ಉಳ್ಳಾಲ: ನೇತ್ರಾವತಿ ಸೇತುವೆ ಬಳಿ ತಂದೆ-ಮಗು ನಾಪತ್ತೆ

Update: 2020-02-16 13:27 GMT

ಮಂಗಳೂರು, ಫೆ.16: ಪಾವೂರು ಗುತ್ತು ನೇಮಕ್ಕೆ ಬಂದಿದ್ದ ತಂದೆ ಮತ್ತು ಮಗ ಶನಿವಾರ ತಡರಾತ್ರಿ ನಿಗೂಢವಾಗಿ ಕಾಣೆಯಾದ ಮತ್ತು ಅವರು ಚಲಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಘಟನೆ ರವಿವಾರ ಮುಂಜಾನೆ ನಡೆದಿದೆ.

ಮೂಲತಃ ಬಂಟ್ವಾಳ ತಾಲೂಕಿನ ನೆತ್ತಿಲ ಬಾಳಿಕೆ ನಿವಾಸಿಯಾಗಿರುವ ಗೋಪಾಲಕೃಷ್ಣ ರೈ (52) ಮತ್ತು ಅವರ ಮಗ ನಮೀಶ್ ರೈ (5) ಕಾಣೆಯಾದವರು. ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರನ್ನು ಕಂಕನಾಡಿ ನಗರ ಠಾಣೆಯ ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿ ಮೊಬೈಲ್, ಚಪ್ಪಲಿ ಹಾಗೂ ಡೆತ್‌ನೋಟ್ ಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಅದರಂತೆ ಕಾಣೆಯಾದ ತಂದೆ-ಮಗನ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ.

ಗೋಪಾಲಕೃಷ್ಣ ರೈ ಮುಂಬೈಯ ಮಿರರ್ ರಸ್ತೆಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದಾರೆ. ಇವರ ಪತ್ನಿ ಅಶ್ವಿನಿ ಜಿ. ರೈ ಖಾಸಗಿ ಫೈನಾನ್ಸ್‌ವೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಈ ದಂಪತಿಗೆ ನಮೀಶ್ ಏಕೈಕ ಮಗ.

ಪಾವೂರು, ಹರೇಕಳ, ಅಂಬ್ಲಮೊಗರು ಗ್ರಾಮಮಟ್ಟದಲ್ಲಿ ಪ್ರತೀ 5 ವರ್ಷಕ್ಕೊಮ್ಮೆ ಸಾಮೂಹಿಕ ನೇಮ ನಡೆಯುತ್ತದೆ. ಈ ಬಾರಿ ಪಾವೂರು ಗುತ್ತುವಿನಲ್ಲಿ ಫೆ.15 ಮತ್ತು 16ರಂದು ನೇಮ ಆಯೋಜಿಸಲಾಗಿತ್ತು. ಅಶ್ವಿನಿ ರೈ ಅವರು ಪಾವೂರುಗುತ್ತು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅದರಂತೆ ಗೋಪಾಲ ಕೃಷ್ಣ ರೈ ಮತ್ತು ಅಶ್ವಿನಿ ರೈ ಪುತ್ರ ನಮೀಶ್ ರೈ ಜೊತೆಗೂಡಿ ಪಾವೂರು ಗುತ್ತುವಿನಲ್ಲಿರುವ ಕುಟುಂಬಸ್ಥರ ಮನೆಯಲ್ಲಿ ನಡೆಯುವ ನೇಮೋತ್ಸವಕ್ಕಾಗಿ ಆಗಮಿಸಿದ್ದರು.

ಶನಿವಾರ ರಾತ್ರಿ ಸುಮಾರು 1:30ಕ್ಕೆ ಗೋಪಾಲಕೃಷ್ಣ ರೈ ತನ್ನ ಮಗ ನಮೀಶ್‌ನನ್ನು ಕರೆದುಕೊಂಡು ಕುಟುಂಬಸ್ಥರ ಮನೆಗೆ ತೆರಳುವುದಾಗಿ ನೇಮೋತ್ಸವ ನಡೆಯುವ ಸ್ಥಳದಿಂದ ಹೊರಟಿದ್ದರು. ಬಳಿಕ ಆ ಮನೆಯಿಂದ ಹೊರಟ ಗೋಪಾಲಕೃಷ್ಣ ರೈ ಮಗ ಅತ್ತು ರಂಪಾಟ ಮಾಡುತ್ತಿದ್ದಾನೆ ಎನ್ನುತ್ತಾ ತನ್ನ ಎಂಎಚ್ 04ಡಿಆರ್ 6026 ಸಂಖ್ಯೆಯ ವ್ಯಾಗ್ನರ್ ಕಾರಿನಲ್ಲಿ ಪಾವೂರುಗುತ್ತುವಿನಿಂದ ಹೊರಟಿದ್ದರು ಎನ್ನಲಾಗಿದೆ. ಹೀಗೆ ಹೊರಟ ಗೋಪಾಲಕೃಷ್ಣ ರೈ ನೇರ ರಾ.ಹೆ.66ರ ಉಳ್ಳಾಲ ಸೇತುವೆಯತ್ತ ಬಂದು ಕಾರು ನಿಲ್ಲಿಸಿ ಬಳಿಕ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರವಿವಾರ ಮುಂಜಾನೆ ಅಪರಿಚಿತ ಕಾರೊಂದು ನೇತ್ರಾವತಿ ಸೇತುವೆಯಲ್ಲಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಂಕನಾಡಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಕೆಲವು ದಿನದಿಂದ ಸರಿಯಾಗಿ ನಿದ್ದೆಯಿಲ್ಲದ ಕಾರಣ ಮಾನಸಿಕವಾಗಿ ನೊಂದಿದ್ದೇನೆ ಎಂದು ಆ ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ಈ ಮಧ್ಯೆ ನೇಮ ಮುಗಿಸಿ ಅಶ್ವಿನಿ ರೈ ತನ್ನ ಕುಟುಂಬಸ್ಥರ ಮನೆಗೆ ತೆರಳಿದಾಗ ಅಲ್ಲಿ ಪತಿ ಮತ್ತು ಮಗ ಇಲ್ಲದಿದ್ದುದನ್ನು ಕಂಡು ಇತರರಿಗೆ ತಿಳಿಸಿದ್ದಾರೆ. ಹಾಗೇ ಎಲ್ಲರೂ ಸೇರಿ ಹುಡುಕಾಟ ನಡೆಸಿದ್ದರೂ ತಂದೆ-ಮಗನ ಪತ್ತೆ ಇರಲಿಲ್ಲ. ಹಾಗಾಗಿ ಅಶ್ವಿನಿ ರೈ ಕೊಣಾಜೆ ಠಾಣೆಗೆ ‘ಪತಿ ಮತ್ತು ಮಗ’ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ.

ಇತ್ತ ಕಾರು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರಣ ಕಂಕನಾಡಿ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಅದರಂತೆ ಕಂಕನಾಡಿ ನಗರ ಮತ್ತು ಕೊಣಾಜೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

ಅದ್ಯಾವುದೋ ಕಾರಣದಿಂದ ಗೋಪಾಲಕೃಷ್ಣ ರೈ ತನ್ನ 5 ವರ್ಷ ಪ್ರಾಯದ ಮಗನನ್ನೂ ಜೊತೆಗೂಡಿಸಿಕೊಂಡು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News