ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲವೇ?

Update: 2020-02-21 18:18 GMT

ಠಾಕೂರ್ ಸಮುದಾಯದ ಪುರುಷರಿಂದ ಅಂದು ಥಳಿತಕ್ಕೊಳಗಾದವರಲ್ಲಿ ಬಹುತೇಕರು ಮಹಿಳೆಯರು. ಕುಸುಮಾ ದೇವಿಯ ತಲೆಯಲ್ಲಿ ಹಲವು ಗಾಯಗಳಾಗಿವೆ. ಅವರ ತಲೆಗೆ ಒಂಬತ್ತು ಹೊಲಿಗೆ ಹಾಕಲಾಗಿದೆ. ಅವರ ಎಡಗೈ ಮುರಿದಿದೆ. ‘‘ಗುಂಪು ನಮ್ಮನ್ನು ಥಳಿಸುತ್ತಿರುವಾಗ ಪೊಲೀಸರು ಅದರ ವೀಡಿಯೊ ಮಾಡುತ್ತಿದ್ದರು’’ ಎಂದಿದ್ದಾರೆ ಕುಸುಮಾ ದೇವಿ.


ಉತ್ತರ ಪ್ರದೇಶದ ಕಾನ್ಪುರದ ಹಳ್ಳಿ ಮಾಂಗ್ತಾ ನಿವಾಸಿ ಮಧ್ಯವಯಸ್ಸಿನ ಗೃಹಿಣಿ ಕುಸುಮಾ ದೇವಿ ಫೆಬ್ರವರಿ 13ರಂದು ತನ್ನ ಹದಿನಾರರ ಹರೆಯದ ಮಗಳ ಜೊತೆ ಅಡುಗೆ ಮನೆಯಲ್ಲಿದ್ದರು. ಆಗ ಹೊರಗಿನಿಂದ ಏರುಧ್ವನಿಯ ಗದ್ದಲಗಳು ಕೇಳಿಸಿದವು. ತಕ್ಷಣ ಆಕೆ ತನ್ನ ಮಗಳಿಗೆ ಹೇಳಿದರು ‘‘ಯೇ ಠಾಕೂರ್ ಲೋಗ್ ಹೈ ಚಲ್ ಚುಪ್ ಜಾ’’ (ಅವರು ಠಾಕೂರ್‌ಗಳು ಹೋಗಿ ಅವಿತು ಕೋ). ಕುಸುಮಾ ಆ ಹಳ್ಳಿಯ ದಲಿತ ಸಮುದಾಯಕ್ಕೆ ಸೇರಿದವರು. ಕೆಲವೇ ಕ್ಷಣಗಳಲ್ಲಿ ಗಂಡಸರ ಗುಂಪೊಂದು ಮನೆಗಳಿಗೆ ನುಗ್ಗಿ ಅವರನ್ನು ಥಳಿಸಲಾರಂಭಿಸಿತು.

ಈಗ ಕಾನ್ಪುರದ ಉರ್ಸುಲಾ ಆಸ್ಪತ್ರೆಗೆ ದಾಖಲಾಗಿರುವ ಹದಿನೆಂಟು ಮಂದಿಯಲ್ಲಿ ಕುಸುಮಾ ಒಬ್ಬರು. ಠಾಕೂರ್ ಸಮುದಾಯದ ಪುರುಷರಿಂದ ಅಂದು ಥಳಿತಕ್ಕೊಳಗಾದವರಲ್ಲಿ ಬಹುತೇಕರು ಮಹಿಳೆಯರು. ಕುಸುಮಾ ದೇವಿಯ ತಲೆಯಲ್ಲಿ ಹಲವು ಗಾಯಗಳಾಗಿವೆ. ಅವರ ತಲೆಗೆ ಒಂಬತ್ತು ಹೊಲಿಗೆ ಹಾಕಲಾಗಿದೆ. ಅವರ ಎಡಗೈ ಮುರಿದಿದೆ. ‘‘ಗುಂಪು ನಮ್ಮನ್ನು ಥಳಿಸುತ್ತಿರುವಾಗ ಪೊಲೀಸರು ಅದರ ವೀಡಿಯೊ ಮಾಡುತ್ತಿದ್ದರು’’ ಎಂದಿದ್ದಾರೆ ಆಕೆ.
ಆದರೆ ಪೊಲೀಸರು ಭವಿಷ್ಯದಲ್ಲಿ ಪುರಾವೆಯಾಗಿ ಬಳಸಲು ವೀಡಿಯೊ ಮಾಡುತ್ತಿದ್ದರು, ಆ ವೀಡಿಯೊಗಳ ಆಧಾರದಲ್ಲಿ ಈಗಾಗಲೇ ಹದಿಮೂರು ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ ಅಲ್ಲಿಯ ಪೊಲೀಸ್ ಅಧಿಕಾರಿ ಎಸ್‌ಎಸ್‌ಪಿ ಅನುರಾಗ್ ವತ್ಸ್.
ಕುಸುಮಾ ದೇವಿ ಮುಂದುವರಿದು ಹೇಳಿದರು:

‘‘ಠಾಕೂರರು ಹಳ್ಳಿಯ ಗಂಡಸರೆಲ್ಲ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗಿದ್ದ ಸಮಯ ನೋಡಿಯೇ ಬಂದರು. ಮಹಿಳೆಯರ ಮತ್ತು ಮಕ್ಕಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿ ಅವರು ಬಂದಿದ್ದರು.’’ ದೇವಿ ಹೇಳುವ ಪ್ರಕಾರ ಮುನ್ನೂರು ಮಂದಿ ಇದ್ದ ಠಾಕೂರರ ಗುಂಪು ಅಂದು ದಲಿತ ಸಮುದಾಯದ ಮೇಲೆ ದಾಳಿ ನಡೆಸಿತು.
ಗುಡ್ಡಿ ದೇವಿಯ ಎಡ ಕೈಗೆ ಗಾಯವಾಗಿ, ಆಕೆಗೆ ವೈದ್ಯರು ಎರಡು ತಿಂಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆಕೆ ಕೇಳುತ್ತಾರೆ: ‘‘ಈಗ ಮನೆಯಲ್ಲಿ ಅಡುಗೆ ಮಾಡುವವರು ಯಾರು?’’

ಹಿನ್ನೆಲೆ: ಸುಮಾರು ಹತ್ತು ದಿನಗಳಿಂದ ಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಲೇ ಇತ್ತು. ದಲಿತ ಅಮಿತ್ ಕುಮಾರ್ ಹೇಳುವ ಪ್ರಕಾರ ಫೆಬ್ರವರಿ 1ರಿಂದ ಆತ ಹಳ್ಳಿಯಲ್ಲಿ ಸಂಘಟಿಸಿದ್ದ ‘ಭೀಮ್ ಕಥಾ’ ಎಂಬ ಒಂದು ವಾರದ ಸಮಾರಂಭ ಹಳ್ಳಿಯಲ್ಲಿ ನಡೆದ ಮೂಲ ಹಿಂಸೆಗೆ ಕಾರಣ: ‘‘ಗೌತಮ ಬುದ್ಧ ಮತ್ತು ಅಂಬೇಡ್ಕರ್ ಅವರ ಬೋಧನೆಗಳನ್ನು ಮುಖ್ಯವಾಗಿ ಇಟ್ಟುಕೊಂಡು ನಾವು ಮೊದಲ ಬಾರಿಗೆ ಹಳ್ಳಿಯಲ್ಲಿ ‘ಭೀಮ್ ಕಥಾ’ ಎಂಬ ಒಂದು ಸಮಾರಂಭವನ್ನು ಏರ್ಪಡಿಸಿದ್ದೆವು. ಸಮಾರಂಭದ ಅಂಗವಾಗಿ ನಾಟಕ ಗಾಯನ ಹಾಗೂ ಕಥಾ ಮಾಲಿಕೆ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ನಾವು ನಮ್ಮ ಪಾಡಿಗೆ ಒಂದು ಸಮಾರಂಭ ಏರ್ಪಡಿಸಿದ್ದು ಹಳ್ಳಿಯ ಠಾಕೂರ್ ಸಮುದಾಯದವರಿಗೆ ಇಷ್ಟವಾಗಲಿಲ್ಲ. ಅವರು ನಮ್ಮನ್ನು ಕೆಣಕಲು ಆರಂಭಿಸಿದರು.’’

ಆತ ಹೇಳುವಂತೆ ‘‘ಕಾರ್ಯಕ್ರಮದ ನಾಲ್ಕನೇ ದಿನ ಓರ್ವ ಠಾಕೂರ್ ಜೈದೀಪ್ ಸಿಂಗ್‌ನ ಮನೆಯಲ್ಲಿ, ಒಂದು ಮದುವೆ ಸಮಾರಂಭವಿತ್ತು. ಅವನ ಮನೆಯಿಂದ ಒಂದು ಗುಂಪನ್ನು ಭೀಮ್ ಕಥಾ ನಡೆಯುತ್ತಿದ್ದ ಒಂದು ‘ಮೊಹಲ್ಲಾ ಮೈದಾನ’ಕ್ಕೆ ನಮ್ಮ ಕಾರ್ಯಕ್ರಮವನ್ನು ಮೂರು ನಾಲ್ಕು ಗಂಟೆಗಳ ಕಾಲ ನಿಲ್ಲಿಸುವಂತೆ ಮಾಡಲು ಕಳುಹಿಸಲಾಯಿತು. ನಾವು ಹಾಗೆ ಕೂಡಲೇ ಕಾರ್ಯಕ್ರಮ ನಿಲ್ಲಿಸುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಸುಮಾರು 500 ಮಂದಿ ಅಕ್ಕಪಕ್ಕದ ಎರಡು ಮೂರು ಹಳ್ಳಿಗಳಿಂದ ಕಾರ್ಯಕ್ರಮಕ್ಕಾಗಿಯೇ ಬಂದಿದ್ದರು. ಆದ್ದರಿಂದ ನಾವು ಕಾರ್ಯಕ್ರಮವನ್ನು ನಿಲ್ಲಿಸಲಿಲ್ಲ. ಪ್ರಾಯಶಃ ಇದು ಅವರ (ಠಾಕೂರರ) ಸಿಟ್ಟಿಗೆ, ಅಸಮಾಧಾನಕ್ಕೆ ಕಾರಣವಾಯಿತು.’’

ಮುಂದಿನ ಕೆಲವು ದಿನಗಳ ಕಾಲ ಏನೂ ಆಗಲಿಲ್ಲ. ಹಳ್ಳಿಯಲ್ಲಿ ಎಂದಿನಂತೆಯೇ ಮಾಮೂಲು ಸ್ಥಿತಿ ಇತ್ತು. ಫೆಬ್ರವರಿ 12ರಂದು ದಲಿತರು ಒಂದು ಭೀಮ್ ಶೋಭಾಯಾತ್ರೆ (ಮೆರವಣಿಗೆ) ನಡೆಸಿದರು. ಆ ವೇಳೆಯಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಪೋಸ್ಟರ್ ಒಂದಕ್ಕೆ ಹಾನಿ ಎಸಗಲಾಯಿತು. ಜನರು ಹೇಳುವಂತೆ ಅದನ್ನು ಹರಿದವ ಓರ್ವ ಹದಿಹರೆಯದ ಹುಡುಗ.

ಮರುದಿನ, ಫೆಬ್ರವರಿ 13ರಂದು ನೂರಾರು ಜನ ಹಳ್ಳಿಯಲ್ಲಿ ‘‘ಜೈ ಶ್ರೀರಾಮ್’’ ಎಂದು ಘೋಷಣೆ ಕೂಗುವುದು ಕೇಳಿಸಿತು. ‘‘ಅವರು ನಮ್ಮನ್ನು ಗುರಿಯಾಗಿಸಿಕೊಂಡು ಬಂದಿದ್ದರು. ಅವರು 500 ಮಂದಿಗಿಂತ ಕಮ್ಮಿ ಇರಲಿಲ್ಲ.’’ ಎಂದಿದ್ದಾರೆ ಅಮಿತ್.

ಐವತ್ತರ ಹರೆಯದ ಶಿವ್ ದೇವಿಗೆ ‘‘ಜೈ ಶ್ರೀರಾಮ್’’ ಘೋಷಣೆಗಳು ಕೇಳಿಸುವಾಗ ಅವರು ಚಪಾತಿ ಮಾಡುತ್ತಿದ್ದರು. ತಕ್ಷಣ ಅವರು ಏನಾಗುತ್ತಿದೆ ಎಂದು ನೋಡಲು ಹೊರಗೆ ಓಡಿದರು. ‘‘ನಾನು ಹೊರಗೆ ಬಂದಾಗ ಎಲ್ಲ ಕಡೆಗಳಲ್ಲೂ ಜನರಿರುವುದನ್ನು ಗಮನಿಸಿದೆ. ಮನೆಗೆ ಹಿಂದೆ ಓಡಿ ಹೋಗುವುದು ಎಂದು ನಾನು ಯೋಚಿಸುತ್ತಿರುವಾಗ, ಅಷ್ಟರಲ್ಲೇ ಸುಮಾರು ಹತ್ತು ಮಂದಿ ಗಂಡಸರು ನನ್ನನ್ನು ಹಿಡಿದುಕೊಂಡಿದ್ದರು. ಅವರು ನನ್ನನ್ನು ಥಳಿಸಲಾರಂಭಿಸಿದರು. ಉದ್ದವಾದ ಲಾಠಿಗಳ ಕೊನೆಯಲ್ಲಿ ಅವರು ಕತ್ತಿಗಳನ್ನು ಕಟ್ಟಿದ್ದರು’’ ಎನ್ನುತ್ತಾರೆ ದೇವಿ. ‘‘ಅವರು ಜನರನ್ನು ಮನೆಯಿಂದ ಹೊರಗೆಳೆದು ಹೊಡೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಶಿವ್‌ದೇವಿ ಕಾನ್ಪುರದ ಉರ್ಸುಲಾ ಆಸ್ಪತ್ರೆಯಲ್ಲಿದ್ದಾರೆ. ಅವರ ತಲೆಗೆ ಆದ ಗಾಯಕ್ಕೆ ಐದು ಹೊಲಿಗೆಗಳನ್ನು ಹಾಕಲಾಗಿದೆ.
ದಾಳಿ ನಡೆದದ್ದು ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ, ಕೆಲವು ಮಕ್ಕಳನ್ನು ಕೂಡ ಥಳಿಸಲಾಯಿತು.

ಐದರ ಹರೆಯದ ಆದರ್ಶ ಕುಮಾರ್ ಅಂದು ನಡೆದ ಹಿಂಸೆಯ ಬಲಿಪಶುಗಳಲ್ಲೊಬ್ಬ. ಆ ಬಾಲಕ ಈಗ ಉರ್ಸುಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ‘ದಿ ವೈರ್’ ವರದಿಗಾರರನ್ನು ‘‘ಜೈಭೀಮ್’’ ಎನ್ನುತ್ತಾ ಸ್ವಾಗತಿಸುತ್ತಾನೆ. ಅವನಿಗೆ ಹೊಡೆದವರು ಯಾರು ಎಂದು ಕೇಳಿದಾಗ ಆತ ಹೇಳಿದ ‘‘ರಾಜ’’, ಅಂದರೆ ರಜಪೂತರು, ಮೇಲ್ಜಾತಿಯ ಜನರು. ಆದರ್ಶನ ಎಡಗೈಯ ಮೂಳೆಗಳಲ್ಲಿ ಒಂದು ಮೂಳೆ ಮುರಿದಿದೆ.

ಅವನ ತಂದೆ ಓರ್ವ ದಿನಕೂಲಿ ನೌಕರ ಮಹೇಶ್ ಕುಮಾರ್ ಹೇಳಿದ: ‘‘ನಾವು ನಮ್ಮದೇ ಆದ ಒಂದು ಸಮಾರಂಭ ನಡೆಸುತ್ತಿದ್ದೇವೆ ಎನ್ನುವ ಕಾರಣಕ್ಕಾಗಿ ಠಾಕೂರ್‌ಗಳು ನಮ್ಮ ಮೇಲೆ ದಾಳಿ ನಡೆಸಿದರು. ನಮ್ಮದು ಅವರ ರಾಮಲೀಲಾ ಸಮಾರಂಭಗಳಂತೆ ಅಲ್ಲ. ನಮ್ಮ ಸಮಾರಂಭ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ಸಮುದಾಯದ ಜಾಗೃತಿಗೆ ನೀಡಿದ ಕೊಡುಗೆಯ ಕುರಿತಾಗಿತ್ತು. ಅವರು ಉದ್ದೇಶಪೂರ್ವಕವಾಗಿ ಮಹಿಳೆಯರ ಮೇಲೆ ಗುರಿಯಿಟ್ಟು ದಾಳಿ ಮಾಡಿದ್ದಾರೆ. ಯಾಕೆಂದರೆ ನಮ್ಮ ಸಮುದಾಯದ ಮಹಿಳೆಯರನ್ನು ಥಳಿಸಿದರೆ ಅದರಿಂದ ನಮಗೆ ಅತ್ಯಂತ ಹೆಚ್ಚು ನೋವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ.’’

ಆಸ್ಪತ್ರೆಗೆ ದಾಖಲಾದ ಹದಿನೆಂಟು ಮಂದಿಯಲ್ಲಿ ಮೂರು ಮಂದಿ ಮಾತ್ರ ಪುರುಷರು.
ಮಾಂಗ್ತಾಹಳ್ಳಿಯ ಓರ್ವ ನಿವಾಸಿ ಠಾಕೂರರು ನಡೆಸಿದ ದಾಳಿಯ ತೀವ್ರತೆಯನ್ನು ವಿವರಿಸುತ್ತಾ ಹೇಳಿದರು: ‘‘ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮೂವರು ಮಹಿಳೆಯರು ರಶ್ಮಿ, ಬೀನಾಸ್ ಮತ್ತು ಭಗವತಿ ತುರ್ತುನಿಗಾ ವಾರ್ಡ್‌ನಲ್ಲಿದ್ದಾರೆ. ಯಾಕೆಂದರೆ ಅವರ ತಲೆಗಳಿಗೆ ಹದಿನೈದಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ.’’

 ಠಾಕೂರರು ತಮ್ಮ ಕೃತ್ಯದ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲದೆ ತಾವು ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಹಳ್ಳಿಯ ಮಾಜಿ ಪ್ರಧಾನ್‌ಳ ಪತಿ ಸುರೇಶ್ ಸಿಂಗ್ ಹೇಳಿದ: ‘‘ಹದಿನಾಲ್ಕು ವರ್ಷದ ಯಾರೋ ಒಬ್ಬ ಹುಚ್ಚು ಹುಡುಗ ಅವರ ಪೋಸ್ಟರ್ ಹರಿದು ಹಾಕಿದ್ದ. ಎಲ್ಲಾ ಘರ್ಷಣೆಗೆ ಅದೇ ಕಾರಣವಾಯಿತು.’’ ಠಾಕೂರರು ತಾವು ಮೂರು ಹೊಸ ಪೋಸ್ಟರ್‌ಗಳನ್ನು ಹಾಕಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ದಲಿತರು ‘‘ಮತ್ತೂ ಸಿಟ್ಟಾಗಿದ್ದರು ಹಾಗೂ ಅವರು ನಮ್ಮ ಮಾತನ್ನು ಕೇಳಲಿಲ್ಲ’’ ಎಂದಿದ್ದಾನೆ ಆತ. ಮೆರವಣಿಗೆಯ ವೇಳೆ ‘‘ಸವರ್ಣೀಯರ ಬಗ್ಗೆ ಕೆಲವು ಕೆಟ್ಟ ಮಾತುಗಳನ್ನು ಹೇಳಲಾಯಿತು. ರಾಮಾಯಣವೂ ಅಲ್ಲ, ಪುರಾಣವೂ ಅಲ್ಲ, ಈ ದೇಶದಲ್ಲಿ ನಡೆಯುತ್ತಿರುವುದು ಅಂಬೇಡ್ಕರ್ ಅವರ ಸಂವಿಧಾನ ಮಾತ್ರ ಎಂದು’’ ಎಂದಿದ್ದಾನೆ ಇನ್ನೋರ್ವ ಠಾಕೂರ್‌ ಚಂದುಸಿಂಗ್. ಆದರೆ ಇದು ಹೇಗೆ ಸವರ್ಣೀಯರಿಗೆ ಅವಮಾನ ಎಂದು ಆತ ವಿವರಿಸಲಿಲ್ಲ.

‘‘ಅವರು ನಾವು ನಮ್ಮ ತಾಯಿಯ ಜತೆ ಸ್ನಾನ ಮಾಡುತ್ತೇವೆ’’ ಎಂದು ಕೂಡ ನಮ್ಮನ್ನು ಹಳಿದರು. ಗಂಗಾ ಸ್ನಾನ ಮಾಡುವುದನ್ನು ಅವರು ಹೀಗೆ ಅವಹೇಳನ ಮಾಡಿದ್ದಾರೆ’’ ಎಂದು ಕೂಡ ಚಂದುಸಿಂಗ್ ಹೇಳಿದ. ‘‘ನಾವು ಇನ್ನೂ ಪ್ರತೀಕಾರ ಮಾಡಿಲ್ಲ’’ ಎಂದ ಆತ ಇನ್ನಷ್ಟು ಹಿಂಸೆ ನಡೆಯಬಹುದೆಂದು ಹೇಳಿದನಾದರೂ, ಬಳಿಕ ‘‘ಠಾಕೂರ್‌ಗಳು ಈಗ ರಾಜಿ ಪಂಚಾಯಿತಿಗೆ ಸಿದ್ಧ’’ ಎಂದು ಹೇಳಿದ. ಓರ್ವ ದಲಿತ ನಾಯಕನಾಗಿರುವ ಬ್ರಿಜ್‌ಲಾಲ್ ಖಬ್ರಿಯ ಪ್ರಕಾರ ‘‘ಹಳ್ಳಿಯಲ್ಲಿ ನಡೆದ ಘರ್ಷಣೆಗಳಿಗೂ ಠಾಕೂರ್‌ನ ಮನೆಯಲ್ಲಿ ನಡೆದ ವಿವಾಹ ಸಮಾರಂಭಕ್ಕೂ ಯಾವುದೇ ಸಂಬಂಧವಿರಲಿಲ್ಲ. ಭೀಮ್ ಕಥಾ ನಡೆಯುತ್ತಿದ್ದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಮದುವೆ ನಡೆಯುತ್ತಿತ್ತು. ಈ ಸಂಘರ್ಷ ಕೇವಲ ಸಿದ್ಧಾಂತದ ಕಾರಣಕ್ಕಾಗಿ ನಡೆದಿದೆ. ನಾವು ಬಾಬಾ ಸಾಹೇಬರ ಚಿಂತನೆ ಬೋಧನೆಗಳನ್ನು ಪ್ರಚಾರ/ ಪ್ರಸಾರ ಮಾಡುವುದು ಮೇಲ್ಜಾತಿಗಳಿಗೆ ಬೇಕಾಗಿಲ್ಲ. ಯಾಕೆಂದರೆ ಅದು ಅವರ ಪ್ರಾಬಲ್ಯಕ್ಕೆ ಬೆದರಿಕೆ ಉಂಟು ಮಾಡುತ್ತದೆ’’ ಎಂದಿದ್ದಾರೆ ಅವರು.

 ಕಾಂಗ್ರೆಸ್‌ನ ಉತ್ತರ ಪ್ರದೇಶ ಪರಿಶಿಷ್ಟ ಜಾತಿ ಘಟಕದ ರಾಷ್ಟ್ರೀಯ ಸಮನ್ವಯಾಧಿಕಾರಿ ಪ್ರದೀಪ್ ನರ್ವಾಲ್ ಫೆಬ್ರವರಿ 14ರಂದು ದಾಳಿಗೊಳಗಾದ ಸಂತ್ರಸ್ತರನ್ನು ಆಸ್ಪತ್ರೆಯಲ್ಲಿ ಭೇಟಿಯಾದರು. ಅವರು ಹೇಳಿದ ಮಾತುಗಳು ಇವು: ‘‘ಒಂದು ಕಿಲೋಮೀಟರ್ ದೂರದಲ್ಲಿರುವ ಎರಡು ದಲಿತ ಮೊಹಲ್ಲಾಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಅದು ಚೆನ್ನಾಗಿ ಪೂರ್ವಯೋಜಿತವಾದ ದಾಳಿ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಇಪ್ಪತ್ತರ ಹರೆಯದ ಒಬ್ಬಳು ಹುಡುಗಿಯ ಮೇಲೆ ಚೂಪಾದ ಒಂದು ವಸ್ತುವಿನಿಂದ ದಾಳಿ ನಡೆಸಲಾಯಿತು. ಮುಂದಿನ ತಿಂಗಳು ಅವಳ ವಿವಾಹ ನಿಶ್ಚಯವಾಗಿದೆ.’’

‘‘ದಾಳಿಯಿಂದಾಗಿ ಹಳ್ಳಿಯ ದಲಿತರು ಹೆದರಿಕೊಂಡಿದ್ದಾರೆ’’ ಎಂದಿರುವ ನರ್ವಾಲ್, ‘‘ನಾನು ಅವರನ್ನು ಭೇಟಿಯಾದಾಗ ಅವರಿಗೆ ಕೋವಿ ಪರವಾನಿಗೆ ಕೊಡಿಸಲು ನಾನು ಸಹಾಯ ಮಾಡಲು ಸಾಧ್ಯವೇ ಎಂದು ತಿಳಿದರು. ಅವರು ಮೇಲ್ಜಾತಿಗಳವರನ್ನು ನಂಬುವುದಿಲ್ಲ. ಅವರಿಗೆ ಪೊಲೀಸರಲ್ಲಿಯೂ ವಿಶ್ವಾಸವಿಲ್ಲ.’’

ಭೀಮ್ ಕಥಾ ಸಂಘಟಕ ಅಮಿತ್ ಕುಮಾರ್ ಆ ಸಮಾರಂಭ ಮುಗಿದಂದಿನಿಂದ ತನ್ನ ಮೇಲೆ ಅನೇಕ ಬಾರಿ ಕಲ್ಲುಗಳನ್ನು ಎಸೆಯಲಾಗಿದೆ ಎಂದಿದ್ದಾರೆ. ‘‘ಭಯದಿಂದಾಗಿ ಜನರು (ದಲಿತರು) ಅನಿವಾರ್ಯವಲ್ಲದೆ ಇದ್ದಲ್ಲಿ ತಮ್ಮ ಮನೆಗಳಿಂದ ಹೊರಗೆ ಬರುತ್ತಿಲ್ಲ. ಪ್ರತಿದಿನ ನನಗೆ ಬೆದರಿಕೆ ಹಾಕಲಾಗುತ್ತಿದೆ. ನನ್ನ ಕೊಲೆಯಾಗುವ ಸಾಧ್ಯತೆ ಇದೆ.’’

‘‘ಠಾಕೂರ್‌ಗಳು ಮನೆಯೊಂದಕ್ಕೆ ಬೆಂಕಿ ಕೊಟ್ಟಿದ್ದರು. ಆದರೆ ಯಾರಿಗೂ ಗಾಯವಾಗಿಲ್ಲ’’ ಎಂದು ಅಮಿತ್ ಕುಮಾರ್ ಹೇಳಿದ್ದಾರೆ. ಪೊಲೀಸ್ ಅಧಿಕಾರಿ ಅನುರಾಗ್ ವತ್ಸ್, ‘‘ಯಾರೂ ಭಯಪಡುವ ಅಗತ್ಯವಿಲ್ಲ. ಹಿಂಸೆ ನಡೆದ ಪ್ರದೇಶದಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.’’ ಎಂದಿದ್ದಾರೆ.
ಇಲ್ಲಿಯ ಜನ ತಮಗೆ ಪೊಲೀಸರು ತುಂಬಾ ಸಹಾಯ ಮಾಡುತ್ತಾರೆ ಎನ್ನುತ್ತಾರೆ. ‘‘ದಲಿತರು ನೀಡಿದ ದೂರುಗಳ ಆಧಾರದಲ್ಲಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಬಂಧಿತರೆಲ್ಲರೂ ಮೇಲ್ಜಾತಿಯವರೇ. ಎರಡೂ ಸಮುದಾಯಗಳ ಮಹಿಳೆಯರು ಇತ್ತೀಚೆಗೆ ನನ್ನನ್ನು ಭೇಟಿ ಮಾಡಿ ಪರಸ್ಪರ ರಾಜಿ ಮಾಡಿಕೊಂಡಿದ್ದಾರೆ. ನಾವು ಒಟ್ಟಿಗೆ ಸಹಕಾರದಿಂದ ಬದುಕಲು ಬಯಸುತ್ತೇವೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ನಾವು ಕೂಡ ಅವರು ಹಾಗೆ ಸಾಮರಸ್ಯದಿಂದ ಬದುಕುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಎರಡು ಸಮುದಾಯಗಳ ನಡುವೆ ಒಂದು ಸಂವಾದ ನಡೆಸಲು ನಾವು ಕೂಡ ಶ್ರಮಿಸುತ್ತಿದ್ದೇವೆ.’’

ದಲಿತರ ಮೇಲೆ ದಾಳಿ ನಡೆದ ದಿನ ಸಂಜೆಯ ವೇಳೆಗೆ ಒಂದೇ ಎಫ್‌ಐರ್ ದಾಖಲಿಸಲಾಯಿತು. ಆಪಾದಿತರ ಮೇಲೆ ಭಾರತೀಯ ದಂಡ ಸಂಹಿತೆಯ 12 ಸೆಕ್ಷನ್‌ಗಳ ಅಡಿಯಲ್ಲಿ ಆಪಾದನೆಗಳನ್ನು ಹೊರಿಸಲಾಗಿದೆ. ಈ ಸೆಕ್ಷನ್‌ಗಳಲ್ಲಿ ದೊಂದಿ, ಮಾರಕಾಸ್ತ್ರಗಳೊಂದಿಗೆ ದೊಂಬಿ ನಡೆಸುವುದು, ಕಾನೂನು ವಿರುದ್ಧವಾಗಿ ಸಭೆ ಸೇರುವುದು, ಮನೆಗಳ ಮೇಲೆ ಅತಿಕ್ರಮಣ ಇತ್ಯಾದಿ ಅಪರಾಧಗಳು ಸೇರಿವೆ. ನಿರ್ದಿಷ್ಟ ಜಾತಿ ಪರಿಶಿಷ್ಟ ವರ್ಗ ದೌರ್ಜನ್ಯ ತಡೆ ಕಾಯ್ದೆಯ ಕೆಲವು ಸೆಕ್ಷನ್‌ಗಳ ಆಧಾರದಲ್ಲಿಯೂ ಆಪಾದಿತರ ಮೇಲೆ ಆಪಾದನೆಗಳನ್ನು ಹೊರಿಸಲಾಗಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಹದಿಮೂರು ಮಂದಿ ಆಪಾದಿತರು ಠಾಕೂರ್ ಜಾತಿಗೆ ಸೇರಿದವರು.

ಕೃಪೆ: thewire.in   

Writer - ಇಸ್ಮತ್ ಅರಾ

contributor

Editor - ಇಸ್ಮತ್ ಅರಾ

contributor

Similar News