ಉಡುಪಿ: ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಮೂಲಕ 2639 ಮಂದಿಗೆ ತರಬೇತಿ, 588 ಮಂದಿಗೆ ಉದ್ಯೋಗ

Update: 2020-02-15 17:05 GMT
ಬಾಸ್ಕರ್ ಎ.ಅಮೀನ್

ಉಡುಪಿ, ಫೆ.15: ಯುವ ಜನತೆಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಸದಾಶಯದೊಂದಿಗೆ ಕರ್ನಾಟಕ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ’ಯಡಿ, ಉಡುಪಿ ಜಿಲ್ಲೆಯಲ್ಲಿ ಈವರೆಗೆ 2639 ಮಂದಿಗೆ ವಿವಿಧ ಕೌಶಲ್ಯ ತರಬೇತಿ ನೀಡಿದ್ದು, 588 ಮಂದಿಗೆ ಉದ್ಯೋಗ ಒದಗಿಸುವಲ್ಲಿ ನೆರವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಕೇಂದ್ರದ ಮೂಲಕ ಯುವ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿನಲ್ಲಿ ಉಡುಪಿಯ ಮೂರು ತಾಲೂಕುಗಳಲ್ಲಿ ಆಯೋಜಿಸಿದ್ದು, ಕುಂದಾಪುರದ ಕೋಟೇಶ್ವರ ಸರಕಾರಿ ಕಾಲೇಜ್‌ನಿಂದ-385, ಉಡುಪಿ ಐಟಿಐಯಿಂದ-287 ಹಾಗೂ ಕಾರ್ಕಳದ ಮಂಜುನಾಥ ಪೈ ಕಾಲೇಜಿನಲ್ಲಿ 343 ವಿದ್ಯಾರ್ಥಿಗಳು ಯುವ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿಯನ್ನು ಪಡೆದುಕೊಂಡಿದ್ದಾರೆ

ಉದ್ಯೋಗಕಾಂಕ್ಷಿಗಳಿಗೆ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ ಸುಮಾರು 2017 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು 588 ಜನರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದೊಂದಿಗೆ ಸುಮಾರು 13 ಕಾಲೇಜುಗಳಲ್ಲಿ ವೃತ್ತಿಮಾರ್ಗದರ್ಶನ ತರಬೇತಿಯನ್ನು ನೀಡಲಾಗಿದ್ದು, ಉಡುಪಿ ಮತ್ತು ಕಾರ್ಕಳದಲ್ಲಿ 118 ಮಕ್ಕಳಿಗೆ ಬ್ಯಾಂಕ್ ಕೋಚಿಂಗ್ ತರಬೇತಿ ಯನ್ನು ನೀಡಲಾಗಿದೆ. ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ 438 ಮಕ್ಕಳಿಗೆ ಕಂಪ್ಯೂಟರ್ ತರಬೇತಿಯನ್ನು ಹಾಗೂ 1,068 ವಿದ್ಯಾರ್ಥಿಗಳಿಗೆ ಸಮಾಲೋಚನೆ ತರಬೇತಿಯನ್ನು ನೀಡಲಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳು ಸರಕಾರದ ಮಾನ್ಯತೆಯನ್ನು ಪಡೆದಿರಬೇಕು. ಹಾಗೂ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡ ಅ್ಯರ್ಥಿಗೆ ಕಂಪೆನಿಯೇ ತರಬೇತಿ ನೀಡಿ ಉದ್ಯೋಗವನ್ನು ನೀಡಬೇಕು. ಕಂಪೆನಿಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ವೆಚ್ಚವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯೇ ಭರಿಸುತ್ತದೆ.

ರಾಜ್ಯದಲ್ಲಿ ಪ್ರತೀ ವರ್ಷ ಎರಡು ಲಕ್ಷ ಯುವಕ-ಯುವತಿಯರಿಗೆ ವೃತ್ತಿ ತರಬೇತಿ ನೀಡಿ ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸುವ ಈ ಯೋಜನೆಯ ಮುಖಾಂತರ ಶೇ.70ರಷ್ಟು ಯುವ ಜನತೆಗೆ ವೃತ್ತಿ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡುವ ಅಥವಾ ಸ್ವಯಂ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಅಲ್ಲದೇ ಯುವ ಜನತೆಯಲ್ಲಿರುವ ಪೂರ್ವ ಕಲಿಕೆಯನ್ನು ಗುರುತಿಸಿ ಅವರಿಗೆ ಸಮಕಾಲಿನ ಮಾನವ ಸಂಪನ್ಮೂಲಕ್ಕಿರಬೇಕಾದ ಮೃದು/ಲೌಕಿಕ ಕೌಶಲ್ಯಗಳಾದ ಶೀಘ್ರ ಗ್ರಹಿಕೆ, ವಾಕ್‌ಚಾತುರ್ಯ ಸ್ಯತೆ ಹಾಗೂ ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗೆ ಅನುಗುಣವಾಗಿ ಬೇಕಾಗುವ ಭಾಷಾ ಜ್ಞಾನ, ಮುಂತಾದವುಗಳ ಬಗ್ಗೆ ಕೌಶಲ್ಯ ತರಬೇತಿಯನ್ನು ನೀಡಿ ರಾಜ್ಯದ ಯುವ ಜನರು ಉದ್ಯೋಗ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಕೌಶಲ್ಯಾಭಿವೃಧ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಯಲ್ಲಿ ನೂತನವಾಗಿ ಚಾಲನೆ ನೀಡಿರುವ -www.kaushalkar.com- ಅಂತರ್ಜಾಲ ತಾಣದಲ್ಲಿ 9,83,876 ಲಕ್ಷ ಅ್ಯರ್ಥಿಗಳು ಹಾಗೂ 2873 ತರಬೇತುದಾರರು ಮತ್ತು 4672 ತರಬೇತಿ ಕೇಂದ್ರಗಳು ನೊಂದಾಯಿಸಿ ಕೊಂಡಿವೆ. ಪ್ರಸ್ತುತ 77,200 ಅಭ್ಯರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಿ ಕೊಂಡಿದ್ದು ಇನ್ನೂ ಹೆಚ್ಚು ಯುವಕ ಯುವತಿಯರು ಈ ಅಂತರ್ಜಾಲ ತಾಣದಲ್ಲಿ ನೋಂದಾಯಿಸಿಕೊಂಡು ಕೌಶಲ್ಯ ಅಭಿವೃದ್ದಿ ತರಬೇತಿ ಹೊಂದಿ, ಉದ್ಯೋಗಾವಕಾಶಗಳನ್ನು ಪಡೆದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳಿಗೆ ಪ್ರಾಥಮಿಕ ತರಗತಿಯಿಂದಲೇ ಕೌಶಲ್ಯ ತರಬೇತಿಯನ್ನು ಶಿಕ್ಷಕರೇ ನೀಡಬೇಕು. ಅನೇಕ ಉದ್ಯೋಗಕಾಂಕ್ಷಿಗಳು ಅಂಕಗಳಿದ್ದರೂ ಉದ್ಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ, ಸಂವಹನ ಕೌಶಲ್ಯ, ಸಂದರ್ಶನ, ಶಿಷ್ಟಾಚಾರ ಗಳು, ಭಾವನಾತ್ಮಕ ಬುದ್ಧಿವಂತಿಕೆ, ಉದ್ಯೋಗಾರ್ಹತಾ ಕೌಶಲ್ಯ, ಯೋಜನೆ ಮತ್ತು ಸಂಘಟನಾ ಕೌಶಲ್ಯ, ಹೊಂದಿಕೊಳ್ಳುವಿಕೆ, ತಂಡದೊಂದಿಗೆ ನಿರ್ವಹಣೆ, ರೆಸ್ಯೂಮ್ ತಯಾರಿಸುವುದು ಇತ್ಯಾದಿ ಕೌಶಲ್ಯ ಕಾರ್ಯಕ್ರಮಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ.

‘ಕೌಶಲ್ಯದ ತರಬೇತಿ ಇಲ್ಲದೆ ಉದ್ಯೋಗ ಗಿಟ್ಟಿಸಿಕೊಳ್ಳಲು ಈಗ ಕಷ್ಟವಿದೆ. ವಿದ್ಯಾರ್ಥಿಗಳಿಗೆ ಬರೀ ಅಂಕಪಟ್ಟಿ ಮಾತ್ರ ಮುಖ್ಯವಲ್ಲ. ಅದರ ಜೊತೆಗೆ ಸಂವಹನ ಕೌಶಲ್ಯ, ವ್ಯಕ್ತಿತ್ವ ಅಭಿವೃದ್ದಿ, ಭಾವನಾತ್ಮಕ ಬುದ್ದಿವಂತಿಕೆಯು ಮುಖ್ಯ.’ ಎನ್ನುತ್ತಾರೆ ಉಡುಪಿ ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಬಾಸ್ಕರ್ ಎ.ಅಮೀನ್.

ಕೌಶಲ್ಯಾಭಿವೃಧ್ದಿ ತರಬೇತಿಗೆ ನೊಂದಣಿಯಾಗಬೇಕಾದರೆ -www.kaushalkar.com- ಅಂತರ್ಜಾಲ ತಾಣದಲ್ಲಿ ಸ್ವವಿವರಗಳನ್ನು ಭರ್ತಿ ಮಾಡಿಕೊಂಡು ಕೌಶಲ್ಯ ತರಬೇತಿಗೆ ಆಯ್ಕೆಯಾಗಬಹುದು. ಜಿಲ್ಲೆಯಲ್ಲಿ ಕೌಶಲ್ಯಾಭಿವೃಧ್ದಿ ತರಬೇತಿ ಬಗ್ಗೆ ಮಾಹಿತಿಗಾಗಿ ದೂ.ಸಂ:0820-2574869 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News