ದಕ್ಷಿಣ ಆಫ್ರಿಕಾದ ಎಲ್ಲ ಮಾದರಿ ಕ್ರಿಕೆಟ್ ನಾಯಕತ್ವ ತ್ಯಜಿಸಿದ ಪ್ಲೆಸಿಸ್

Update: 2020-02-17 18:26 GMT

ಕೇಪ್‌ಟೌನ್, ಫೆ.17: ದಕ್ಷಿಣ ಆಫ್ರಿಕಾದ ಎಲ್ಲ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವವನ್ನು ಎಫ್‌ಡು ಪ್ಲೆಸಿಸ್ ತ್ಯಜಿಸಿದ್ದಾರೆ. ಆದರೆ, ಅವರು ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್‌ಎ)ಸೋಮವಾರ ತಿಳಿಸಿದೆ. ‘‘ತಂಡದಲ್ಲಿ ಹೊಸ ತಲೆಮಾರಿನ ನಾಯಕರು ಬೆಳೆಯಬೇಕೆಂಬ ಉದ್ದೇಶದಿಂದ ನಾಯಕತ್ವದಿಂದ ಹಿಂದೆ ಸರಿಯಲು ತಾನು ಬಯಸಿದ್ದೇನೆ’’ ಎಂದು ಪ್ಲೆಸಿಸ್ ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಬಳಿಕ ನನ್ನ ವೃತ್ತಿಭವಿಷ್ಯವನ್ನು ಮುಂದುವರಿಸಲು ಇಷ್ಟಪಡುವುದಿಲ್ಲ ಎಂದು ಈ ವರ್ಷಾರಂಭದಲ್ಲಿ ಪ್ಲೆಸಿಸ್ ಹೇಳಿದ್ದರು. ಪ್ಲೆಸಿಸ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಪ್ಲೆಸಿಸ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್ ದ.ಆಫ್ರಿಕಾ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ‘‘ಹೊಸ ನಾಯಕತ್ವ ಹಾಗೂ ಯುವ ಆಟಗಾರರಿಂದಾಗಿ ತಂಡ ಹೊಸ ದಿಕ್ಕಿನತ್ತ ಸಾಗುತ್ತಿದೆ. ಎಲ್ಲ ಮಾದರಿಯ ಕ್ರಿಕೆಟ್ ನಾಯಕತ್ವ ತ್ಯಜಿಸುವುದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹಿತಾಸಕ್ತಿಗೆ ಪೂರಕವಾಗಿದೆ ಎಂದು ನನ್ನ ಅನಿಸಿಕೆ. ಇದೊಂದು ಅತ್ಯಂತ ಕಠಿಣ ನಿರ್ಧಾರ. ಕ್ವಿಂಟನ್‌ಗೆ ಬೆಂಬಲ ನೀಡಲು ನಾನು ಬದ್ಧನಾಗಿದ್ದೇನೆ’’ ಎಂದು ಪ್ಲೆಸಿಸ್ ತಿಳಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ಟೂರ್ನಿ, ಆ ಬಳಿಕ ಭಾರತದಲ್ಲಿ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ಪ್ಲೆಸಿಸ್ ತೀವ್ರ ಒತ್ತಡದಲ್ಲಿದ್ದರು. ಬ್ಯಾಟಿಂಗ್‌ನಲ್ಲಿ ಪ್ಲೆಸಿಸ್ ಫಾರ್ಮ್ ಕೂಡ ಕಳಪೆಯಾಗಿತ್ತು. ಕಳೆದ 14 ಇನಿಂಗ್ಸ್ ಗಳಲ್ಲಿ ಕೇವಲ 20.92ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಅವರ ನಾಯಕತ್ವದ ಮೇಲೆ ಪ್ರಶ್ನೆ ಮೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News