2ನೇ ಟ್ವೆಂಟಿ-20: ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್, ಸರಣಿ ಸಮಬಲ

Update: 2020-02-15 18:21 GMT

 ಡರ್ಬನ್, ಫೆ.15: ರನ್ ಹೊಳೆಗೆ ಸಾಕ್ಷಿಯಾದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ ಟಾಮ್ ಕರನ್ ಇಂಗ್ಲೆಂಡ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ರನ್‌ಗಳ ರೋಚಕ ಜಯ ತಂದುಕೊಟ್ಟರು. 400ಕ್ಕೂ ಅಧಿಕ ರನ್ ಹರಿದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಗೆಲ್ಲಲು 205 ರನ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 3 ರನ್ ಅಗತ್ಯವಿತ್ತು. ಸತತ ಎರಡು ಎಸೆತಗಳಲ್ಲಿ ಪ್ರಿಟೋರಿಯಸ್(25) ಹಾಗೂ ಜೊರ್ನ್ ಫೋರ್ಚುನ್(0)ವಿಕೆಟನ್ನು ಪಡೆದ ಕರನ್ ದಕ್ಷಿಣ ಆಫ್ರಿಕಾಕ್ಕೆ ಗೆಲುವು ನಿರಾಕರಿಸಿದರು. ಸರಣಿ ನಿರ್ಣಾಯಕ ಪಂದ್ಯ ರವಿವಾರ ಸೆಂಚೂರಿಯನ್‌ನಲ್ಲಿ ನಡೆಯಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತ್ತು. ಜೇಸನ್ ರಾಯ್(40)ಹಾಗೂ ಜಾನಿ ಬೈರ್‌ಸ್ಟೋವ್(35)ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್(ಔಟಾಗದೆ 47, 30 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ಆಲ್‌ರೌಂಡರ್ ಮೊಯಿನ್ ಅಲಿ(39 ರನ್, 11 ಎಸೆತ, 3 ಬೌಂಡರಿ, 4 ಸಿಕ್ಸರ್)ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಲು ನೆರವಾದರು.

ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ಆಕರ್ಷಕ ಅರ್ಧಶತಕ(65, 22 ಎಸೆತ, 2 ಬೌಂಡರಿ,8 ಸಿಕ್ಸರ್)ಸಿಡಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು.

ದಕ್ಷಿಣ ಆಫ್ರಿಕಾ 7ನೇ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಡಿಕಾಕ್ 7.5ನೇ ಓವರ್‌ನಲ್ಲಿ ವುಡ್ ಬೌಲಿಂಗ್‌ನಲ್ಲಿ ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಡಿಕಾಕ್ ಔಟಾದ ಬೆನ್ನಿಗೇ ಪಂದ್ಯ ಇಂಗ್ಲೆಂಡ್‌ನತ್ತ ವಾಲಿತು. ಕ್ರಿಸ್ ಜೋರ್ಡನ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿ ಆತಿಥೇಯರಿಗೆ ಶಾಕ್ ನೀಡಿದರು. ಮತ್ತೊಂದೆಡೆ ಔಟಾಗದೆ 43 ರನ್(26 ಎಸೆತ, 2 ಬೌಂಡರಿ, 3 ಸಿಕ್ಸರ್)ಗಳಿಸಿದ ವಾನ್‌ಡರ್ ಡುಸ್ಸಾನ್ ದಕ್ಷಿಣ ಆಫ್ರಿಕಾದ ಹೋರಾಟವನ್ನು ಕೊನೆಯ ಓವರ್ ತನಕ ಜಾರಿಯಲ್ಲಿರಿಸಿದರು. ಮೊದಲ ಪಂದ್ಯವನ್ನು 1 ರನ್‌ನಿಂದ ಗೆದ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು 15 ರನ್ ಅಗತ್ಯವಿತ್ತು. ಕರನ್ ಎಸೆದ ಮೊದಲ ಮೂರು ಎಸೆತಗಳಲ್ಲಿ ತಲಾ 1 ಸಿಕ್ಸರ್, ಬೌಂಡರಿ ಸಹಿತ 12 ರನ್ ಕಲೆ ಹಾಕಿದ ಪ್ರಿಟೋರಿಯಸ್ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಿದರು. ಕೊನೆಯ ಎರಡು ಎಸೆತಗಳಲ್ಲಿ 3 ರನ್ ಅಗತ್ಯವಿದ್ದಾಗ ಕರನ್ ಅವರು ಪ್ರಿಟೋರಿಯಸ್ ಹಾಗೂ ಫೂರ್ಚುನ್‌ರನ್ನು ಬೆನ್ನುಬೆನ್ನಿಗೆ ಔಟ್ ಮಾಡಿದರು. ದಕ್ಷಿಣ ಆಫ್ರಿಕಾ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 39 ರನ್ ಗಳಿಸಿ ಇಂಗ್ಲೆಂಡ್ ಸ್ಕೋರನ್ನು 200ರ ಗಡಿ ದಾಟಿಸಿದ ಮೊಯಿನ್ ಅಲಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News