ಪ್ರವಾದಿ ನಿಂದನೆ: ಮಧುಗಿರಿ ಮೋದಿ ವಿರುದ್ಧ ಉಡುಪಿ ಸೆನ್‌ಗೆ ದೂರು

Update: 2020-02-18 09:52 GMT

ಉಡುಪಿ, ಫೆ.18: ಧಾರ್ಮಿಕ ಹಾಗೂ ಪ್ರವಾದಿ ನಿಂದನೆ ಮಾಡಿರುವ ತುಮಕೂರಿನ ಮಧುಗಿರಿ ಮೋದಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ಇಂದು ದೂರು ನೀಡಲಾಗಿದೆ.

ಕಳೆದ ಕೆಲವು ದಿನಗಳಿಂದ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಮುಹಮ್ಮದ್ ಹಾಗೂ ಮುಸ್ಲಿಮರ ವಿರುದ್ಧ ನಿಂದನೀಯ, ಅವಹೇಳನಕಾರಿ ವಿಡಿಯೊಗಳನ್ನು ಹಾಕಿದ್ದಾನೆ ಎಂದು ಕೆಮ್ಮಣ್ಣು ಹೂಡೆಯ ಸಲಾಹುದ್ದೀನ್ ಅಬ್ದುಲ್ಲಾ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯ ದಂಡನೀಯ ಅಪರಾಧವಾಗಿದ್ದು, ಆರೋಪಿಯು ಮುಸ್ಲಿಮ್ ಧಾರ್ಮಿಕ ಭಾವನೆ ಕೆರಳಿಸುವಂತೆ ಮತ್ತು ಧರ್ಮವನ್ನು ಅವಮಾನ ಹಾಗೂ ನಂಬಿಕೆಯನ್ನು ಹೀಯಾಳಿಸುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾನೆ. ಇಂತಹ ಹೇಳಿಕೆಗಳು ವಿವಿಧ ಧರ್ಮಗಳ ನಡುವೆ ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ಸಮಾಜದ ಶಾಂತಿಯನ್ನು ಕದಡುವ ಉದ್ದೇಶವನ್ನು ಹೊಂದಿದೆ ಎಂದು ದೂರಲಾಗಿದೆ.

ಆತ ಈ ಹಿಂದೆ ಕೂಡ ಈ ರೀತಿಯ ಕೃತ್ಯವನ್ನು ಎಸಗಿದ್ದಾನೆ. ಆದುದರಿಂದ ಆತನ ವಿರುದ್ಧ ಹಾಗೂ ಈ ಕೃತ್ಯದ ಹಿಂದೆ ಇರುವ ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾ ರಾಮ ಸ್ವೀಕರಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರಗಿಸಲಾಗುವುದು ಎಂದು ಸೀತಾರಾಮ್ ತಿಳಿಸಿದ್ದಾರೆ.

ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಹಮ್ಮದ್ ಮೌಲಾ, ಹುಸೈನ್ ಕೋಡಿಬೆಂಗ್ರೆ, ಅಬ್ದುಲ್ ಅಝೀಝ್ ಉದ್ಯಾವರ, ಇಕ್ಬಾಲ್ ಕಟಪಾಡಿ, ಜಿಲ್ಲಾ ಮುಸ್ಲಿಮ್ ಜಮಾಅತ್‌ನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಮುಹಮ್ಮದ್ ಶೀಶ್, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಜಮಾಅತೆ ಇಸ್ಲಾಮೀ ಹಿಂದ್‌ನ ಶಬ್ಬೀರ್ ಮಲ್ಪೆ, ಅಹ್ಲೇ ಹದೀಸ್‌ನ ಕುದೂರು ಸೈಫುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News