ರಾಜ್ಯದ ಪ್ರಥಮ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗುವತ್ತ ಉಡುಪಿ

Update: 2020-02-18 16:38 GMT

ಉಡುಪಿ, ಫೆ.18: ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನದ ಸಾಧನೆಯನ್ನು ಈಗಾಗಲೇ ಮಾಡಿರುವ ಉಡುಪಿ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಗರಿ ಶ್ರೀಘ್ರವೇ ಅಲಂಕರಿಸಲಿದೆ. ಉಡುಪಿ ಜಿಲ್ಲೆಯು ರಾಜ್ಯದ ಮೊತ್ತಮೊದಲ ಆನೆಕಾಲು ರೋಗ (ಪೈಲೇರಿಯಾ) ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಉಡುಪಿ ಜಿಲ್ಲೆಯು ಪೈಲೇರಿಯಾ ರೋಗದಿಂದ ಸಂಪೂರ್ಣವಾಗಿ ಮುಕ್ತವಾಗಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯುವುದಷ್ಟೆ ಬಾಕಿ ಇದೆ. ಈ ಕುರಿತಂತೆ ಅಗತ್ಯ ವರದಿ ಮತ್ತು ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯಲು ಕನಿಷ್ಟ ಎರಡು ವರ್ಷ ತಗಲಲಿದ್ದು, ಆ ಮೂಲಕ ಉಡುಪಿ ಜಿಲ್ಲೆಯು ರಾಜ್ಯದಲ್ಲೆ ಮೊಟ್ಟ ಮೊದಲ ‘ಪೈಲೇರಿಯಾ ಮುಕ್ತ ಜಿಲ್ಲೆ’ ಎನ್ನುವ ಕೀರ್ತಿಗೆ ಭಾಜನವಾಗಲಿದೆ.

ಪೈಲೇರಿಯಾ (ಆನೆಕಾಲು) ಕ್ಯೂಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದಾಗುವ ರೋಗವಾಗಿದ್ದು, ಇದು ಸಾಂಕ್ರಾಮಿಕವಲ್ಲ. ಪೈಲೇರಿಯಾ ಹುಳುವಿರುವ ವ್ಯಕ್ತಿಯನ್ನು ಕ್ಯೂಲೆಕ್ಸ್ ಸೊಳ್ಳೆ ಕಚ್ಚಿದಾಗ ರಕ್ತದಲ್ಲಿರುವ ಹುಳ ಸೊಳ್ಳೆಯ ದೇಹವನ್ನು ಪ್ರವೇಶಿಸುತ್ತದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಜಂತು ಹುಳ ಆ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಕಡಿತಕ್ಕೊಳಗಾದ ವ್ಯಕ್ತಿಗೆ ಪೈಲೇರಿಯಾ ರೋಗ ಬರಲು ಕನಿಷ್ಟ 3 ರಿಂದ ಗರಿಷ್ಟ 10 ವರ್ಷಗಳು ತಗಲಬಹುದು.

ವ್ಯಕ್ತಿಯ ದೇಹದೊಳಕ್ಕೆ ಪ್ರವೇಶಿಸಿದ ಹುಳವು ದುಗ್ಧರಸಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಅಲ್ಲಿಂದ ಮುಂದಿನ ದೇಹದ ಭಾಗ ಸಂಪೂರ್ಣವಾಗಿ ಊದಿಕೊಳ್ಳತೊಡಗುತ್ತದೆ. ವ್ಯಕ್ತಿಯ ದೇಹದೊಳಗಿರುವ ಹುಳ ಸಾವನ್ನಪ್ಪಿದರೂ ದೇಹದ ಊತ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮುಖ್ಯವಾಗಿ ಕಾಲು, ಕೈ, ಎದೆಯ ಭಾಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.

ಹೊಸ ಪ್ರಕರಣಗಳಿಲ್ಲ: ಉಡುಪಿ ಜಿಲ್ಲೆಯಲ್ಲಿ ಹಳೆಯ ಪೈಲೇರಿಯಾ ಪ್ರಕರಣಗಳನ್ನು ಹೊರತು ಪಡಿಸಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ವಲಸೆ ಕಾರ್ಮಿಕರಲ್ಲಿ ರೋಗದ ಹುಳುಗಳು ಇರುವ ಸಾಧ್ಯತೆಗಳಿದ್ದು, ಇಂತಹವರನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸುವ ಕಾರ್ಯ ನಡೆಸಿ ರೋಗವನ್ನು ಪತ್ತೆ ಹ್ಚಲಾಗುತ್ತದೆ.

ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಕಟ್ಟಡ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಕಡೆಯಿಂದ ಎನ್‌ಓಸಿ ತೆಗೆದುಕೊಳ್ಳುವುದು ಕಡ್ಡಾಯ ಗೊಳಿಸುವಂತೆ ಇದರ ಜೊತೆಗೆ ನಗರಸಭೆಯಿಂದ ಸಿವಿಕ್ ಬೈಲಾವನ್ನೂ ರಚಿಸಿ ಅನುಮೋದನೆ ಗಾಗಿ ರಾಜ್ಯಸರಕಾರಕ್ಕೆ ಕಳುಹಿಸಿಕೊಡಲಾ ಗಿದೆ. ಮುಂದಿನ ದಿನಗಳಲ್ಲಿ ಬೈಲಾದ ಕಟ್ಟಳೆಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಪೈಲೇರಿಯಾ ಮುಕ್ತ ಜಿಲ್ಲೆ ಹೇಗೆ ?

ಜಿಲ್ಲೆಯಲ್ಲಿ ಪೈಲೇರಿಯಾದ ಮೇಲೆ ಸಂಪೂರ್ಣ ಹತೋಟಿ ಸಾಧಿಸಲು 2004ರಲ್ಲಿ ಭಾರತ ಸರಕಾರವು ಎಂಡಿಎ (ಮಾಸ್ ಡ್ರಗ್ ಅಡ್ಮಿನಿಸ್ಟ್ರೇಶನ್)ನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಲ್ಬೆಂಡಜೋಲ್ ಮತ್ತು ಡಿಇಸಿ ಮಾತ್ರೆಗಳನ್ನು ನೀಡಲಾ ಯಿತು. ಆ ನಂತರ ಎಂಡಿಎ ನಂತರದ ಸರ್ವೆ ನಡೆಸಿ, ಪ್ರಸರಣ ಮೌಲ್ಯ ಮಾಪನ (ಟಿಎಎಸ್) ಮಾಡಲಾಯಿತು. ಪ್ರಸರಣ ಮೌಲ್ಯವು ಶೇ.1ಕ್ಕಿಂತ ಕಡಿಮೆ ಇದ್ದಲ್ಲಿ ಅದರ ಖಚಿತತೆ ಹಾಗೂ ಇನ್ನೂ ನಿಖರ ವರದಿಗಾಗಿ ಇಮ್ಯೂನ್ ಕ್ರೊಮ್ಯಾಟಿಕ್ ಟೆಸ್ಟ್ (ಐಟಿಸಿ) ಪರೀಕ್ಷೆಗೊಳಪಡಿಸಲಾಗುತ್ತದೆ.

2005ರಿಂದ 2012ರವರೆಗೆ ಒಂದೇ ಒಂದು ಬಾರಿಯೂ ಜಿಲ್ಲೆಯ ಟಿಎಎಸ್ ಸರ್ವೆಯಲ್ಲಿ ಪ್ರಸರಣ ಮೌಲ್ಯವು ಶೇ.1ಕ್ಕಿಂತ ಹೆಚ್ಚಾಗಿರಲಿಲ್ಲ. ಐಟಿಸಿ ಪರೀಕ್ಷೆಗಳಿಗೆ ಜಿಲ್ಲೆಯ ಶಾಲೆಗಳನ್ನು ಐಚ್ಛಿಕವಾಗಿ ಆಯ್ಕೆ ಮಾಡಿ, ಶಾಲಾ ಮಕ್ಕಳ ರಕ್ತದ ನಮೂನೆಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಸ್ವಯಂಚಾಲಿತ ಸಾಪ್ಟ್‌ವೇರ್ ಮೂಲಕವೇ ನಡೆಯುತ್ತದೆ. ಇದರ ಜೊತೆಗೆ ಕ್ಯೂಲೆಕ್ಸ್ ಸೊಳ್ಳೆಗಳನ್ನೂ ಪರೀಕ್ಷಿಸಿ ಅವುಗಳ ಒಳಗೆ ಜಂತುಹುಳಗಳಿವೆಯೆ ಎನ್ನುವುದನ್ನೂ ಪತ್ತೆ ಹಚ್ಚಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ನಡೆಸುವ ಕಿಟ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸುತ್ತದೆ.

2014, 2016 ಮತ್ತು 2019ರಲ್ಲಿ ನಡೆಸಿದ ಟಿಎಎಸ್ ಹಾಗೂ ಪೋಸ್ಟ್ ಎಂಡಿಎ ಸರ್ವೆಗಳಲ್ಲಿ ಮೂರೂ ಬಾರಿಯೂ ಉಡುಪಿ ತೇರ್ಗಡೆ ಹೊಂದಿದ್ದು, ಸ್ಥಳೀಯವಾಗಿ ಪೈಲೇರಿಯಾ ರೋಗ ಇಲ್ಲವೆನ್ನುವುದು ಕಂಡುಬಂದಿದೆ. ಆದರೆ ಉಡುಪಿ ಜಿಲ್ಲೆಯು ಅಧಿಕೃತವಾಗಿ ಪೈಲೇರಿಯಾ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಬೇಕಿದ್ದಲ್ಲಿ ಈ ಪ್ರಮಾಣಪತ್ರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯಬೇಕಾಗಿದೆ.

ಇದಕ್ಕಾಗಿ ಪ್ರಮಾಣಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದ್ದು, ಮುಂದಿನ ಎರಡು ವರ್ಷಗಳವರೆಗೆ ಜಿಲ್ಲೆಯನ್ನು ಪೈಲೇರಿಯಾ ಮುಕ್ತವಾಗಿಡುವ ನಿಟ್ಟಿನಲ್ಲಿ ಈಗ ಇನ್ನಷ್ಟು ಕಾರ್ಯಗಳು ನಡೆಯಲಿವೆ. ರಾಜ್ಯದಲ್ಲಿ 2019ರ ಆಗಸ್ಟ್‌ನಲ್ಲಿಯೇ ಈ ಸಾಧನೆ ಮಾಡಿದ ಪ್ರಥಮ ಜಿಲ್ಲೆ ಉಡುಪಿಯಾಗಿದ್ದು, ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಉಡುಪಿಯ ನಂತರದಲ್ಲಿವೆ ಎಂದು ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. (ಪ್ರಶಾಂತ್ ಭಟ್ ಮೊಬೈಲ್:9972533545)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News