ಉಪ್ಪಿನಂಗಡಿ: ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಎಸ್ ಡಿ ಪಿ ಐ ಪ್ರತಿಭಟನೆ

Update: 2020-02-15 18:52 GMT

ಉಪ್ಪಿನಂಗಡಿ: ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಶೋಷಣೆಯ ಅಧಿಕಾರ ನಡೆಸುತ್ತಿದ್ದು, ಜನ ಸಾಮಾನ್ಯರ ಬಗ್ಗೆ ಈ ಸರಕಾರಕ್ಕೆ ಕಾಳಜಿಯಿಲ್ಲ. ಅಡುಗೆ ಅನಿಲ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ ಎಂದು ಎಸ್‍ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷ ಅಬ್ದುಲ್ ರಝಾಕ್ ಸೀಮಾ ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಉಪ್ಪಿನಂಗಡಿ ವಲಯದ ವತಿಯಿಂದ ಇಲ್ಲಿನ ಬಸ್ ನಿಲ್ದಾಣ ವೃತ್ತದ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದ ಬಳಿಕ ರಾಜ್ಯಾಂಗ ಹಾಗೂ ಕಾರ್ಯಾಂಗವನ್ನು ಸಂಪೂರ್ಣ ಕಡೆಗಣಿಸಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುವಂತಾಗಿದೆ. ನೋಟು ಬ್ಯಾನ್ ಮಾಡಿದ್ದರಿಂದ ದೇಶದ ಜನತೆ ತೊಂದರೆ ಅನುಭವಿಸುವಂತಾಯಿತು. ಜಿಎಸ್‍ಟಿ ಜಾರಿಯಿಂದಾಗಿ ಜನರ ಜೀವನವೇ ನರಕಸದೃಶ್ಯವಾಗಿದೆ. ವ್ಯಾಪಾರಿ ಮಳಿಗೆಗಳು ಬಾಗಿಲು ಮುಚ್ಚುವಂತಾಯಿತು. ಪೆಟ್ರೋಲ್, ಔಷಧಿ, ಅಡುಗೆ ಅನಿಲ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಬಡವರಿಗೆ ಅಡುಗೆ ಅನಿಲ ಸಂಪರ್ಕ ಕೊಟ್ಟರೆ ಸಾಲದು ಅವರಿಗೆ ಅಡುಗೆ ಅನಿಲ ತುಂಬಿಸುವ ಸಾಮಥ್ರ್ಯವನ್ನೂ ಭರಿಸುವಂತೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅಂದು ಯುಪಿಎ ಸರಕಾರ ಆಡಳಿತದಲ್ಲಿರುವಾಗ ಅಡುಗೆ ಅನಿಲ ದರ ಕೇವಲ 30 ರೂ. ಹೆಚ್ಚಳವಾಗಿರುವುದಕ್ಕೆ ಬೀದಿಗಿಳಿದು ಪ್ರತಿಭಟಿಸಿದ್ದ ಬಿಜೆಪಿಗರು ಇಂದು ತಮ್ಮದೇ ಸರಕಾರವಿರುವಾಗ ನೂರಾರು ರೂಪಾಯಿ ಅಡುಗೆ ಅನಿಲ ದರ ಏರಿಕೆಯಾಗುತ್ತಿದ್ದರೂ ಯಾಕೆ ಮೌನವಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಇಕ್ಬಾಲ್ ಕೆಂಪಿ, ವಲಯ ಕಾರ್ಯದರ್ಶಿ ಅಬ್ದುಲ್ಲಾ ಆದರ್ಶನಗರ, ಪ್ರಮುಖರಾದ ಮುಸ್ತಾಫ ಲತೀಫಿ, ರಫೀಕ್ ಕೊಡಿಪ್ಪಾಡಿ, ಸವಾದ್ ಅಗ್ನಾಡಿ, ಯೂಸುಫ್ ಬೇರಿಕೆ ಮತ್ತಿತರರು ಉಪಸ್ಥಿತರಿದ್ದರು.
ಎಸ್‍ಡಿಪಿಐ ವಲಯ ಸಮಿತಿ ಸದಸ್ಯ ಝಕಾರಿಯಾ ಕೊಡಿಪ್ಪಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News