ಟ್ರಂಪ್ ಸ್ವಾಗತಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಗೇಟ್ ಕುಸಿತ

Update: 2020-02-23 08:59 GMT

ಅಹ್ಮದಾಬಾದ್, ಫೆ.23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ರಾಜಧಾನಿ ಅಹ್ಮದಾಬಾದ್‌ಗೆ ಭೇಟಿ ನೀಡುವ ಮುನ್ನಾ ದಿನವಾದ ರವಿವಾರ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾ ಸ್ಟೇಡಿಯ ಸಮೀಪ ಟ್ರಂಪ್ ಸ್ವಾಗತಕ್ಕೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಗೇಟ್‌ವೊಂದು ಕುಸಿದುಬಿದ್ದಿರುವ ಘಟನೆ ನಡೆದಿದೆ.

‘ನಮಸ್ತೆ ಟ್ರಂಪ್’ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳು ಅಂತಿಮ ಹಂತದಲ್ಲಿದ್ದಾಗ ಈ ಘಟನೆ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಟ್ರಂಪ್ ಫೆ.24ರಂದು ಜಂಟಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ತಾತ್ಕಾಲಿಕ ಗೇಟ್‌ಗೆ ಜೋರಾದ ಗಾಳಿಯನ್ನು ತಡೆಯುವಷ್ಟು ಸಾಮರ್ಥ್ಯ ಇಲ್ಲ ಎನ್ನುವುದನ್ನು ಗೇಟ್ ಕುಸಿದುಬಿದ್ದಿರುವ ವೀಡಿಯೊದಿಂದ ಸಾಬೀತಾಗಿದೆ. ಅದೃಷ್ಟವಶಾತ್ ಗೇಟ್ ಕುಸಿತ ಘಟನೆಯಿಂದ ಯಾವುದೇ ಸಾವು-ನೋವು ಉಂಟಾಗಿಲ್ಲ. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಟ್ರಂಪ್‌ಗೆ ಸ್ವಾಗತ ಕೋರಲು ನಿರ್ಮಿಸಲಾಗಿದ್ದ ಹಲವು ಸ್ವಾಗತ ಗೇಟ್‌ಗಳ ಪೈಕಿ ಇದೂ ಒಂದಾಗಿತ್ತು ಎಂದು ತಿಳಿದುಬಂದಿದೆ.

ಮೊಟೆರಾ ಸ್ಟೇಡಿಯಂ ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯ ಹೊಂದಿದೆ. ಹಳೆ ಸ್ಟೇಡಿಯಂನ್ನು ಕೆಡವಿ 700 ಕೋ.ರೂ. ವೆಚ್ಚದಲ್ಲಿ ಬೃಹದಾಕಾರದ ಸ್ಟೇಡಿಯಂ ನಿರ್ಮಿಸಲಾಗಿದೆ. ಭಾರತದಲ್ಲಿ ಈ ತನಕ ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂ ಬೃಹತ್ ಸ್ಟೇಡಿಯಂ ಎನಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News