ಬೈಂದೂರು: ಕೊಳವೆ ಬಾವಿಯ ಮರಳಿನಡಿಯಲ್ಲಿ ಸಿಲುಕಿದ ಕಾರ್ಮಿಕನ ರಕ್ಷಣೆ

Update: 2020-02-16 16:57 GMT

ಕುಂದಾಪುರ, ಫೆ.16: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಹೊರಬಂದರು ಪ್ರದೇಶದಲ್ಲಿ ರವಿವಾರ ಬೆಳಗ್ಗೆ 9.30ರ ಸುಮಾರಿಗೆ ಕೊಳವೆ ಬಾವಿ ಕೊರೆಯುವಾಗ ಮರಳು ಕುಸಿದು ಕಾರ್ಮಿಕರೊಬ್ಬರು 13 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಉಡುಪಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕಾರ್ಮಿಕನನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಯಿತು.

ರಕ್ಷಿಸಲ್ಪಟ್ಟ ಕಾರ್ಮಿಕನನ್ನು ನಾವುಂದ ಫಿಶರೀಶ್ ಕಲೋನಿಯ ಸುಬ್ಬ ಖಾರ್ವಿ ಎಂಬವರ ಮಗ ರೋಹಿತ್ ಖಾರ್ವಿ(35) ಎಂದು ಗುರುತಿಸಲಾಗಿದೆ. ಮೇಲಕ್ಕೆ ಎತ್ತಿದ ಕೂಡಲೇ ಖಾರ್ವಿ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಒಮ್ಮೆಲೆ ಮಣ್ಣು ಕುಸಿತ: ಸಮುದ್ರ ತೀರದಿಂದ 100-200 ಮೀಟರ್ ದೂರದಲ್ಲಿರುವ ಮರವಂತೆ ಎನ್‌ಎಸ್‌ಕೆ ಡಾಕ್‌ನ ಕಾರ್ಮಿಕರಿಗೆ ನೀರಿನ ಅನುಕೂಲ ಕಲ್ಪಿಸಲು ಹೊಸದಾಗಿ ಮಾನವ ನಿರ್ಮಿತ ಕೊಳವೆ ಬಾವಿ (ಹ್ಯಾಂಡ್ ಪಂಪ್)ಯನ್ನು ಕೊರೆಯಲಾಗುತ್ತಿತ್ತು. ಇಂದು ಬೆಳಗ್ಗೆಯಿಂದ ನಾಲ್ಕು ಮಂದಿ ಕಾರ್ಮಿಕರು, 10 ಅಡಿ ಆಳ ಕೊರೆದು, ಅಲ್ಲಿಂದ 25-30ಅಡಿ ಆಳಕ್ಕೆ ಪೈಪ್ ಹಾಕುವ ಮೂಲಕ ಕೊಳವೆ ಬಾವಿಯನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು.

10 ಅಡಿ ಆಳಕ್ಕೆ ರೋಹಿತ್ ಖಾರ್ವಿ ಸೇರಿದಂತೆ ಇಬ್ಬರು ಕಾರ್ಮಿಕರು ಇಳಿದು ಪೈಪ್ ಹಾಕುವ ಕೆಲಸ ಮಾಡುತ್ತಿದ್ದಾಗ, ಒಮ್ಮೆಲೆ ಮರಳು ಕುಸಿಯಿತ್ತೆನ್ನಲಾಗಿದೆ. ಇದರಿಂದ ಇಬ್ಬರು ಕೂಡ ಮರಳಿನಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿ ಒಬ್ಬಾತ ಮೇಲಕ್ಕೆ ಹತ್ತಿಕೊಂಡು ಬಂದ ಎನ್ನಲಾಗಿದೆ. ಆದರೆ ರೋಹಿತ್ ಖಾರ್ವಿ ಮೂಗಿನವರೆಗೆ ಸುಮಾರು 13 ಅಡಿ ಆಳದಲ್ಲಿ ಹೂತು ಹೋಗಿದ್ದ ಪರಿಣಾಮ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ.

ರಕ್ಷಣಾ ಕಾರ್ಯಾಚರಣೆ ಆರಂಭ: ತಕ್ಷಣವೇ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಇವರೆಲ್ಲ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಸ್ಥಳೀಯರು ಕೂಡ ಇದಕ್ಕೆ ಸಾಥ್ ನೀಡಿದರು.

ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಜಿಲ್ಲಾಡಳಿತ ವಹಿಸಿದ್ದು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಬೈಂದೂರು ತಹಶೀಲ್ದಾರ್ ಬಸಪ್ಪಪೂಜಾರಿ, ಕುಂದಾಪುರ ತಹಶಿಲ್ದಾರ್ ತಿಪ್ಪೇಸ್ವಾಮಿ, ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಸ್ಥಳದಲ್ಲಿಯೇ ಹಾಜರಿದ್ದರು.

ಸಮುದ್ರ ತೀರದ ಮರಳಾಗಿರುವುದರಿಂದ ಕಾರ್ಯಾಚರಣೆಯನ್ನು ಕೂಡ ಸಾಕಷ್ಟು ಎಚ್ಚರದಿಂದ ಮಾಡಬೇಕಾಯಿತು. ಈ ಕಾರ್ಯಾಚರಣೆಯಲ್ಲಿ ಎರಡು ಜೆಸಿಬಿ, ಒಂದು ಕ್ರೇನ್, ಎರಡು ಆ್ಯಂಬ್ಯುಲೆನ್ಸ್, ಕುಂದಾಪುರ ಅಗ್ನಿಶಾಮಕ ದಳದ ಒಂದು ವಾಹನವನ್ನು ಬಳಸಲಾಗಿತ್ತು ಮತ್ತು ಅಗ್ನಿಶಾಮಕದಳದ ಒಂಭತ್ತು ಮಂದಿ ಸಿಬ್ಬಂದಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

2 ಬಾರಿ ಆಕ್ಸಿಜನ್ ಬಳಕೆ: ಕಾರ್ಯಾಚರಣೆ ಮಧ್ಯೆ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಗಂಗೊಳ್ಳಿಯ 24x7 ಆಪದ್ಬಾಂಧವ ಹಾಗೂ 24x7 ಜೀವರಕ್ಷಕ ಆಂಬುಲೆನ್ಸ್ ಮೂಲಕ ಎರಡು ಬಾಕಿ ಅಕ್ಸಿಜನ್ ನೀಡಲಾಯಿತು. ಅದೇ ರೀತಿ ಓಆರ್‌ಎಸ್ ಎನರ್ಜಿ ಡ್ರಿಂಕ್ಸ್ ಎರಡು ಬಾರಿ ನೀಡಲಾಯಿತು. ಖಾರ್ವಿಯ ಮೂಗಿನವರೆಗೆ ಮಣ್ಣು ತುಂಬಿದ್ದು, ಎಡಕೈ ಮಾತ್ರ ಮಣ್ಣಿನಿಂದ ಮೇಲೆ ಇತ್ತು.
ನಿರಂತರ ಕಾರ್ಯಾಚರಣೆಯಲ್ಲಿ ಜೆಸಿಬಿ ಮೂಲಕ ಮಣ್ಣು ಕೊರೆದು, ಕ್ರೇನ್ ಮೂಲಕ ಆಳಕ್ಕೆ ಹಗ್ಗ ಇಳಿಸಿ ರೋಹಿತ್ ಖಾರ್ವಿಯನ್ನು ಮಧ್ಯಾಹ್ನ 3.30ರ ಸುಮಾರಿಗೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಯಿತು. ಮೇಲಕ್ಕೆ ಬರುತ್ತಿದ್ದಂತೆ ನಗುತ್ತಿದ್ದ ಖಾರ್ವಿಯನ್ನು ಜೀವರಕ್ಷಕ ಆ್ಯಂಬುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಯಿತು.

ರೋಹಿತ್ ಖಾರ್ವಿ ಕಳೆದ ಹಲವು ವರ್ಷಗಳಿಂದ ಕೊಳವೆ ಬಾವಿ ತೊಡುವ ಕೆಲಸ ಮಾಡುತ್ತಿದ್ದು, ಇವರಿಗೆ ವಿವಾಹವಾಗಿ ಒಂದು ಮಗು ಇದೆ. ಈ ಕಾರ್ಯಾಚರಣೆಯಲ್ಲಿ ಜೀವರಕ್ಷಕ ತಂಡದ ಸ್ವಯಂ ಸೇವಕರಾದ ಅರ್ಬರ್, ನದೀಮ್, ಆದಿಲ್, ವಿಲ್ಸನ್, ಇಬ್ರಾಹಿಂ, ಲಿಫ್ಟನ್ ಒಲಿವೇರಾ, ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನಾಗರಾಜ್ ಕುಲಾಲ್, ಗಿರೀಶ್, ನಾರಾಜ್ ಸಹಕರಿಸಿದ್ದರು.

ಅಗ್ನಿಶಾಮಕದಳಕ್ಕೆ 25ಸಾವಿರ ರೂ. ಬಹುಮಾನ
ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರೋಹಿತ್ ಖಾರ್ವಿ ಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ ಕುಂದಾಪುರ ಅಗ್ನಿಶಾಮಕದಳದ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ತನ್ನ ವೈಯಕ್ತಿಕ ನೆಲೆಯಲ್ಲಿ ಅಗ್ನಿ ಶಾಮಕ ದಳಕ್ಕೆ 25ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಕುಂದಾಪುರ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಕೆ.ಎನ್. ಮೊಗೇರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರದೀಪ್ ನಾಯ್ಕ, ಆನಂದ, ಪದ್ಮನಾಭ ಕಾಂಚನ್, ಕೃಷ್ಣ ನಾಯ್ಕ, ದಿನೇಶ್, ಗೃಹ ರಕ್ಷಕ ಗಣೇಶ್ ಆಚಾರ್ ಈ ಕಾರ್ಯಾಚರಣೆ ನಡೆಸಲಾಗಿದೆ.

‘ಹಲವು ಬಾರಿ ಬೇರೆ ಬೇರೆ ಕಡೆಗಳಲ್ಲಿ ಕೊಳವೆ ಬಾವಿಯನ್ನು ಕೊರೆದಿದ್ದೇನೆ. ಆದರೆ ಯಾವತ್ತು ಈ ರೀತಿಯ ಸಮಸ್ಯೆ ಆಗಿಲ್ಲ. ಸಾಕಷ್ಟು ಆಳ ಇಲ್ಲದ ಕಾರಣ ನನಗೆ ಯಾವುದೇ ಭಯ ಆಗಿಲ್ಲ. ಮೇಲಕ್ಕೆ ಬರುವ ಆತ್ಮವಿಶ್ವಾಸ ನನ್ನಲ್ಲಿ ಇತ್ತು’
-ರೋಹಿತ್ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News