ಟಿವಿ ಸ್ಫೋಟ: ಮಹಿಳೆ ಸಾವು, ಪತಿ, ಮಗು ಗಂಭೀರ

Update: 2020-02-22 17:34 GMT

ಭುವನೇಶ್ವರ, ಫೆ. 23: ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಟಿ.ವಿ. ಸ್ಫೋಟಗೊಂಡು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಗಂಭೀರ ಗಾಯೊಂಡ ಅವರ ಪತಿ ಹಾಗೂ ಆರು ತಿಂಗಳ ಪುತ್ರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದುರುಹಾದಿಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಹಾಂಡಾಬುಡಾ ಗ್ರಾಮದ ಬಾಬಿ ನಾಯಕ್ ಅವರು ತನ್ನ ಪತಿ ದಿಲೇಶ್ವರ ನಾಯಕ್ ಹಾಗೂ ಪುತ್ರಿಯೊಂದಿಗೆ ಶುಕ್ರವಾರ ಧಾರಾವಾಹಿ ನೋಡುತ್ತಿರುವ ಸಂದರ್ಭ ಈ ಸ್ಫೋಟ ಸಂಭವಿಸಿದೆ.

ಸ್ಫೋಟದ ಸದ್ದು ಕೇಳಿದ ಕೂಡಲೇ ನೆರೆಯವರು ಅಲ್ಲಿಗೆ ಧಾವಿಸಿದರು. ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕುಟುಂಬವನ್ನು ರಕ್ಷಿಸಿದರು. ಅನಂತರ ಮೂವರನ್ನು ಸ್ಥಳೀಯ ಪೊಲೀಸರ ನೆರವಿನಿಂದ 108 ಆಂಬ್ಯುಲೆನ್ಸ್ ಮೂಲಕ ಸುಂದರಗಢದ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರು.

ಆದರೆ, ಬಾಬಿ ನಾಯಕ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ದಿಲೇಶ್ವರ್ ನಾಯಕ್ ಹಾಗೂ ಅವರ ಪುತ್ರಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಕಾರಣ ಅವರನ್ನು ರೂರ್ಕೆಲದ ಇಸ್ಪಾತ್ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News