ಪಕ್ಷದ ನಾಯಕರ ದ್ವೇಷ ಭಾಷಣವೇ ದಿಲ್ಲಿ ಚುನಾವಣೆ ಸೋಲಿಗೆ ಕಾರಣ: ಮನೋಜ್ ತಿವಾರಿ

Update: 2020-02-23 07:35 GMT

ಹೊಸದಿಲ್ಲಿ, ಫೆ.23: ತನ್ನ ಪಕ್ಷದ ನಾಯಕರ ದ್ವೇಷ ಭಾಷಣಗಳೇ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸದೇ ಇರಲು ಕಾರಣವಾಗಿದೆ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

ಫೆ.11ರಂದು ಪ್ರಕಟಗೊಂಡಿರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ)70 ಕ್ಷೇತ್ರಗಳ ಪೈಕಿ 62ರಲ್ಲಿ ಜಯ ಸಾಧಿಸಿ ಅಧಿಕಾರವನ್ನು ಉಳಿಸಿಕೊಂಡಿತ್ತು. ಅಧಿಕಾರಕ್ಕೇರಲು ಶತಪ್ರಯತ್ನ ನಡೆಸಿದ್ದ ಬಿಜೆಪಿ ಕೇವಲ 8 ಸೀಟುಗಳನ್ನು ಗೆದ್ದುಕೊಂಡಿತ್ತು.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ‘ಭಯೋತ್ಪಾದಕ‘ಎಂದು ಕರೆದಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ತಿವಾರಿ,‘‘ನಾನು ಆ ಭಾಷಣವನ್ನು ಖಂಡಿಸುತ್ತೇನೆ. ಚುನಾವಣೆಗೆ ಮೊದಲೇ ಈ ಹೇಳಿಕೆಯನ್ನು ನಾನು ವಿರೋಧಿಸಿದ್ದೆ. ಪ್ರಧಾನಮಂತ್ರಿ(ನರೇಂದ್ರ ಮೋದಿ)ಹಾಗೂ ಗೃಹ ಸಚಿವರು(ಅಮಿತ್ ಶಾ)ಈ ಹೇಳಿಕೆಯನ್ನು ಖಂಡಿಸಿದ್ದಾರೆ''ಎಂದು ಹೇಳಿದರು.

ತಿವಾರಿ ಹಾಜರಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಕೇಜ್ರಿವಾಲ್‌ರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಈ ಕುರಿತು ಉತ್ತರಿಸಿದ ತಿವಾರಿ,‘‘ದ್ವೇಷ ಭಾಷಣದಿಂದಾಗಿಯೇ ನಮ್ಮ ಪಕ್ಷ ಸಾಕಷ್ಟು ನಷ್ಟ ಅನುಭವಿಸಿದೆ. ನಾನು ಆಗ ಈ ಹೇಳಿಕೆ ಖಂಡಿಸಿದ್ದೆ. ಈಗಲೂ ಅದನ್ನು ಖಂಡಿಸುತ್ತೇನೆ’’ ಎಂದರು.

 ದಿಲ್ಲಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ಕಾಯ್ದೆ ಪರವಾದ ರ್ಯಾಲಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹಾಗೂ ಆತನ ಬೆಂಬಲಿಗರು ‘ದೇಶದ್ರೋಹಿಗಳಿಗೆ ಗುಂಡು ಹಾರಿಸಿ’ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ಮಾತನಾಡಿದ ತಿವಾರಿ,‘‘ಘೋಷಣೆ ಕೂಗಿರುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಪ್ರಕಾರ ಇಂತಹ ದ್ವೇಷ ಭಾಷಣ ಮಾಡುವವರನ್ನು ಖಾಯಂ ಆಗಿ ದೂರ ಇಡಬೇಕು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News