ನಿಟ್ಟೆ ವಿ.ವಿ.ಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2020-02-20 17:07 GMT

ಕೊಣಾಜೆ : ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಕುರಿತಾಗಿ  ಪ್ರತ್ಯೇಕ ಸೆಲ್ ಗಳ ಸ್ಥಾಪನೆಯಾಗಬೇಕಿದೆ. ಈ ಮೂಲಕ ಎಲ್ಲರನ್ನೂ ಸಂಶೋಧನೆಗಳಲ್ಲಿ  ತೊಡಗಿಸಿಕೊಳ್ಳುವ ಮುಖೇನ ಅವರಲ್ಲಿರುವ ಪ್ರತಿಭೆಯ ಅನ್ವೇಷಣೆಯ ಹಾಗೂ ಜಗತ್ತಿನಲ್ಲಿ ನೂತನ ಆವಿಷ್ಕಾರಗಳನ್ನು ಪರಿಚಯಿಸಲು ಸಾಧ್ಯ ಎಂದು ನವದೆಹಲಿ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ನ ಅಧ್ಯಕ್ಷ ಪ್ರೊ. ಅನಿಲ್  ಡಿ. ಸಹಸ್ರಬುದ್ಧೆ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಧೀನದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ದೇರಳಕಟ್ಟೆಯ ಕೆ. ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ  ಮೂರು ದಿನಗಳ ಕಾಲ ನಡೆಯಲಿರುವ  ಇಂಟರ್ ನ್ಯಾಷನಲ್ ಕಾನ್ಫರೆನ್ಸ್  ಆನ್ ಅಡ್ವಾನ್ಸಸ್ ಇನ್ ಫಾರ್ಮಸಿಟಿಕಲ್ ಆಂಡ್ ಹೆಲ್ತ್ ಸೈನ್ಸಸ್ ( ಐಕಾಪ್ಸ್ -2020) ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಸಾಮಾನ್ಯ ಕೌಶಲ್ಯ ವೃದ್ಧಿಯನ್ನು ಪರಿಣಾಮಕಾರಿಯಾಗಿ ಕಲಿಸಿದಲ್ಲಿ, ವಿದ್ಯಾರ್ಥಿಗಳು ಸ್ವಯಂ ಕಲಿಯುವವರಾಗುತ್ತಾರೆ.  ಶಿಕ್ಷಕರು ನೀಡುವ ಶಿಕ್ಷಣ ಔದ್ಯೋಗಿಕ ಕ್ಷೇತ್ರದಲ್ಲಿ  ವಿದ್ಯಾರ್ಥಿಗಳಿಗೆ  ಉಪಯುಕ್ತವಾಗದಂತಹ ಆಧುನಿಕತೆಯ ಕಾಲವಿದು. ಪಠ್ಯಕ್ರಮದ ಪರಿಷ್ಕರಣೆಯೂ ಪ್ರತಿನಿತ್ಯ ಅವಶ್ಯಕವಾಗಿ ನಡೆಯಬೇಕಿದೆ ಎಂದರು.

ನವದೆಹಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಇದರ ಅಧ್ಯಕ್ಷ ಪ್ರೊ.ಬಿ ಸುರೇಶ್ ಮಾತನಾಡಿ , ಆಫ್ರಿಕಾ ಖಂಡದಲ್ಲಿ ಪತ್ತೆಯಾದಂತಹ ಎಬೋಲ, ಝಿಕಾ ವೈರಸ್ ಗಳಿಗೆ ಭಾರತೀಯ ಮೂಲದ ಸಂಸ್ಥೆ ಅನ್ವೇಷಣೆ ಮಾಡಿದ ಡ್ರಗ್ ಪರಿಣಾಮಕಾರಿಯಾಗಿ ಕಾರ್ಯಾಚರಿಸಿ ನಿಯಂತ್ರಿಸುವಲ್ಲಿ ಸಹಕರಿಸಿತ್ತು. ಚೀನಾದಲ್ಲಿ ಕೊರೋನಾ ಬಾಧಿಸಿದ ಹಿನ್ನೆಲೆಯಲ್ಲಿ ಭಾರತದಿಂದ ಸಕ್ರೀಯ ಔಷಧೀಯ ಪದಾರ್ಥಗಳು (ಏಪಿಐಎಸ್) ರಫ್ತು ಅಲ್ಲಿಗೆ ಹೆಚ್ಚಾಗಿದೆ. ಇದರಿಂದ ಮಂದಗತಿಯಲ್ಲಿ ಸಾಗುತ್ತಿದ್ದ  ಭಾರತದ ಔಷಧೀಯ ಕಾರ್ಖಾನೆಗಳು ಹೆಚ್ಚಿನ ಔಷಧಿ ತಯಾರಿಕೆಯಲ್ಲಿ ತೊಡಗಿದೆ. ಬೇಡಿಕೆಗಳು ಹೆಚ್ಚಾದಂತೆ ಔಷಧಗಳ ಕೊರತೆಯಿಂದಾಗಿ  ಮುಂಬರುವ ದಿನಗಳಲ್ಲಿ ಔಷಧೀಯ ವಸ್ತುಗಳಿಗೆ ಶೇ.40 ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಆವಿಷ್ಕರಿಸಿದ  ಔಷಧಗಳಿಗೆ ಫಾರ್ಮಸಿ ಆಕ್ಟ್ ಪ್ರಕಾರ ಹಲವು ನೀತಿಗಳು ಜಾರಿಯಲ್ಲಿದ್ದು, ಅದರ ಪರಿಮಿತಿಯೊಳಗೆ  ಔಷಧಾ ತಯಾರಿಕಾ ಸಂಸ್ಥೆಗಳು ಕಾರ್ಯಾಚರಿಸಬೇಕಿದೆ. ಔಷಧ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ  ಮಹತ್ತರ ಬದಲಾವಣೆ ಗಳು ಆಗಲಿದೆ. ಮಾತ್ರೆಗಳು ಜೀವಕೋಶಗಳಾಗಿ, ಅಂಗ ಕಸಿ ಸ್ಟೆಮ್‍ಸೆಲ್ ಥೆರಪಿಯತ್ತ  ಹಾಗೂ ಬ್ಯಾಗ್‍ಪ್ಯಾಕ್‍ನಲ್ಲಿ ಡಯಾಲಿಸಿಸ್  ಪ್ರಕ್ರಿಯೆಗಳು ಆರಂಭವಾಗಲಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಕುಲಾಧಿಪತಿ ವಿನಯ್ ಹೆಗ್ಡೆ  ಮಾತನಾಡಿ , ಸಂಶೋಧನೆಯನ್ನು ನೈತಿಕ ಅಭ್ಯಾಸದಿಂದ ನಿಯಂತ್ರಿಸಲಾಗುತ್ತಿದೆ. ಆದರೆ ಮಾನವ ಜೀವನಕ್ಕೆ ಸಹಕರಿಸುವ ಎಲ್ಲಾ ರೀತಿಯ ಪ್ರಕ್ರಿಯೆಗಳಿಗೆ  ಬೆಂಬಲಿಸಬೇಕಾಗಿದೆ ಎಂದರು.

ನಿಟ್ಟೆ ವಿವಿ ಶೈಕ್ಷಣಿಕ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ,   ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ,  ಫ್ರಾನ್ಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಿಎನ್ ಆರ್ ಎಸ್ ನಿರ್ದೇಶಕ ಡಾ. ಶ್ರೀನಿ ವಿ. ಕಾವೇರಿ ಸಹ ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ,  ಕುಲಸಚಿವೆ ಪ್ರೊ.ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಪ್ರಿನ್ಸಿಪಾಲ್, ಸಮ್ಮೇಳನ ಸಂಘಟನಾ ಚೇರ್ ಮೆನ್ ಪ್ರೊ.ಸಿ.ಎಸ್. ಶಾಸ್ತ್ರಿ ಪ್ರಾಸ್ತಾವಿಕ ಮಾತುಗಳನ್ನಾ ಡಿದರು.  ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ವಿಜಯ್ ಕುಮಾರ್ ವಂದಿಸಿದರು.

ಪೂರ್ವಜರನ್ನು ಬಲಿಷ್ಠವಾಗಿರಿಸಿದ್ದ ಪ್ರಾಕೃತಿಕ ಔಷಧೀಯ ಗುಣಗಳ ಸಸ್ಯಗಳ ಉಪಯೋಗಿಸಿ ಔಷಧಿಗಳ ನಿರ್ಮಾಣಕ್ಕೆ ಭವಿಷ್ಯದಲ್ಲಿ ಉತ್ತಮ ಬೇಡಿಕೆಗಳು ಸಿಗಲಿವೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಆವಿಷ್ಕಾರಗಳು ನಡೆಯಬೇಕು.

- ಪ್ರೊ. ಅನಿಲ್  ಡಿ. ಸಹಸ್ರಬುದ್ಧೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News