ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಲು ಎಸ್‌ಐಒ ಆಗ್ರಹ

Update: 2020-02-15 17:53 GMT

ಮಂಗಳೂರು, ಫೆ.15: ಪಾವೂರು ಗ್ರಾಮದ ಕೆಳಗಿನ ಮಲಾರ್ ಎಂಬಲ್ಲಿ ಮದ್ರಸಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿ ಬಳಿಕ ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿರುವ ಘಟನೆಯು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಮತ್ತು ಖಂಡನೀಯ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ದ.ಕ. ಜಿಲ್ಲಾ ಘಟಕ ತಿಳಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐಒ ದ.ಕ. ಜಿಲ್ಲಾ ನಿಯೋಗವು ವಿದ್ಯಾರ್ಥಿನಿಯರು, ಪೋಷಕರು ಹಾಗೂ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿತು. ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲು ನಡೆದಿದೆ. ಈ ಘಟನೆಯ ಮೂಲಕ ಸ್ಥಳೀಯರ ಮಧ್ಯೆ ಇರುವ ಸೌಹಾರ್ದತೆಯನ್ನು ಕೆಡವಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಐಒ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಸತ್ತಾರ್ ಆಗ್ರಹಿಸಿದ್ದಾರೆ.

ಈ ಘಟನೆಯಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಅಮಾಯಕರೆಂದು ಬಿಂಬಿಸುವ ಯತ್ನವನ್ನು ಎಸ್‌ಐಒ ಖಂಡಿಸಿದೆ. ಘಟನೆಯನ್ನು ಅವಲೋಕಿಸಿದಾಗ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಭಾಸವಾಗುತ್ತಿದೆ. ಮದ್ರಸಾ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಸ್ಥಳೀಯ ಕೋಮು ಸಾಮರಸ್ಯವನ್ನು ಕದಡುವಂತಹ ಯೋಜನೆ ಇದಾಗಿದೆ. ಈ ಘಟನೆಯು ಗ್ರಾಮೀಣ ಪ್ರದೇಶದಲ್ಲಿರುವ ಶಾಲಾ-ಕಾಲೇಜು, ಮದ್ರಸಾ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಗ್ರಾಮಾಂತರ ಪ್ರದೇಶದಲ್ಲಿ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ಸಾರ್ವಜನಿಕರ ಮಧ್ಯೆ ಉಂಟಾಗಿರುವ ಭಯವನ್ನು ಹೋಗಲಾಡಿಸಬೇಕು ಎಂದು ಸಫ್ವಾನ್ ಸತ್ತಾರ್ ಒತ್ತಾಯಿಸಿದ್ದಾರೆ.

ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ರಿಝ್ವನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಆಶಿಕ್ ಹಶಾಶ್, ಉಳ್ಳಾಲ ಕಾರ್ಯದರ್ಶಿ ತಾಜುದ್ದೀನ್, ಜಮಾಅತೆ ಇಸ್ಲಾಮಿ ಹಿಂದ್‌ನ ಬದ್ರುದ್ದೀನ್ ಮಲಾರ್, ಮಹಿಳಾ ವಿಭಾಗದ ಝೀನತ್ ಹಸನ್, ಹಫ್ಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News