನರ್ ನಿರ್ಮಿಸಿ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಯೋಜನೆಗಳನ್ನು ರೂಪಿಸಿಕೊಳ್ಳಲಾಗುವುದು. ಶಿಕ್ಷಕರ ನೇಮಕಾತಿಗೂ ಶೀಘ್ರ ಕ್ರಮ ತೆಗೆದುಕೊಳ್ಳಲಾವುದು. ಎಸ್‍ಎಸ್‍ಎಲ್‍ಸಿಯಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಸಮಯ, ಸೂಕ್ತ ಜಾಗ ಸೇರಿಂದತೆ ಸಮರ್ಪಕ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಶಿಕ್ಷಣ ಸಚಿವರು ಉತ್ತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News