ಮಂಗಳೂರು ಮನಪಾ ಆಡಳಿತ ವ್ಯವಸ್ಥೆ ಸುಧಾರಣೆಗೆ ವಾಕಿಟಾಕಿ

Update: 2020-02-20 11:46 GMT

ಮಂಗಳೂರು, ಫೆ. 20: ಆಡಳಿತದ ಕೆಲಸ ಕಾರ್ಯಗಳಿಗೆ ವೇಗ ಹಾಗೂ ಅಧಿಕಾರಿಗಳ ನಡುವೆ ಸಂವಹನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸದ್ಯ ವಾಕಿಟಾಕಿ ಬಳಕೆಯಲ್ಲಿದೆ. ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗುವುದು ಹಾಗೂ ತಕ್ಷಣ ಸಂವಹನ ನಡೆಸುವ ನಿಟ್ಟಿನಲ್ಲಿ ಮನಪಾದಲ್ಲಿ ಕಳೆದ ಎರಡು ತಿಂಗಳ ಹಿಂದೆ ಪರಿಚಯಿಸಲಾಗಿರುವ ಈ ವಾಕಿಟಾಕಿ ಸದ್ಯ ಪಾಲಿಕೆಯ 60 ಅಧಿಕಾರಿಗಳ ಕೈಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಅಧಿಕಾರಿಗಳಿಗೂ ಏಕಕಾಲದಲ್ಲಿ ಸಂದೇಶ, ಸೂಚನೆ ರವಾನಿಸಿ, ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣವೇ ಸ್ಪಂದಿಸುವುದು ಮತ್ತು ಸ್ಪಂದಿಸಿದ ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಆಯುಕ್ತರಿಗೆ ವರದಿ ನೀಡುವುದು ವಾಕಿಟಾಕಿ ವ್ಯವಸ್ಥೆ ಅಳವಡಿಕೆಯ ಉದ್ದೇಶವಾಗಿದೆ.

ಸ್ಮಾರ್ಟ್ ಫೋನ್‌ಗಳ ಬಳಕೆಯಿಂದ ಸಂವಹನಕ್ಕೆ ಸಾಕಷ್ಟು ವ್ಯವಸ್ಥೆ ಇವೆಯಾದರೂ, ಏಕಕಾಲಕ್ಕೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಬಹುತೇಕವಾಗಿ ನೆಟ್‌ವರ್ಕ್ ಸಮಸ್ಯೆ, ಮೊಬೈಲ್ ಫೋನ್ ಕರೆ ಸ್ವೀಕರಿಸದಿರುವುದು, ವಾಟ್ಸಾಪ್ ಅಥವಾ ಟೆಕ್ಸ್ಟ್ ಮೆಸೇಜ್‌ಗಳನ್ನು ನೋಡದಿರುವುದು ಮೊದಲಾದ ಕಾರಣಗಳಿಂದಾಗಿ ತುರ್ತು ಕಾರ್ಯಗಳಿಗೆ ತೊಂದರೆಯಾಗುವುದು ಅಧಿಕ. ಹಾಗಾಗಿ ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ ಈ ವಾಕಿಟಾಕಿ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಮನಪಾದ ಕೆಲಸ ಕಾರ್ಯಗಳಿಗೆ ವೇಗ ನೀಡಲು ಮುಂದಾಗಿದ್ದಾರೆ. ಪಾಲಿಕೆ ಆಯುಕ್ತರ ಅಭಿಪ್ರಾಯದಂತೆ, ಆಡಳಿತದಲ್ಲಿ ಸಂವಹನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಏನು ನಡೆಯುತ್ತಿದೆ ಎಂದು ಅರಿಯಲು ಉಳಿದ ಅಧಿಕಾರಿಗಳಿಗೆ ತಿಳಿಸಲು ನಮ್ಮಲ್ಲಿ ಮೊಬೈಲ್ ಫೋನ್, ಸ್ಥಿರ ದೂರವಾಣಿ ಹಾಗೂ ವಾಟ್ಸಾಪ್ ಗುಂಪುಗಳೂ ಇವೆ. ಆದರೆ ಮೊಬೈಲ್ ಕರೆ ಮಾಡಿದಾಗ ರಿಸೀವ್ ಮಾಡದಿರುವ, ವಾಟ್ಸಾಪ್ ನೋಡದೇ ಇರುವುದು ಇತ್ಯಾದಿ ಸಮಸ್ಯೆಗಳಿವೆ. ಆದರೆ ಈ ವಯರ್‌ಲೆಸ್ ಉಪಯೋಗಿಸುವುದರಿಂದ ಒಂದೇ ಬಾರಿಗೆ ಎಲ್ಲರಿಗೂ ಯಾರು ಏನು ಮಾಡುತ್ತಿದ್ದಾರೆಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅಗತ್ಯ ಸಂವಹನ ಕಾರ್ಯಕ್ಕೆ ಇದು ಅತ್ಯಂತ ಉಪಯೋಗಕಾರಿ ಎನ್ನುತ್ತಾರೆ.

‘‘ಎಲ್ಲ ಇಂಜಿನಿಯರಿಂಗ್ ವಿಭಾಗದ ಸುಪರಿಂಟೆಂಡೆಂಟ್‌ಗಳಿಂದ ಹಿಡಿದು ಜೂನಿಯರ್ ಇಂಜಿನಿಯರ್‌ವರೆಗೆ ಹಾಗೂ ನಗರ ಯೋಜನಾ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಈ ವಾಕಿಟಾಕಿಗಳನ್ನು ನೀಡಲಾಗಿದೆ. ಆರೋಗ್ಯ ನಿರೀಕ್ಷಕರ ಕಾರ್ಯ ಬೆಳಗ್ಗೆ 6ರಿಂದ ಆರಂಭವಾಗುತ್ತದೆ. ಎಲ್ಲಿ ಹೆಚ್ಚು ಕಸವಿದೆ, ಕಸ ನಿರ್ವಹಣೆಯಲ್ಲಿನ ತೊಂದರೆ, ವಾಹನಗಳು ಬಂದಿಲ್ಲ, ಸಾರ್ವಜನಿಕರ ತೊಂದರೆ, ಹಲ್ಲು ಸ್ವಚ್ಛಗೊಳಿಸುವುದು, ಈ ರೀತಿ ಒಬ್ಬರಿಗೊಬ್ಬರು ಸಂವಹನಕ್ಕೆ ಈ ಉಪಕರಣ ಅತ್ಯಂತ ಉಪಯೋಗವಾಗುತ್ತಿದೆ. ಇಂಜಿನಿಯರಿಂಗ್ ವಿಭಾಗದಲ್ಲೂ ಒಳಚರಂಡಿ ಅವ್ಯವಸ್ಥೆ, ನೀರಿನ ಪೈಪ್ ಒಡೆದಿರುವುದು ಮೊದಲಾದ ಸಂದರ್ಭ ಈ ವಾಕಿಟಾಕಿ ಅಧಿಕಾರಿಗಳ ನಡುವೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಮನಪಾದ ಕಂಟ್ರೋಲ್ ರೂಂ ಮೂಲಕ ಈ ವಾಕಿಟಾಕಿ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ’’ ಎಂದು ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾಹಿತಿ ನೀಡಿದರು.

ಮಹಾನಗರ ಪಾಲಿಕೆಯ ಸಂಪೂರ್ಮ ವ್ಯಾಪ್ತಿಯಲ್ಲಿ ಈ ವಾಕಿಟಾಕಿಯ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತದೆ. ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಿಂದ ತುಂಬೆಯವರೆಗೆ ಮತ್ತು ಮುಖ್ಯ ಕಚೇರಿಯಿಂದ ಸುರತ್ಕಲ್ ವಿಭಾಗ, ಮುಕ್ಕ ಬಾರ್ಡರ್‌ವರೆಗೂ ವಾಕಿಟಾಕಿಯ ರೇಂಜ್ ನಿಗದಿಯಾಗಿದೆ. ಹಾಗಾಗಿ ಈ ವ್ಯಾಪ್ತಿಯೊಳಗೆ ಅಧಿಕಾರಿಗಳು ಎಲ್ಲೇ ಇದ್ದರೂ, ತತ್‌ಕ್ಷಣಕ್ಕೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಪಾಲಿಕೆಯಲ್ಲಿ ಕೆಲ ವರ್ಷಗಳ ಹಿಂದೆಯೂ ಇದೇ ರೀತಿ ವಾಕಿಟಾಕಿ ವ್ಯವಸ್ಥೆ ಅಳವಡಿಸಿದ್ದು, ಬಳಿಕ ಅದನ್ನು ಕೈ ಬಿಡಲಾಗಿತ್ತು.


ಮಳೆಗಾಲ, ವಿಕೋಪ ಸಂದರ್ಭ ಹೆಚ್ಚು ಉಪಕಾರಿ

ಈ ನಿಸ್ತಂತು ಉಪಕರಣ ವ್ಯವಸ್ಥೆಯು ಮಳೆಗಾಲ ಹಾಗೂ ವಿಕೋಪ ಸಂದರ್ಭದಲ್ಲಿ ಹೆಚ್ಚು ಉಪಯೋಗವಾಗಲಿದೆ. ತುರ್ತು ಸಂದೇಶಗಳನ್ನು ಏಕಕಾಲದಲ್ಲಿ ಅಧಿಕಾರಿಗಳಿಗೆ ರವಾನಿಸಲು ಹಾಗೂ ಸಂವಹನ ಬೆಳೆಸಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಇದು ನೆರವಾಗಲಿದೆ. ಎರಡು ತಿಂಗಳ ಈ ವಾಕಿಟಾಕಿ ವ್ಯವಸ್ಥೆಯನ್ನು ಆರಂಭಿಸುವಾಗ ಆರಂಭದಲ್ಲಿ ಕಂದಾಯ ಅಧಿಕಾರಿಗಳಿಗೂ ನೀಡಲಾಗಿತ್ತು. ಆದರೆ ಅವರಿಗೆ ಇದು ಹೆಚ್ಚು ಉಪಯೋಗವಾಗುತ್ತಿಲ್ಲ. ಆರೋಗ್ಯ ಇಲಾಖೆಯಡಿ ಇದು ಹೆಚ್ಚು ಉಪಯುಕ್ತವಾಗಿದೆ.
-ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News