ನೂರಾರು ಮಹಿಳೆಯರಿಂದ ಸಿಎಎ ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನೆ: ರಸ್ತೆಗೆ ತಡೆ, ಮೆಟ್ರೋ ಸ್ಟೇಶನ್ ಬಂದ್

Update: 2020-02-23 05:55 GMT

ಹೊಸದಿಲ್ಲಿ, ಫೆ.23: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರೋಧಿಸಿ ನೂರಾರು ಮಹಿಳೆಯರು ಕಳೆದ ರಾತ್ರಿಯಿಂದ ಈಶಾನ್ಯ ದಿಲ್ಲಿಯ ಜಫ್ರಾಬಾದ್‌ನ ಪ್ರಮುಖ ರಸ್ತೆಗೆ ತಡೆಯೊಡ್ಡಿದ್ದು, ಪ್ರತಿಭಟನೆಯಿಂದಾಗಿ ದಿಲ್ಲಿ ಮೆಟ್ರೋ ರೈಲ್ವೆ ಕಾರ್ಪೊರೇಶನ್(ಡಿಎಂಆರ್‌ಸಿ)ಜಫ್ರಾಬಾದ್‌ನ ಮೆಟ್ರೋ ರೈಲ್ವೆ ಸ್ಟೇಶನ್ ನಿರ್ಗಮನ, ಆಗಮನ ದ್ವಾರವನ್ನು ರವಿವಾರ ಬೆಳಗ್ಗೆ ಬಂದ್ ಮಾಡಿದೆ. ಪ್ರಮುಖ ರಸ್ತೆ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

‘‘ಸರಕಾರಿ ಕೆಲಸಗಳ ಭಡ್ತಿಗೆ ಕೋಟಾಗಳು ಹಾಗೂ ಮೀಸಲಾತಿ ಮೂಲಭೂತ ಹಕ್ಕಲ್ಲ’’ಎಂದು ಫೆ.9ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಇಂದು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪ್ರತಿಭಟನಾ ನಿರತ ಮಹಿಳೆಯರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಫ್ರಾಬಾದ್ ಮೆಟ್ರೋ ಸ್ಟೇಶನ್‌ನಲ್ಲಿ ಜಮಾಯಿಸಿದ್ದ ಮಹಿಳೆಯರು ತಮ್ಮ ಕೈಗೆ ನೀಲಿಪಟ್ಟಿ ಧರಿಸಿ ‘‘ಜೈ ಭೀಮ್’’ ಎಂದು ಘೋಷಣೆಗಳನ್ನು ಕೂಗಿದರು.

ಪೌರತ್ವ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ)ಯನ್ನು ವಿರೋಧಿಸಿ ಸುಮಾರು 500 ಮಂದಿ ಮಹಿಳೆಯರು ಶನಿವಾರ ರಾತ್ರಿ ಜಫ್ರಾಬಾದ್ ಮೆಟ್ರೋ ನಿಲ್ದಾಣದ ಸಮೀಪ ಧರಣಿ ಆರಂಭಿಸಿದ್ದಾರೆ. ಮಹಿಳೆಯರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು, ‘‘ಆಝಾದಿ(ಸ್ವಾತಂತ್ರ)’’ಎಂದು ಘೋಷಣೆಗಳನ್ನು ಕೂಗುತ್ತಿದ್ದರು.

‘‘ಸಿಎಎ, ಎನ್‌ಆರ್‌ಸಿಯಿಂದ ನಾವು ಸ್ವಾತಂತ್ರ ಬಯಸುತ್ತಿದ್ದೇವೆ’’ ಎಂದು ಪ್ರತಿಭಟನಾನಿರತ ಮಹಿಳೆಯೊಬ್ಬರು ಹೇಳಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೊ ನಿಲ್ದಾಣದ ಸುತ್ತಮುತ್ತ ಮಹಿಳಾ ಪೊಲೀಸರ ಸಹಿತ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

‘‘ರಸ್ತೆಯನ್ನು ತೆರವುಗೊಳಿಸಲು ಪೊಲೀಸರು ಪ್ರತಿಭಟನಾನಿರತರೊಂದಿಗೆ ಮಾತನಾಡುತ್ತಿದ್ದಾರೆ. ಅವರು ಪ್ರಮುಖ ರಸ್ತೆಯನ್ನು ಈ ರೀತಿ ಬ್ಲಾಕ್ ಮಾಡುವುದು ಸರಿಯಲ್ಲ. ನಾವು ಅರೆಸೇನ ಪಡೆಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದೇವೆ’’ಎಂದು ಹಿರಿಯ ಪೊಲೀಸ್ ಅಧಿಕಾರಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ಶಾಹೀನ್ ಬಾಗ್ ಬಳಿಕ ಇದು ಮಹಿಳೆಯರಿಂದ ಸಿಎಎ ವಿರುದ್ಧ ನಡೆಯುತ್ತಿರುವ ಹೊಸ ಪ್ರತಿಭಟನೆಯಾಗಿದೆ. ನೊಯ್ಡಿಗೆ ಸಂಪರ್ಕ ಕಲ್ಪಿಸುವ ದಿಲ್ಲಿಯ ಪ್ರಮುಖ ರಸ್ತೆ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆಯಿಂದಾಗಿ ದೀರ್ಘ ಸಮಯ ಬಂದ್ ಆಗಿತ್ತು. 70 ದಿನಗಳ ಬಳಿಕ ನಿನ್ನೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News