ಮೂಲ ವಿಜ್ಞಾನದ ಗಡಿಗಳನ್ನು ಅಳಿಸಿದ ನ್ಯಾನೋ ತಂತ್ರಜ್ಞಾನ: ಡಾ.ಸುರೇಶ್ ಕುಲಕರ್ಣಿ

Update: 2020-02-19 16:11 GMT

ಉಡುಪಿ, ಫೆ.19: ನ್ಯಾನೋ ತಂತ್ರಜ್ಞಾನ ಸಾಧಿಸಿದ ಅಪಾರ ಪ್ರಗತಿಯಿಂದ ಇಂದು ಮೂಲ ವಿಜ್ಞಾನದ ವಿವಿಧ ಶಾಖೆಗಳ ನಡುವಿನ ಗಡಿಯೇ ಅಳಿಯುವಂತಾಗಿದೆ ಎಂದು ಮಾಹೆಯ ಅಟೋಮಿಕ್ ಎಂಡ್ ನ್ಯೂಕ್ಲಿಯರ್ ಎನರ್ಜಿಯ ಅಸೋಸಿಯೇಟ್ ಪ್ರೊಪೆಸರ್ ಡಾ.ಸುರೇಶ್ ಕುಲಕರ್ಣಿ ಹೇಳಿದ್ದಾರೆ.

ಉಡುಪಿ ಎಂ.ಜಿ.ಎಂ.ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ, ಮಂಗಳೂರಿನ ಅಸೋಸಿಯೇಷನ್ ಆಫ್ ಕೆಮೆಸ್ಟ್ರಿ ಟೀಚರ್ಸ್‌ (ಎಸಿಟಿ)ನ ಸಹಯೋಗದೊಂದಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ‘ಸುಸ್ಥಿರ ಅಭಿವೃದ್ಧಿಯಲ್ಲಿ ನ್ಯಾನೋ ಟೆಕ್ನಾಲಜಿ ಮತ್ತು ಪರಿಸರ ರಸಾಯನಶಾಸ್ತ್ರಗಳ ಇತ್ತೀಚಿನ ಬೆಳವಣಿಗೆ’ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶಿಖರೋಪನ್ಯಾಸ ನೀಡಿ ಮಾತನಾಡುತಿದ್ದರು.

ಹಿಂದೆಲ್ಲಾ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಸಸ್ಯಶಾಸ್ತ್ರಗಳೆಲ್ಲವೂ ಪ್ರತ್ಯೇಕ ವೆಂಬಂತಿದ್ದು, ಇಂದು ನ್ಯಾನೋ ಟೆಕ್ನಾಲಜಿಯಿಂದಾಗಿ ಅವುಗಳ ನಡುವಿನ ಗಡಿ ಅಳಿಯುವಂತಾಗಿದೆ. ವಿಜ್ಞಾನಕ್ಕಿಂದು ಗಡಿಗಳಿಲ್ಲ ಎಂದು ಹೇಳಬಹುದು. ಅದೀಗ ಅಂತರ್‌ಶಿಸ್ತಿನ ವಿಷಯವಾಗಿ ಪರಿಗಣಿತವಾಗಿದೆ ಎಂದು ಡಾ.ಕುಲಕರ್ಣಿ ಅಭಿಪ್ರಾಯಪಟ್ಟರು.

ಇಂದು ದೈನಂದಿನ ಬಳಕೆಯಲ್ಲಿ 500ಕ್ಕೂ ಅಧಿಕ ನೊಂದಾಯಿತ ನ್ಯಾನೋ ಬಳಕೆಯ ಉತ್ಪನ್ನಗಳು ಇದ್ದು, ಶುದ್ಧ ಕುಡಿಯುವ ನೀರಿನಿಂದ ಹಿಡಿದು ಎಲ್‌ಇಡಿ ಬೆಳಕಿನವರೆಗೆ ನ್ಯಾನೋ ತಂತ್ರಜ್ಞಾನ ನಮ್ಮ ದೈನಂದಿನ ಬಳಕೆಯಲ್ಲಿ ಉಪಯೋಗವಾಗುತ್ತಿದೆ. ನ್ಯಾನೋ ತಂತ್ರಜ್ಞಾನದ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಮಾತನಾಡಿ, ಇಂದು ಪ್ರತಿಯೊಂದು ತಂತ್ರಜ್ಞಾನವೂ ವೇಗವಾಗಿ ಬದಲಾವಣೆಗೊಳ್ಳುತ್ತಿದೆ. ಇವುಗಳಲ್ಲಿ ನ್ಯಾನೋ ತಂತ್ರಜ್ಞಾನ ಹೊಸ ಕ್ರಾಂತಿಕಾರಿ ಬದಲಾವಣೆಗೆ ಕಾರಣ ವಾಗುತ್ತಿವೆ. 1974ರಲ್ಲಿ ಜಪಾನಿನಲ್ಲಿ ಮೊದಲ ಬಾರಿ ಕಂಡುಹಿಡಿದ ನ್ಯಾನೋ ಟೆಕ್ನಾಲಜಿ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಊಹಿಸಲಾರದಷ್ಟು ಬದಲಾವಣೆಗೆ ಕಾರಣವಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಮಾತನಾಡಿ, ಇಂದು ವಿಶ್ವದಲ್ಲೇ ಪರಿಸರ ಭಾರೀ ಅಪಾಯವನ್ನು ಎದುರಿಸುತ್ತಿದೆ. ವಿಶ್ವದ ಶೇ.10ರಷ್ಟು ಶ್ರೀಮಂತರು ಭೂಮಿ ಮೇಲಿನ ಶೇ.50ರಷ್ಟು ಸಂಪನ್ಮೂಲಗಳನ್ನು ಬಳಸಿದರೆ, ಇನ್ನುಳಿದ ಶೇ.90ರಷ್ಟು ಮಂದಿ ಉಳಿದ ಶೇ.50ನ್ನು ಬಳಸಬೇಕಾಗಿದೆ. ಇದು ಸಂಪನ್ಮೂಲ ಬಳಕೆಯಲ್ಲಿ ಅಸಮಾನತೆಗೆ ಕಾರಣವಾಗಿದ್ದು, ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದರೊಂದಿಗೆ ತ್ಯಾಜ್ಯ ನೀರಿನ ಮರುಬಳಕೆಯೂ ಅಸಮರ್ಪಕತೆಯಿಂದ ಗಂಭೀರ ಸಮಸ್ಯೆಗೆ ಕಾರಣವಾಗಿದೆ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ ಉಪಸ್ಥಿತರಿದ್ದರು. ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಕಮಲೇಶ್ ಶೆಣೈ ಅವರನ್ನು ಕಾೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅರುಣ್‌ಕುಮಾರ್ ಬಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಕೆ. ಭಾಸ್ಕರ ಆಚಾರ್ಯ ವಂದಿಸಿ ವಿದ್ಯಾರ್ಥಿನಿ ಚೈತ್ರ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News