ಭಾಷೆ ಸೊರಗಿದರೆ, ಸಂಸ್ಕೃತಿಯೂ ಸೊರಗುತ್ತದೆ: ಸಚಿವ ಸಿ.ಟಿ.ರವಿ

Update: 2020-02-22 15:38 GMT

ಕಾರ್ಕಳ, ಫೆ. 22: ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಭಾಷೆ ಕಲಬೆರಕೆಯಾದರೆ, ಆ ಸಂಸೃತಿಯೂ ಕಲಬೆರಕೆಯಾದಂತೆ. ಅದೇ ರೀತಿ ಒಂದು ಭಾಷೆ ಮಾತನಾಡುವ ಜನರು ನಿರಭಿಮಾನಿಗಳಾದರೆ ಆ ಭಾಷೆ ಸೊರಗುವುದರೊಂದಿಗೆ, ಆ ಜನರ ಸಂಸ್ಕೃತಿಯೂ ಸೊರಗುತ್ತದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬ ಮಹೋತ್ಸವ ಕಾರ್ಯಕ್ರಮ ಹಾಗೂ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಕಾರ್ಕಳದ ಎಸ್‌ವಿಟಿ ವಿದ್ಯಾಸಂಸ್ಥೆ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಅಪಾಯ ಕೊಂಕಣಿಗೆ ಮಾತ್ರವಲ್ಲ, ಕನ್ನಡ, ತುಳು ಸೇರಿದಂತೆ ದೇಶದ ಎಲ್ಲಾ ಭಾಷೆಗಳಿಗೂ ಅನ್ವಯಿಸುತ್ತದೆ. ಆದುದರಿಂದ ಯಾವುದೇ ಭಾಷೆಯ ಬಗ್ಗೆ, ಆ ಭಾಷೆಯನ್ನು ಮಾತನಾಡುವ ಜನರು ನಿರಭಿಮಾನ ಬೆಳೆಸಿಕೊಂಡರೆ ಆ ಭಾಷೆಯ ಅಳಿವು ಪ್ರಾರಂಭವಾಗುತ್ತದೆ. ಹೀಗಾಗಿ ಜನರು ತಾವಾಡುವ ಭಾಷೆಯ ಕುರಿತಂತೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.

ನಮ್ಮ ಇಂದಿನ ಅಗತ್ಯತೆ, ಅವಶ್ಯಕತೆಗೆ ಇಂಗ್ಲೀಷ್‌ನ್ನು ಒಂದು ಭಾಷೆಯಾಗಿ ಕಲಿಯುವುದು ತಪ್ಪಲ್ಲ. ಭಾರತದಲ್ಲಿಂದು 1200ಕ್ಕೂ ಅಧಿಕ ಜನರಾಡುವ ಭಾಷೆಗಳಿವೆ. ಆದರೆ ಇಲ್ಲಿ ಯಾವುದೇ ಭಾಷೆ ಇನ್ನೊಂದು ಭಾಷೆಯನ್ನು ಅಳಿಸಿ ಹಾಕುವ ಕೆಲಸ ಮಾಡಿಲ್ಲ, ಬದಲಾಗಿ ಅದನ್ನು ಬೆಳೆಸುವ ಕೆಲಸ ಮಾಡಿದೆ. ಭಾರತದಲ್ಲಿ ಪ್ರತಿಷ್ಠೆಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ, ಸಾಮ್ರಾಜ್ಯ ವಿಸ್ತರಣೆಗಾಗಿ, ಸೇಡಿಗಾಗಿ ಯುದ್ಧ ನಡೆದ ಇತಿಹಾಸವಿದೆ. ಆದರೆ ಇಷ್ಟೊಂದು ಭಾಷೆಗಳಿದ್ದರೂ ದೇಶದಲ್ಲಿ ಭಾಷೆಗಾಗಿ ಯುದ್ಧ ನಡೆದ ಉದಾಹರಣೆಯಿಲ್ಲ ಎಂದು ಸಿ.ಟಿ.ರವಿ ನುಡಿದರು.

ಹೀಗಾಗಿ ಭಾರತದಲ್ಲಿ ಭಾಷಾ ವೈವಿಧ್ಯತೆಯಿದ್ದರೂ ಏಕತೆಯ ಭಾವನೆ ಇದೆ. ಕೊಂಕಣಿ ಭಾಷೆಯನ್ನು ಕನ್ನಡ, ಕನ್ನಡವನ್ನು ತುಳು ಭಾಷೆ ಬೆಳೆಸುವ ಕೆಲಸ ಮಾಡಿದೆ ಎಂದರು. ಆದರೆ ಇಂದು ಜನರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ದಿಂದಾಗಿ ಪ್ರಾದೇಶಿಕ ಭಾಷೆಗಳಿಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಭಾಷೆಯೊಂದಿಗೆ ಇಲ್ಲಿನ ಸಂಸ್ಕೃತಿಯೂ ಹೇಗೆ ಬದಲಾಗುತ್ತಿದೆ ಎಂಬುದನ್ನು ನಾವಿಂದು ನೋಡುತಿದ್ದೇವೆ ಎಂದರು.

ಆದುದರಿಂದ ಕಾಲದ ಅಗತ್ಯತೆಗೆ ಅನುಗುಣವಾಗಿ ಇತರೆ ಭಾಷೆಗಳನ್ನು ಕಲಿಯೋಣ. ಆದರೆ ನಮ್ಮತನವನ್ನು ಮರೆಯದಿರೋಣ. ನಮ್ಮ ನಮ್ಮ ಭಾಷೆಯ ಕುರಿತು ಅಭಿಮಾನ ಬೆಳೆಸಿಕೊಂಡು, ನಮ್ಮ ಮನೆಯಿಂದಲೇ ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಳಿಸೋಣ. ಪರಂಪರೆಯ ವಾರಸುದಾರ ರಾಗಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆಯನ್ನು ನಿಭಾಯಿಸೋಣ ಎಂದು ಸಿ.ಟಿ.ರವಿ ನುಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಕೊಂಕಣಿ ಭಾಷಿಗ ಸಾಧಕರನ್ನು ಸಚಿವ ಸಿ.ಟಿ.ರವಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್, ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಗೋಕಲದಾಸ ಪ್ರಭು, ರಜತೋತ್ಸವ ಸಮಿತಿಯ ಗೌರವಾಧ್ಯಕ್ಷೆ ಸಂಧ್ಯಾ ಪೈ, ಹೊಸದಿಲ್ಲಿಯ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಾಮತ್, ಅತ್ತೂರು ಸೈಂಟ್ ಲಾರೆನ್ಸ್ ಬಸಿಲಿಕಾದ ಧರ್ಮಾಧ್ಯಕ್ಷ ವಂ. ಜೋರ್ಜ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕುಮಾರಬಾಬು ಬೆಕ್ಕೇರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಜತೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶೆಣೈ ವಂದಿಸಿದರೆ, ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News