ಗೂಗಲ್ ಸರ್ಚ್‌ನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ನ ಲಿಂಕ್ ಪತ್ತೆ ಸಾಧ್ಯ: ಬಳಕೆದಾರರ ದೂರು

Update: 2020-02-22 12:54 GMT

ಹೊಸದಿಲ್ಲಿ, ಫೆ.22: ನಿಮ್ಮ ಖಾಸಗಿ ವಾಟ್ಸ್ ಆ್ಯಪ್ ಗುಂಪಿಗೆ ಆಹ್ವಾನಿಸುವ ಲಿಂಕ್ ಈಗ ಖಾಸಗಿಯಾಗಿ ಉಳಿದಿಲ್ಲ. ಗೂಗಲ್ ಸರ್ಚ್‌ನಲ್ಲಿ ಸರಳವಾಗಿ ನಡೆಸುವ ಹುಡುಕಾಟದಲ್ಲೂ ಗ್ರೂಪ್ ಸದಸ್ಯರ ಫೋನ್ ನಂಬರ್ ಸಹಿತ ಈ ಲಿಂಕ್‌ಗಳ ಕುರಿತ ಮಾಹಿತಿ ಬಹಿರಂಗವಾಗುತ್ತದೆ ಎಂದು ವರದಿಯಾಗಿದೆ. ಪತ್ರಕರ್ತ ಜೋರ್ಡನ್ ವಿಲ್ಡನ್ ಈ ವಿಷಯವನ್ನು ಮೊದಲು ಪತ್ತೆ ಮಾಡಿದವರು. ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಆಹ್ವಾನಿಸುವ ವ್ಯವಸ್ಥೆಯಿಂದ ಗೂಗಲ್‌ನಲ್ಲಿ ಮಾಹಿತಿ ಸಂಗ್ರಹಿಸಲು ಸಾಧ್ಯ ಎಂದು ಟ್ವಿಟರ್‌ನಲ್ಲಿ ಅವರು ಹೇಳಿದ್ದಾರೆ. ಯಾರು ಬೇಕಾದರೂ ‘ಲಿಂಕ್ ಮೂಲಕ’ ವಾಟ್ಸ್ ಆ್ಯಪ್ ಗ್ರೂಪ್ ಗೆ ಸೇರಬಹುದೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ ಎಂದವರು ಹೇಳಿದ್ದಾರೆ.

ಗೂಗಲ್‌ನಲ್ಲಿ ‘ಚಾಟ್. ವಾಟ್ಸ್ ಆ್ಯಪ್.ಕಾಮ್’ ಎಂದು ಟೈಪ್ ಮಾಡಿ ವಾಟ್ಸ್ ಆ್ಯಪ್ ಗುಂಪಿನ ಚರ್ಚೆಗೆ ಸಂಬಂಧಿಸಿದ ಕೆಲವು ಪದಗಳನ್ನು ಟೈಪ್ ಮಾಡಿದಾಗ, ನಿಮ್ಮ ವಾಟ್ಸ್ ಆ್ಯಪ್ ಗ್ರೂಪ್ ನ ವಿವರ ಗೂಗಲ್‌ನಲ್ಲಿ ದಾಖಲಾಗಿದ್ದರೆ ಗುರುತಿಸಬಹುದು. ಗೂಗಲ್‌ನಲ್ಲಿ ‘ಚಾಟ್. ವಾಟ್ಸ್ ಆ್ಯಪ್.ಕಾಮ್’ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ಸುಮಾರು 4,70,000 ವಾಟ್ಸ್ ಆ್ಯಪ್ ಗ್ರೂಪ್ ಗಳನ್ನು ಗುರುತಿಸಬಹುದು ಎಂದು ಆ್ಯಪ್ ರಿವರ್ಸ್ ಇಂಜಿನಿಯರ್ ಜೇನ್ ವಾಂಗ್ ಹೇಳಿದ್ದು ಈ ಬಗ್ಗೆ ಟ್ವಿಟರ್‌ನಲ್ಲಿ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ವಾಟ್ಸ್ ಆ್ಯಪ್ ವಕ್ತಾರರು, ಗ್ರೂಪ್ ಎಡ್ಮಿನ್ ವಾಟ್ಸಾಪ್ ಬಳಕೆದಾರರನ್ನು ಗ್ರೂಪ್ ಗೆ ಆಹ್ವಾನಿಸಲು ಲಿಂಕ್ ಶೇರ್ ಮಾಡಿಕೊಳ್ಳುತ್ತಾರೆ. ಸಾರ್ವಜನಿಕವಾಗಿ ಇಂಟರ್‌ ನೆಟ್‌ನಲ್ಲಿ ನೀಡಿರುವ ಆಹ್ವಾನವಿದು. ಇದನ್ನು ಯಾರು ಬೇಕಾದರೂ ಗಮನಿಸಲು ಸಾಧ್ಯ. ಖಾಸಗಿಯಾಗಿ ಲಿಂಕ್‌ಗಳನ್ನು ಶೇರ್ ಮಾಡಿಕೊಳ್ಳ ಬಯಸುವವರು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಬಾರದು ಎಂದು ಹೇಳಿದ್ದಾರೆ. ಗ್ರೂಪ್  ಚಾಟ್ ಲಿಂಕ್ ಬಹಿರಂಗವಾಗುತ್ತಿರುವ ಬಗ್ಗೆ ಕಳೆದ ನವೆಂಬರ್‌ನಲ್ಲಿಯೇ ಟ್ವಿಟರ್ ಬಳಕೆದಾರರೊಬ್ಬರು ಫೇಸ್‌ಬುಕ್ ಗಮನ ಸೆಳೆದಿದ್ದರು. ಇದಕ್ಕೆ ಉತ್ತರಿಸಿದ್ದ ಫೇಸ್‌ ಬುಕ್, ಯಾರು ಬೇಕಾದರೂ ಪ್ರವೇಶಿಸುವ ಲಿಂಕ್‌ಗಳು ಅಂತರಾಷ್ಟ್ರೀಯ ಪ್ರಸ್ತಾವನೆಯ ನಿರ್ಧಾರವಾಗಿದೆ ಎಂದು ತಿಳಿಸಿತ್ತು.

ಜೋರ್ಡನ್ ವಿಲ್ಡನ್‌ನ ಟ್ವೀಟ್‌ಗೆ ಉತ್ತರಿಸಿರುವ ಗೂಗಲ್‌ನ ಪಬ್ಲಿಕ್ ಸರ್ಚ್ ವಿಭಾಗದ ಅಧಿಕಾರಿ ಡ್ಯಾನಿ ಸಲಿವನ್, ಹುಡುಕಾಟ ಫಲಿತಾಂಶ(ಸರ್ಚ್ ರಿಸಲ್ಟ್)ಗಳಲ್ಲಿ ಪಟ್ಟಿ ಮಾಡಬಹುದಾದ ವಿಷಯಗಳನ್ನು ನಿರ್ಬಂಧಿಸಲು ಅನುಮತಿಸುವ ಸಾಧನವನ್ನು ಸೈಟ್‌ಗಳಿಗೆ ತಮ್ಮ ಸಂಸ್ಥೆ ನೀಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಗೂಗಲ್ ಮತ್ತಿತರ ಸರ್ಚ್ ಇಂಜಿನ್‌ಗಳು ಓಪನ್ ಪೇಜ್‌ನಿಂದ ಪೇಜ್‌ಗಳನ್ನು ಲಿಸ್ಟ್ ಮಾಡುತ್ತವೆ. ಇಲ್ಲಿಯೂ ಇದೇ ಆಗಿದೆ. ಯುಆರ್‌ಎಲ್‌ಗಳನ್ನು ಸಾರ್ವಜನಿಕವಾಗಿ ಲಿಸ್ಟ್ ಮಾಡಿದಾಗ ಹೀಗೆ ಆಗುತ್ತದೆ. ಸರ್ಚ್ ರಿಸಲ್ಟ್‌ನಲ್ಲಿ ಲಿಸ್ಟ್ ಆಗದಂತೆ ನಿರ್ಬಂಧಿಸುವ ಸಾಧನವನ್ನೂ ನಾವು ಒದಗಿಸುತ್ತೇವೆ ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News