ಮಂಗಳೂರು: 14 ವರ್ಷಗಳ ಬಳಿಕ ಒಂದಾದ ತಾಯಿ ಮಕ್ಕಳು

Update: 2020-02-15 15:48 GMT

ಮಂಗಳೂರು, ಫೆ.15: ನಗರದ ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾದ ‘ವೈಟ್ ಡೊವ್ಸ್’ನ ಪ್ರಮುಖರ ಸತತ ಪರಿಶ್ರಮದ ಫಲವಾಗಿ ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಜೊತೆಗೂಡಿದ ಅಪೂರ್ವ ಕ್ಷಣಕ್ಕೆ ಶನಿವಾರ ಮಂಗಳೂರು ಸಾಕ್ಷಿಯಾಯಿತು.
ತಮಿಳುನಾಡಿನ ಕೊರ್ಟಂಪೇಟೆಯ ಲೂರ್ದ್ ಮೇರಿ ಸತತ 14 ವರ್ಷಗಳ ಆಶ್ರಮವಾಸದ ಬಳಿಕ ತನ್ನ ಕುಟುಂಬದ ಸದಸ್ಯರನ್ನು ಸೇರಿಕೊಂಡ ಅದೃಷ್ಟಶಾಲಿ.

ಘಟನೆಯ ಹಿನ್ನೆಲೆ: ಲೂರ್ದ್ ಮೇರಿ 14 ವರ್ಷಗಳ ಹಿಂದೆ ತಮಿಳುನಾಡಿನ ತನ್ನ ಹುಟ್ಟೂರಿನಿಂದ ನಾಪತ್ತೆಯಾಗಿದ್ದರು. 10 ವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಆಕೆಯನ್ನು ಪಾಂಡೇಶ್ವರ ಪೊಲೀಸರು ವೈಟ್ ಡೋವ್ಸ್ ಆಶ್ರಮಕ್ಕೆ ಕರೆ ತಂದು ಸೇರಿಸಿದ್ದರು. ಮಂಗಳೂರಿಗೆ ಬರುವುದಕ್ಕೆ ಮುಂಚಿನ 4 ವರ್ಷ ಕಾಲ ಆಕೆ ಎಲ್ಲಿದ್ದರು ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಆಕೆಗೆ ತಮಿಳು ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿಲ್ಲ. ತನ್ನ ಹೆಸರು ಲೂರ್ದ್ ಮೇರಿ ಎಂದು ಮಾತ್ರ ತಿಳಿಸಿದ್ದರು. ಆಶ್ರಮದಲ್ಲಿ ಇರುವವರಿಗೂ ತಮಿಳು ಗೊತ್ತಿಲ್ಲದ ಕಾರಣ ಆಕೆಯ ಜತೆ ಹೆಚ್ಚು ಮಾತನಾಡಲು ಯಾರೂ ಮುಂದಾಗಿರಲಿಲ್ಲ. ವೈಟ್ ಡೊವ್ಸ್‌ನಲ್ಲಿ ಆಶ್ರಮವಾಸಿಯಾದ ಬಳಿಕ ಅವರಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.

ಒಂದು ವಾರದ ಹಿಂದೆ ತಮಿಳುನಾಡಿನ ಕ್ರೈಸ್ತ ಧರ್ಮಗುರು ರೆ. ಫಾ. ಜಾನ್ ಲೆವಿಸ್ ವೈಟ್ ಡೊವ್ಸ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಆಶ್ರಮದ ಮ್ಯಾನೇಜರ್ ಜೆರಾಲ್ಡ್ ಫೆರ್ನಾಂಡಿಸ್ ಆಶ್ರಮದಲ್ಲಿರುವ ತಮಿಳು ನಿವಾಸಿಗಳ ಜತೆ ತಮಿಳು ಭಾಷೆಯಲ್ಲಿ ಮಾತನಾಡಿ ಅವರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳುವಂತೆ ಮನವಿ ಮಾಡಿದ್ದರು. ಆವಾಗ ಲೂರ್ದ್ ಮೇರಿ ತಾನು ಹುಟ್ಟಿ ಬೆಳೆದ ಊರು ತಮಿಳುನಾಡಿನ ಕೊರ್ಟಂಪೇಟೆ ಎಂದು ಫಾ.ಜಾನ್‌ಗೆ ತಿಳಿಸಿದ್ದರು.

ಫಾ.ಜಾನ್ ಲೆವಿಸ್ ಕೊರ್ಟಂಪೇಟೆಯ ಚರ್ಚ್‌ನ ಧರ್ಮಗುರುಗಳನ್ನು ಸಂಪರ್ಕಿಸಿ ಮಂಗಳೂರಿನಲ್ಲಿ ಪತ್ತೆಯಾದ ಲೂರ್ದ್ ಮೇರಿಯ ಬಗ್ಗೆ ಚರ್ಚ್‌ನಲ್ಲಿ ಘೋಷಿಸುವ ವ್ಯವಸ್ಥೆ ಮಾಡಿದ್ದರು. ಆಗ ಮೇರಿ ಕುಟುಂಬದ ಬಗ್ಗೆ ಮಾಹಿತಿ ಇದ್ದ ವ್ಯಕ್ತಿಯೊಬ್ಬರು ಕೊಯಮುತ್ತೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸು ಕಲಿಯುತ್ತಿರುವ ಮೇರಿಯ ಪುತ್ರಿ ಜ್ಞಾನ ಅಂತೋನಿಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಆಕೆ ತನ್ನ ಹಿರಿಯ ಸಹೋದರ, ವೃತ್ತಿಯಲ್ಲಿ ಚಾಲಕನಾಗಿರುವ ಕುಳಂದೈಯಾಸು ಅವರನ್ನು ಸಂಪರ್ಕಿಸಿ ತಾಯಿ ಲೂರ್ದ್ ಮೇರಿ ಮಂಗಳೂರಿನಲ್ಲಿರುವ ಬಗ್ಗೆ ತಿಳಿಸಿದ್ದಳು.

ಅದರಂತೆ ಶನಿವಾರ ಮಂಗಳೂರಿಗೆ ಬಂದ ಕುಟುಂಬಸ್ಥರು ಲೂರ್ದ್ ಮೇರಿಯನ್ನು ಕಂಡು ಪುಳಕಿತರಾದರು. ತಾಯಿ-ಮಕ್ಕಳ ಸಮಾಗಮ ಕಂಡು ವೈಟ್ ಡೊವ್ಸ್ ಸಂಸ್ಥೆಯ ಮುಖ್ಯಸ್ಥೆ ಕೋರಿನ್ ರಸ್ಕಿನ್ಹಾ ಮತ್ತಿತರರು ಕೂಡ ಸಂತಸಗೊಂಡರು. ಅಂತೂ ವೈಟ್ ಡೊವ್ಸ್ ಮೂಲಕ 14 ವರ್ಷಗಳ ಬಳಿಕ ತಾಯಿಯನ್ನು ಕಂಡ ಮಕ್ಕಳಾದ ಜ್ಞಾನ ಅಂತೋನಿ ಮತ್ತು ಕುಳಂದೈಯಾಸು ಊರಿಗೆ ಕರೆದೊಯ್ದರು.

ಪುತ್ರ ಕುಳಂದೈಯಾಸುಗೆ 9 ವರ್ಷ ಪ್ರಾಯವಾದಾಗ ತಾಯಿ ಮೇರಿ ಕಾಣೆಯಾಗಿದ್ದರು. ತೃತೀಯ ಮಗು (ಪುತ್ರಿ) ರಾಕಿಯೆಲ್ ಲಿಸಿಯಾ ಈಗ ವಸತಿ ಶಾಲೆಯೊಂದರಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಹುಟ್ಟಿದ ಕೆಲವೇ ತಿಂಗಳಲ್ಲಿ ಮೇರಿ ನಾಪತ್ತೆಯಾಗಿದ್ದರು. ದಿಢೀರನೆ ಕಾಣೆಯಾದ ಮೇರಿ ಇಂದಲ್ಲ ನಾಳೆ ಬರುತ್ತಾಳೆ ಎಂದು ಪತ್ನಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ ಪತಿ ಜಾನ್ಸನ್ ಕೆಲವು ವರ್ಷಗಳ ಬಳಿಕ ಸಾವನ್ನಪ್ಪಿದ್ದರು. ಅವರು ಸಾಯುವ ವೇಳೆಗೆ ಪಡಿತರ ಚೀಟಿಯಿಂದ ಆಕೆಯ ಹೆಸರನ್ನು ತೆಗೆದು ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News