ವೇಗದ ಟ್ವೆಂಟಿ-20-20 ಅರ್ಧಶತಕ ಸಿಡಿಸಿದ ದ.ಆಫ್ರಿಕಾದ ಮೊದಲ ಬ್ಯಾಟ್ಸ್ ಮನ್ ಡಿಕಾಕ್

Update: 2020-02-15 18:28 GMT

ಡರ್ಬನ್, ಫೆ.15: ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು. ಇಂಗ್ಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ 22 ಎಸೆತಗಳಲ್ಲಿ 65 ರನ್ ಗಳಿಸಿದ ಡಿಕಾಕ್ ಈ ಸಾಧನೆ ಮಾಡಿದರು. ಡಿಕಾಕ್ ಕೇವಲ 17 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್‌ಗಳ ಸಹಾಯದಿಂದ 50 ರನ್ ಪೂರೈಸಿದರು.

ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯವನ್ನು ಕೇವಲ 2 ರನ್‌ನಿಂದ ಸೋತ ಹಿನ್ನ್ನೆಲೆಯಲ್ಲಿ ಡಿಕಾಕ್ ಅರ್ಧಶತಕ ವ್ಯರ್ಥವಾಯಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 205 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ತನ್ನ ಹೋರಾಟ ಕೊನೆಗೊಳಿಸಿತು. ಡಿಕಾಕ್ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗಿದರು. ಡಿಕಾಕ್ ಹಾಗೂ ಎಬಿ ಡಿವಿಲಿಯರ್ಸ್ ಈ ಹಿಂದೆ ದಾಖಲೆ ನಿರ್ಮಿಸಿದ್ದರು. ಈ ಇಬ್ಬರು ಆಟಗಾರರು 2016ರಲ್ಲಿ ಎರಡು ಪ್ರತ್ಯೇಕ ಪಂದ್ಯದಲ್ಲಿ 21 ಎಸೆತಗಳಲ್ಲಿ 50 ರನ್ ಗಳಿಸಿದ್ದರು. 27ರ ಹರೆಯದ ಕುಕ್ ವೇಗದ ಅರ್ಧಶತಕ ಸಿಡಿಸಿದ ವಿಶ್ವದ ಆರನೇ ದಾಂಡಿಗ ಎನಿಸಿಕೊಂಡರು. ಭಾರತದ ಮಾಜಿ ಆಲ್‌ರೌಂಡರ್ ಯುವರಾಜ ಸಿಂಗ್ 2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ವೇಗದ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಮಿಝಾ ಹಸನ್ 2019ರಲ್ಲಿ ಲಕ್ಸೆಂಬರ್ಗ್‌ನಲ್ಲಿ 13 ಎಸೆತಗಳಲ್ಲಿ 50 ರನ್ ಗಳಿಸಿ 2ನೇ ಸ್ಥಾನ ಪಡೆದರು. ಕಾಲಿನ್ ಮುನ್ರೊ(14)ಮೂರನೇ ಸ್ಥಾನ ಪಡೆದರೆ, ಫೈಸಲ್ ಖಾನ್(15) ಹಾಗೂ ಶೈ ಹೋಪ್(16)ಆ ನಂತರದ ಸ್ಥಾನದಲ್ಲಿದ್ದಾರೆ.

ಐರ್ಲೆಂಡ್‌ನ ಪಾಲ್ ಸ್ಟೆರ್ಲಿಂಗ್, ನೆದರ್ಲೆಂಡ್‌ನ ಸ್ಟೀಫನ್ ಮೈಬರ್ಗ್ ಹಾಗೂ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಅವರು ಡಿಕಾಕ್‌ರೊಂದಿಗೆ ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ಈ ಎಲ್ಲ ಬ್ಯಾಟ್ಸ್ ಮನ್‌ಗಳು 50 ರನ್ ಪೂರೈಸಲು 17 ಎಸೆತಗಳನ್ನು ಎದುರಿಸಿದ್ದರು.

ಈಗ ದಕ್ಷಿಣ ಆಫ್ರಿಕಾದ ಸೀಮಿತ ಓವರ್ ಕ್ರಿಕೆಟ್‌ನ ನಾಯಕನಾಗಿರುವ ಡಿಕಾಕ್, ತನ್ನ ಟ್ವೆಂಟಿ-20 ವೃತ್ತಿಜೀವನದಲ್ಲಿ ಈತನಕ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ. 40 ಪಂದ್ಯಗಳಲ್ಲಿ ಒಟ್ಟು 1,114 ರನ್ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News