ಸಂತ ಅಲೋಶಿಯಸ್ ಕ್ಯಾಂಪಸ್‌ನಲ್ಲಿ ಪಕ್ಷಿಗಳ ಗಣತಿ: 35 ಪ್ರಬೇಧದ ಹಕ್ಕಿಗಳ ದಾಖಲೀಕರಣ

Update: 2020-02-22 09:27 GMT

ಮಂಗಳೂರು, ಫೆ. 22: ಸುಮಾರು 37 ಎಕರೆ ಪ್ರದೇಶದಲ್ಲಿರುವ ವಿಸ್ತರಿಸಿರುವ ಸಂತ ಅಲೋಶಿಯಸ್ ಕ್ಯಾಂಪಸ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ನಡೆದ ಪಕ್ಷಿಗಳ ಗಣತಿ ಕಾರ್ಯದಲ್ಲಿ 35 ಪ್ರಬೇಧದ ಹಕ್ಕಿಗಳನ್ನು ದಾಖಲಿಸಲಾಗಿದೆ.

2015ರಿಂದ ‘ಕ್ಯಾಂಪಸ್ ಬರ್ಡ್ ಕೌಂಟ್’ ಎಂಬ ಹೆಸರಿನಡಿ ಭಾರತಾದ್ಯಂತ ನಡೆಯುವ ಹಕ್ಕಿ ಗಣನೆಯ ಅಂಗವಾಗಿ ಸಂತ ಅಲೋಶಿಯಸ್ ಕ್ಯಾಂಪಸ್‌ನಲ್ಲಿಯೂ ಎರಡನೆ ಬಾರಿಗೆ ಈ ಗಣತಿ ನಡೆದಿದೆ. ದೇಶದಲ್ಲಿನ ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ಕ್ಯಾಂಪಸ್ ಬರ್ಡ್ ಕೌಂಟ್’ ಗಣತಿ ಕಾರ್ಯ ನಡೆಸಲಾಗುತ್ತಿದೆ.ಈ ಬಾರಿ ದೇಶದಾಧ್ಯಂತ 252 ಕ್ಯಾಂಪಸ್‌ಗಳು ಈ ಕೌಂಟ್ ನಲ್ಲಿ ಭಾಗವಹಿಸಿವೆ.

ಸಂತ ಅಲೋಶಿಯಸ್ ಕ್ಯಾಂಪಸ್ ನಲ್ಲಿ ಎರಡನೇ ಬಾರಿಗೆ ಬರ್ಡ್ ಕೌಂಟ್ ಹಮ್ಮಿಕೊಳ್ಳಲಾಗಿದೆ. ಸಂತ ಅಲೋಶಿಯಸ್ ಕಾಲೇಜು, ಮಂಗಳೂರಿನ ಹೃದಯ ಭಾಗದಲ್ಲಿದ್ದು ಸುಮಾರು 37 ಎಕ್ಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರಾಣಿಶಾಸ್ತ್ರ ವಿಭಾಗದಿಂದ ಬರ್ಡ್ ಕೌಂಟ್ ಕಾರ್ಯಕ್ರಮ ವನ್ನು ಈ ಬಾರಿ ಫೆ. 14ರಿಂದ 17ರವರೆಗೆ ಆಯೋಜಿಸಲಾಗಿತ್ತು. . ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿನೀತ್ ಕುಮಾರ್ ಕೆ, ಅವರ ಅಧ್ಯಕ್ಷತೆಯಲ್ಲಿ ಬರ್ಡ್ ಕೌಂಟ್ ನಡೆದಿದ್ದು, ವಿಭಾಗದ ಮುಖ್ಯಸ್ಥರಾದ ಡಾ. ಹೇಮಚಂದ್ರ ಹಾಗೂ ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ಜೈವಿಕ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದ 45 ವಿದ್ಯಾರ್ಥಿಗಳು ಈ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಗಣತಿಯಲ್ಲಿ 35 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ. ಕಪ್ಪು ಗಿಡುಗ (ಬ್ಲಾಕ್ ಕೈಟ್), ಬಿಳಿ ಗಿಡುಗ (ಬ್ರಾಹ್ಮಿಣಿ ಕೈಟ್), ಪಾರಿವಾಳ (ಪೆರಲ್ ಪಿಜಿನ್ಸ್, ಬೂದು ಬಾಲದ ಕಬ್ಬಕ್ಕಿ (ಚೆಸ್ಟ್‌ನಟ್- ಟೇಲ್ಡ್ ಸ್ಟಾರ್ಲಿಂಗ್ಸ್), ಕೋಗಿಲೆ (ಏಷ್ಯನ್ ಕೋಯಲ್) ಹಾಗೂ ಕುಟ್ರು ಪಕ್ಷಿಗಳು (ವೈಟ್- ಚೀಕ್ಡ್ ಬಾರ್ಬೆಟ್) ಕ್ಯಾಂಪಸ್ನಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣ ಸಿಗುವ ಹಕ್ಕಿಗಳಾಗಿವೆ. ವಲಸೆ ಹಕ್ಕಿಗಳಾದ ಬೂದು ಕಾಜಾಣ (ಆ್ಯಶಿ ಡ್ರೋಂಗೋ), ಬೂದು ಉಲಿಯಕ್ಕಿ (ಬ್ಲಿತ್ಸ್ ರೀಡ್ ವಾರ್ಬಲರ್), ಹಸಿರು ಉಲಿಯಕ್ಕಿ (ಗ್ರೀನ್ ವಾರ್ಬಲರ್), ದೊಡ್ಡ ಕೊಕ್ಕಿನ ಎಲೆ ಉಲಿಯಕ್ಕಿ (ಲಾರ್ಜ್- ಬಿಲ್ಡ್ ವಾರ್ಬಲರ್ ್ಟ) ರಾಜಹಕ್ಕಿ (ಇಂಡಿಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್) ಹಾಗೂ ನೀಲಿ ಬಾಲದ ಜೇನ್ನೊಣ ಬಾಕ (ಬ್ಲೂ ಟೇಲ್ಡ್ ಬೀ ಈಟರ್) ಹಕ್ಕಿಗಳನ್ನು ಕ್ಯಾಂಸ್ ಬರ್ಡ್ ಕೌಂಟ್‌ನಲ್ಲಿ ದಾಖಲಿಸಲಾಗಿದೆ.

ಅತ್ಯಂತ ಜನನಿಬಿಡ ನಗರ ಪ್ರದೇಶದಲ್ಲಿರುವ ಕಾಲೇಜಿನ ಆವರಣದಲ್ಲಿ ಇಷ್ಟೊಂದು ಪಕ್ಷಿ ವೈವಿದ್ಯತೆ ಕಾಣ ಸಿಗುವುದು ಕುತೂಹಲದ ವಿಷಯ. ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿರುವ ಅಗಾಧ ಗಾತ್ರದ ಮರಗಳು ಪಕ್ಷಿಗಳ ವಿಶ್ರಾಂತಿಯ ತಾಣವಾಗಿದೆ , ಕ್ಯಾಂಪಸ್ ನಲ್ಲಿರುವ ವಿವಿಧ ಬಗೆಯ ಹೂ ಹಣ್ಣು ಬಿಡುವ ಮರಗಳು ಪಕ್ಷಿಗಳ ಆಹಾರದ ಕೇಂದ್ರವಾಗಿದೆ. ಹೂವಿನ ಮಕರಂದವನ್ನು ಹೀರಲು ಹಾಗೂ ಹಣ್ಣುಗಳ ಆಪೋಷಣೆಗೆ ಬರುವ ಕೀಟಗಳನ್ನು ಸಹ ಈ ಪಕ್ಷಿಗಳು ಭಕ್ಷಿಸುತ್ತವೆ. ಕ್ಯಾಂಪಸ್ ನ ಕಟ್ಟಡಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಕಪ್ಪು ಗಿಡುಗಗಳು (ಬ್ಲಾಕ್ ಕೈಟ್) ಕುಳಿತಿರುವ ದ್ರಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಕೋಗಿಲೆ (ಏಶಿಯನ್ ಕೋಯಲ್ಸ್) ಹಾಗೂ ಕುಟ್ತ್ರಕ್ಕಿಗಳ (ವೈಟ್ ಚೀಕ್ಡ್ ಬಾರ್ಬೆಟ್ಸ್) ಕಲರವ ಕ್ಯಾಂಪಸ್ಸ್ನ ಉದ್ದಗಲಕ್ಕೂ ಕೇಳಿ ಬರುತ್ತದೆ. ಬೂದು ಬಾಲದ ಕಬ್ಬಕ್ಕಿ(ಚೆಸ್ಟ್‌ನಟ್-ಟೇಲ್ಡ್ ಸ್ಟಾರ್ಲಿಂಗ್ಸ್) ಗಳು ನೂರಾರು ಸಂಖ್ಯೆಯಲ್ಲಿ ಹಾರುತ್ತಿರುತ್ತವೆ.

ಪಕ್ಷಿ ವೀಕ್ಷಣೆಯು ನಮ್ಮ ವಿರಾಮದ ಸಮಯದಲ್ಲಿ ಮಾಡಬಹುದಾದಂತಹ ಹವ್ಯಾಸ, ಈ ಹವ್ಯಾಸವನ್ನು ಪ್ರಾಯ , ಲಿಂಗ , ಪ್ರದೇಶದ ಮಿತಿ ಯಿಲ್ಲದೆ ಯಾರು ಬೇಕಾದರೂ ಮಾಡಬಹುದು. ಪಕ್ಷಿ ವೀಕ್ಷಣೆಯು ಮನಸ್ಸಿಗೆ ಅಗಾದವಾದ ಮುಧ ನೀಡುವಂತಹ ಹವ್ಯಾಸ, ಆಸಕ್ತಿಯಿಂದ ಸತತವಾಗಿ ಪಕ್ಷಿ ವೀಕ್ಷಣೆ ಮಾಡುವುದರಿಂದ ಈ ಹವ್ಯಾಸವು ಜೀವನದ ಒಂದು ಅವಿಭಾಜ್ಯ ಅಂಗವಾಗುತ್ತದೆ. ಸಂತ ಅಲೋಶಿಯಸ್ ಕ್ಯಾಂಪಸ್‌ನಲ್ಲಿ ಕಳೆದ ಬಾರಿ 38 ಪ್ರಭೇದದ ಪಕ್ಷಿಗಳು ದಾಖಲಾಗಿದ್ದವು ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿನೀತ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News