ಮಂಗಳೂರು: ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2020-02-15 13:06 GMT

ಮಂಗಳೂರು, ಫೆ.15: ಕೇಂದ್ರ ಸರಕಾರವು ಏಕಾಏಕಿ ಅಡುಗೆ ಅನಿಲ ದರ ಏರಿಸಿರುವುದನ್ನು ಖಂಡಿಸಿ, ಕೇಂದ್ರದ ದಲಿತ ವಿರೋಧಿ ನೀತಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರು ತಾಪಂ ಕಟ್ಟಡದ ಎದುರು ಶನಿವಾರ ಪ್ರತಿಭಟನೆ ನಡೆಯಿತು. ರಸ್ತೆಯಲ್ಲಿ ಒಲೆ ಹಾಕಿ ಕಾಫಿ ತಯಾರಿಸಿ, ಕುಡಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ದೇಶದಲ್ಲಿ ಜನಸಾಮಾನ್ಯರು ಬದುಕುವಂತಹ ವಾತಾವರಣ ಇಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದ್ದು, ಯುವಕರು ತತ್ತರಿಸಿದ್ದಾರೆ. ಇಂತಹ ಸ್ಥಿತಿಯಲ್ಲೇ ಅಡುಗೆ ಅನಿಲ ದರ ಏರಿಕೆ ಮಾಡಿರುವುದು ಅಕ್ಷಮ್ಯ ಎಂದು ಟೀಕಿಸಿದರು.

ಕೇಂದ್ರ ಸರಕಾರವು ದೇಶದ ಜನರ ಭಾವನೆಗಳನ್ನು ಕೆರಳಿಸುತ್ತಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನ್ಯಾಯ ಸಿಕ್ಕಿಲ್ಲ. ತನಿಖೆ ಹೇಗೆ ನಡೆದಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಕ್ಕೆ ಅವರನ್ನು ಭಯೋತ್ಪಾದಕ ರೀತಿಯಲ್ಲಿ ಕಾಣಲಾಗುತ್ತಿದೆ. ದೇಶದಲ್ಲಿ ಕೇಂದ್ರದ ನೀತಿ, ಕಾಯ್ದೆ, ಪ್ರಧಾನಿ, ಮಂತ್ರಿಗಳನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಿಸುವುದಕ್ಕೆ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹರೀಶ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.

ಕಡಬದಲ್ಲಿ ಇತ್ತೀಚೆಗೆ ನಡೆದ ಕಾರ್ ಅಪಘಾತ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣರಾದ ಕಾರಿನ ಬಗ್ಗೆ ಆರು ತಿಂಗಳು ಗತಿಸಿದರೂ ಮಾಹಿತಿ ಸಿಕ್ಕಿರಲಿಲ್ಲ. ಈಗ ಆರೋಪಿಯು ಪತ್ತೆಯಾಗಿದ್ದು, ಪುತ್ತೂರಿನ ಬಿಜೆಪಿ ಮುಖಂಡನದ್ದೇ ಆ ಕಾರು ಆಗಿತ್ತು. ಆತ ಕಾನೂನು ಗೌರವಿಸಬೇಕಾಗಿತ್ತು. ಬಿಜೆಪಿಯವರು ಮಹಿಳೆಯರಿಗೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಇದರಿಂದ ತಿಳಿಯುತ್ತದೆ. ರಾಜ್ಯ ಸಚಿವರೊಬ್ಬರ ಪುತ್ರ ನಡೆಸಿದ ಅಪಘಾತದಲ್ಲೂ ಅಮಾಯಕರು ಮೃತಪಟ್ಟಿದ್ದಾರೆ. ಪ್ರಕರಣ ಮರೆಮಾಚುತ್ತಿರುವುದು ನೋವಿನ ವಿಚಾರ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಅಡುಗೆ ಅನಿಲ ದರವನ್ನು ಏಕಾಏಕಿ 145 ರೂ. ಏರಿಕೆ ಮಾಡಿರುವುದು ಬಿಜೆಪಿಯ ಇತಿಹಾಸದಲ್ಲಿ ಮಾತ್ರ. ಇತ್ತೀಚೆಗೆ ಅಡುಗೆ ಅನಿಲ ಸಬ್ಸಿಡಿಯನ್ನು ದೇಶದ ಎಲ್ಲ ಜನತೆಯೂ ತ್ಯಾಗ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ದರ್ಬಾರಿನಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಇದು ಬಿಜೆಪಿ ಆಡಳಿತದ ಕಾರ್ಯ ವೈಖರಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಆಡಳಿತ ಇದ್ದಾಗ ವಿಶ್ವವೇ ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತಗೊಂಡಿದ್ದರೆ, ದೇಶದಲ್ಲಿ ಯಾವುದೇ ಬ್ಯಾಂಕ್ ದಿವಾಳಿಯಾಗಿರಲಿಲ್ಲ. ದೇಶ ಆರ್ಥಿಕವಾಗಿ ಸದೃಢಗೊಂಡಿತ್ತು. ಬಿಜೆಪಿ ನೇತೃತ್ವದ ಸರಕಾರ ಬಂದ ಮೇಲೆಯೇ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಸಮಸ್ಯೆಗಳಿಗೂ ಬಿಜೆಪಿಯೇ ಕಾರಣವಾಗಿದೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರೈತರ ಬೆಳೆ ದರ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರಕಾರವು ಭರವಸೆ ಕೊಟ್ಟಿತ್ತು. ರೈತರು, ಬಡವರು, ದೀನ-ದಲಿತರನ್ನು ಕೇಂದ್ರ ಕಡೆಗಣಿಸುತ್ತಿದೆ. ಬಿಜೆಪಿ ವೈಫಲ್ಯದಿಂದಾಗಿ ಜನತೆ ತತ್ತರಿಸಿದ್ದಾರೆ. ಪೆಟ್ರೋಲ್, ಡೀಸೆಲ್ ದರ ದಿನೇದಿನೆ ಏರಿಕೆ ಆಗುತ್ತಿದೆ. ಇದರಿಂದ ದಿನಬಳಕೆ ವಸ್ತುಗಳ ದರವೂ ಏರಿಕೆಯಾಗುತ್ತಿದೆ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ. ದೇಶದ ಖಜಾನೆ ಖಾಲಿಯಾಗಿದೆ. ಅದಾನಿಯಂತಹ ಉದ್ಯಮಿಗಳಿಗೆ ಏರ್‌ಪೋರ್ಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಎಲ್‌ಐಸಿಯ ಶೇರುಗಳನ್ನು ಕೇಂದ್ರ ಮಾರಾಟಕ್ಕೆ ಮುಂದಾಗಿದೆ. ಆಡಳಿತ ನಡೆಸುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೇಂದ್ರ ಸರಕಾರವು ಏನೇ ಮಾಡಿದರೂ ನಡೆಯುತ್ತೆ ಎನ್ನುವ ಅಹಂನಲ್ಲಿದೆ. ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದಿದ್ದರು. ದುರ್ಬಲರ ಮೇಲೆ ನೇರ ಟಾರ್ಗೆಟ್ ಇಟ್ಟುಕೊಂಡಿದ್ದರು. ಅಂಬೇಡ್ಕರ್ ಅವರ ಆಶಯವನ್ನು ಪರೋಕ್ಷವಾಗಿ ವಿರೋಧಿಸುತ್ತಿದ್ದರು. ಆದರೆ ಇಂದು ನೇರವಾಗಿ ಸಂವಿಧಾನ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದಿನಬಳಕೆ ವಸ್ತುಗಳ ದರ ವಿಪರೀತ ಏರಿಕೆ ಆಗುತ್ತಿದೆ. ದೇಶದ ಚರಿತ್ರೆಯಲ್ಲಿ ಹಣದುಬ್ಬರ ಪ್ರಮಾಣ ದಾಖಲೆಯಲ್ಲಿ ಹೆಚ್ಚಳಗೊಂಡಿದೆ. ಹಣದುಬ್ಬರವು ದೇಶ ದಿವಾಳಿಯಾಗುತ್ತಿರುವ ಮುನ್ಸೂಚನೆ ನೀಡುತ್ತಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಬೇಬಿ ಕುಂದರ್, ಅಬ್ಬಾಸ್ ಅಲಿ, ಶಾಲೆಟ್ ಪಿಂಟೊ, ಪದ್ಮನಾಭ ನರಿಂಗಾನ, ಯು.ಎಚ್.ಖಾಲೀದ್, ಸುದೀಪ್‌ಕುಮಾರ್ ಶೆಟ್ಟಿ, ವಿಶ್ವಾಸ್ ದಾಸ್, ಧನಂಜಯ ಮಟ್ಟು, ಶಾಹುಲ್ ಹಮೀದ್, ಜೆಸಿಂತಾ ಆಲ್ಫ್ರೆಡ್, ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಶಂಸುದ್ದೀನ್ ಕುದ್ರೋಳಿ, ಲ್ಯಾನ್ಸಿ ಪಿಂಟೊ, ಹಿಲ್ಡಾ ಆಳ್ವ, ಅದ್ದು ಕೃಷ್ಣಾಪುರ, ಯು.ಟಿ. ತೌಸೀಫ್ ಪುತ್ತೂರು, ಅಪ್ಪಿ, ನಮಿತಾ ಡಿ. ರಾವ್, ಎನ್.ಎಸ್.ಕರೀಂ, ಮಲ್ಲಿಕಾ, ಸುರೇಖಾ ಚಂದ್ರಹಾಸ, ನಿರಜ್‌ಪಾಲ್, ಗೀತಾ ಪ್ರವೀಣ್, ನಾಗೇಂದ್ರಕುಮಾರ್, ವಸಂತ್ ಬರ್ನಾಡ್, ಕವಿತಾ ವಾಸು, ರತಿಕಲಾ, ಟಿ.ಕೆ. ಶೈಲಜಾ, ಚಂದ್ರಕಲಾ, ದೀಪಕ್ ಪೂಜಾರಿ, ಸದಾಶಿವ ಅಮೀನ್, ಟಿ.ಕೆ. ಸುಧೀರ್, ಮುದ್ರಿಸ್ ಕುದ್ರೋಳಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News