ಡಾ.ಕಫೀಲ್ ಖಾನ್ ಚಿಕ್ಕಪ್ಪನ ಗುಂಡಿಕ್ಕಿ ಹತ್ಯೆ

Update: 2020-02-23 18:10 GMT

ಗೋರಖ್‌ಪುರ, ಫೆ. 26: ಡಾ. ಕಫೀಲ್ ಖಾನ್ ಅವರ ಸೋದರ ಮಾವನನ್ನು ಗೋರಖ್‌ಪುರದ ರಾಜ್‌ಘಾಟ್ ಪ್ರದೇಶದಲ್ಲಿರುವ ಬಂಕಾಟಿಚಕ್‌ನ ಅವರ ಮನೆಯ ಎದುರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಭೂಮಿ ವಹಿವಾಟುಗಾರರಾಗಿರುವ ಡಾ. ನುಸ್ರತ್ತುಲ್ಲಾಹ್ ವಾರ್ಸಿ ಆಲಿಯಾಸ್ ದಾದಾ (55) ಅವರನ್ನು ಶನಿವಾರ ರಾತ್ರಿ 10.45ಕ್ಕೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಕುಟುಂಬ ಸದಸ್ಯರು ನೀಡಿದ ದೂರಿನಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ವಾರ್ಸಿ ಅವರು ಶನಿವಾರ ಸಂಜೆ ತನ್ನ ಮನೆಯಿಂದ ಕೆಲವು ಮೀಟರ್ ದೂರದಲ್ಲಿರುವ ವಕೀಲ ಸಿರಾಜ್ ತಾರಿಕ್ ಅವರ ಮನೆಗೆ ಹೋಗಿದ್ದರು. ನಡೆದುಕೊಂಡು ಹಿಂದಿರುಗಿ ಬರುವಾಗ ದುರ್ಷರ್ಮಿಗಳು ತಲೆಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.

‘‘ವಾರ್ಸಿ ಕುಟುಂಬದವರು ನೀಡಿದ ಲಿಖಿತ ದೂರಿನ ಆಧಾರದಲ್ಲಿ ಇಮಾಮುದ್ದೀನ್ ಹಾಗೂ ಅನಿಲ್ ಸೋಲಂಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಅವರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ವಾರ್ಸಿ ಅವರ ಕುಟುಂಬದ ಮಹಿಳೆಯರನ್ನು ಭೇಟಿಯಾಗಿ ವಿಚಾರಣೆ ನಡೆಸಲಾಗಿದೆ’’ ಎಂದು ಸರ್ಕಲ್ ಅಧಿಕಾರಿ ವಿ.ಪಿ.ಸಿಂಗ್ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಹಣಕಾಸಿನ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿ ಈ ಹತ್ಯೆ ನಡೆದಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಲ್ ಪಾವತಿಸದೆ ಆಮ್ಲಜನಕ ಪೂರೈಕೆಯಾಗದ ಹಿನ್ನೆಲೆಯಲ್ಲಿ 2017ರಲ್ಲಿ ಬಿಆರ್‌ಡಿ ಆಸ್ಪತ್ರೆಯಲ್ಲಿ 60 ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಶಿಶು ತಜ್ಞರಾಗಿರುವ ಡಾ. ಕಫೀಲ್ ಖಾನ್ ಪತ್ರಿಕೆಗಳ ಹೆಡ್‌ಲೈನ್ ಆಗಿದ್ದರು. ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಹಾಗೂ 7 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಅವರು 2018 ಎಪ್ರಿಲ್‌ನಲ್ಲಿ ಬಿಡುಗಡೆಗೊಂಡಿದ್ದರು.

ಇದಲ್ಲದೆ ಅಲಿಗಢ ಮುಸ್ಲಿಂ ವಿ.ವಿ.ಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಪ್ರಚೋದಕ ಭಾಷಣ ಮಾಡಿದ ಆರೋಪದಲ್ಲಿ ಕಳೆದ ತಿಂಗಳು ಅವರು ಬಂಧಿತರಾಗಿದ್ದರು. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News