'15 ಅಧಿಕೃತ ದಾಖಲೆಗಳು ಕೂಡ ಪೌರತ್ವ ಸಾಬೀತುಪಡಿಸಿಲ್ಲ': ವಿದೇಶಿ ಎಂದು ಗುರುತಿಸಲ್ಪಟ್ಟ ಮಹಿಳೆಯ ಅಳಲು

Update: 2020-02-19 08:00 GMT

ಗುವಹಾಟಿ: ಅಸ್ಸಾಂನ ವಿದೇಶಿಗರ ಟ್ರಿಬ್ಯುನಲ್‍ ನಿಂದ ವಿದೇಶಿ ಎಂದು ಘೋಷಿಸಲ್ಪಟ್ಟ ಅಸ್ಸಾಂನ ಬಕ್ಸಾ ಜಿಲ್ಲೆಯ ಗೊಯಾಬರಿ ಎಂಬ ಕುಗ್ರಾಮವೊಂದರ ನಿವಾಸಿ 50 ವರ್ಷದ ಜಬೇದಾ ಬೇಗಂ ಟ್ರಿಬ್ಯುನಲ್ ಆದೇಶದ ವಿರುದ್ಧ ಗುವಾಹಟಿ  ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅಪೀಲಿನಲ್ಲಿ ಸೋತು ಕಂಗಾಲಾಗಿದ್ದಾರೆ.  ತಾನು ಭಾರತದ ನಾಗರಿಕಳು ಎಂದು ಸಾಬೀತುಪಡಿಸಲು ದಾರಿ ಕಾಣದೆ ಏಕಾಂಗಿ ಹೋರಾಟ ನಡೆಸುತ್ತಿರುವ ಇವರು ಸುಪ್ರೀಂ ಕೋರ್ಟ್ ಕದ ತಟ್ಟುವುದು ಕನಸಿನ ಮಾತಾಗಿದೆ.

ಗುವಾಹಟಿಯಿಂದ 100 ಕಿ.ಮೀ. ದೂರದ ಗ್ರಾಮದಲ್ಲಿ ವಾಸಿಸುವ ಜಬೇದಾ ತನ್ನ ಕುಟುಂಬದ ಏಕೈಕ ಆಧಾರವಾಗಿದ್ದಾರೆ. ಆಕೆಯ ಪತಿ ಅಲಿ ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದಿದ್ದಾರೆ. ದಂಪತಿಯ ಮೂವರು ಪುತ್ರಿಯರಲ್ಲಿ ಒಬ್ಬಳು ಅಪಘಾತದಲ್ಲಿ ಮೃತಪಟ್ಟರೆ, ಇನ್ನೊಬ್ಬಳು ನಾಪತ್ತೆಯಾಗಿದ್ದಾಳೆ. ಕಿರಿಯವಳಾದ ಆಸ್ಮಿನಾ ಐದನೇ ತರಗತಿ ವಿದ್ಯಾರ್ಥಿನಿ.

ಜಬೇದಾ ಬೇಗಂಗೆ ಈಗ ಅಸ್ಮೀನಾಳ ಭವಿಷ್ಯದ್ದೇ ಚಿಂತೆಯಾಗಿದೆ. ತನ್ನ ಅಲ್ಪಸ್ವಲ್ಪ ಆದಾಯವೂ ಕಾನೂನು ಹೋರಾಟಕ್ಕೆ ಖರ್ಚಾಗಿದ್ದರಿಂದ ಆಸ್ಮೀನಾ ಹಲವು ಬಾರಿ ಹಸಿದ ಹೊಟ್ಟೆಯಲ್ಲಿಯೇ ಮಲಗುವಂತಾಗಿದೆ. "ನನ್ನ ನಂತರ ಮುಂದೇನು ಎಂಬ ಚಿಂತೆಯಾಗಿದೆ. ಎಲ್ಲಾ ಭರವಸೆಗಳನ್ನು  ಕಳೆದುಕೊಂಡಿದ್ದೇನೆ'' ಎಂದು ಆಕೆ ದುಃಖದಿಂದ ಹೇಳುತ್ತಾಳೆ.

ಅಸ್ಸಾಂನ ವಿದೇಶಿಗರ ಟ್ರಿಬ್ಯುನಲ್ ಆಕೆಯನ್ನು 2018ರಲ್ಲಿ ವಿದೇಶಿಯಳೆಂದು  ಘೋಷಿಸಿತ್ತು.  ಟ್ರಿಬ್ಯುನಲ್‍ ಗೆ ಒಂದು ವರ್ಷ ಹಲವಾರು ಬಾರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಈಗ ಹೈಕೋರ್ಟ್ ಕೂಡ ತನ್ನ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ಆಕೆ ಸಲ್ಲಿಸಿದ್ದ ಭೂಕಂದಾಯ ಪಾವತಿ ರಶೀದಿ, ಬ್ಯಾಂಕ್ ದಾಖಲೆಗಳು ಹಾಗೂ ಪಾನ್ ಕಾರ್ಡ್ ಆಕೆಯ ಪೌರತ್ವ ಸಾಬೀತುಪಡಿಸುವ ದಾಖಲೆಗಳಲ್ಲ ಎಂದು ಹೇಳಿದೆ.

ಟ್ರಿಬ್ಯುನಲ್ ಗೆ ಆಕೆ ತನ್ನ ತಂದೆಯ ಹೆಸರಿರುವ 1966, 1970 ಹಾಗೂ 1971ರ ಮತದಾರರ ಪಟ್ಟಿಗಳ ಸಹಿತ 15 ದಾಖಲೆಗಳನ್ನು ಸಲ್ಲಿಸಿದ್ದಳು. ಆದರೆ ತಂದೆಯೊಡನೆ ಆಕೆಯ ಸಂಬಂಧ ಸಾಬೀತುಪಡಿಸುವ ದಾಖಲೆಗಳನ್ನು ಹಾಜರುಪಡಿಸಲಾಗಿಲ್ಲ ಎಂದು ಟ್ರಿಬ್ಯುನಲ್ ಹೇಳಿತ್ತು. ಜನನ ಪ್ರಮಾಣಪತ್ರವಿಲ್ಲದೇ ಇದ್ದುದರಿಂದ  ಗ್ರಾಮದ ಮುಖ್ಯಸ್ಥ ಆಕೆಯ ಹೆತ್ತವರ  ಹೆಸರುಗಳು ಹಾಗೂ ಜನನ ಸ್ಥಳದ ಕುರಿತು ನೀಡಿದ್ದ ಪ್ರಮಾಣಪತ್ರ ಸಲ್ಲಿಸಿದ್ದರೂ ಅದನ್ನು ಟ್ರಿಬ್ಯುನಲ್ ಹಾಗೂ ನ್ಯಾಯಾಲಯ ಕೂಡ ಒಪ್ಪಿಲ್ಲ.

ಅಸ್ಸಾಂ ಎನ್‍ಆರ್‍ ಸಿಯಲ್ಲಿ ಆಕೆಯ ಕುಟುಂಬದ ಯಾವುದೇ ಸದಸ್ಯರ ಹೆಸರು ಸೇರ್ಪಡೆಯಾಗಿಲ್ಲ, ಆಕೆ ಮತ್ತು ಆಕೆಯ ಪತಿಯನ್ನು `ಶಂಕಿತ ಮತದಾರರು' ಎಂದು ಗುರುತಿಸಲಾಗಿದ್ದರಿಂದ ಅವರು ಚುನಾವಣೆಯಲ್ಲಿ ಮತ ಕೂಡ ಚಲಾಯಿಸಿಲ್ಲ.

ವಕೀಲರ ಶುಲ್ಕ ಪಾವತಿಸಲು ತನ್ನ ಮೂರು ಬಿಘಾ ಜಮೀನನ್ನು ಆಕೆ ಈಗಾಗಲೇ ಮಾರಿದ್ದಾಳೆ ಹಾಗೂ ಈಗ ಇತರರ ಜಮೀನಿನಲ್ಲಿ ದಿನಕ್ಕೆ ರೂ 150 ಮಜೂರಿಗೆ ದುಡಿಯುತ್ತಿದಾಳೆ.

``ನಮಗೆ ಯಾವುದೇ ಭರವಸೆ ಉಳಿದಿಲ್ಲ,. ಸಾವು ಬಹಳ ಹತ್ತಿರದಲ್ಲಿದೆ'' ಎಂದು ಆಕೆಯ ಪತಿ ಅಲಿ ನಿರಾಸೆಯಿಂದ ನುಡಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News