ಕಾಸರಗೋಡು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ರಾಜ್ಯ ಸಮಿತಿಗೆ ರವೀಶ್ ತಂತ್ರಿ ರಾಜೀನಾಮೆ

Update: 2020-02-24 05:14 GMT

ಕಾಸರಗೋಡು, ಫೆ.24: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪ್ರಬಲ ನಾಯಕ ಹಾಗೂ  ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ್ ತಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕೆ.ಶ್ರೀಕಾಂತ್  ಅವರನ್ನು ಎರಡನೇ ಬಾರೀ ಆಯ್ಕೆ ಮಾಡಿದ ಬೆನ್ನಿಗೆ ರವೀಶ್ ತಂತ್ರಿ ಅಸಮಾಧಾನಗೊಂಡಿದ್ದು, ರಾಜ್ಯ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಕುರಿತ ರಾಜೀನಾಮೆ ಪಾತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ರಿಗೆ ಕಳುಹಿಸಿಕೊಟ್ಟಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವೀಶ ತಂತ್ರಿ ಆಕಾ೦ಕ್ಷಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕಾಗಿ ತಂತ್ರಿಯವರ ಹೆಸರು ಕೊನೆ ಕ್ಷಣ ತನಕವೂ ಕೇಳಿಬರುತ್ತಿತ್ತು. ಆದರೆ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಬಣದವರೆಂದು ಗುರುತಿಸಿಕೊಂಡಿರುವ ಶ್ರೀಕಾಂತ್ ರವರನ್ನು ರವಿವಾರ ರಾತ್ರಿ ಅಧ್ಯಕ್ಷರನ್ನಾಗಿ ಘೋಷಿಸಿದ ಬೆನ್ನಿಗೆ ತಂತ್ರಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವೀಶ ತಂತ್ರಿ ಪರ ಒಂದು ಬಣ ಮತ್ತು ಶ್ರೀಕಾಂತ್ ಪರ ಇನ್ನೊಂದು ಬಣ ಒತ್ತಡ ಹಾಕಿತ್ತು. ಬಿಜೆಪಿ ರಾಜ್ಯ ಘಟಕದಲ್ಲಿನ ಗುಂಪುಗಾರಿಕೆ ಇದೀಗ ಜಿಲ್ಲೆಯಲ್ಲೂ ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ.

2016ರಲ್ಲಿ  ಕಾಸರಗೋಡಿನಿಂದ  ವಿಧಾನಸಭಾ, 2019ರಲ್ಲಿ ಲೋಕಸಭೆ ಹಾಗೂ 2019ರಲ್ಲಿ ನಡೆದ ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ರವೀಶ ತಂತ್ರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

2016ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 89 ಮತಗಳಿಂದ ಸೋಲುಂಡಿದ್ದ ಕೆ.ಸುರೇಂದ್ರನ್ ರಿಗೆ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಟಿಕೆಟ್ ನೀಡದೆ ರವೀಶ ತಂತ್ರಿಯವರನ್ನು ಕಣಕ್ಕಿಳಿಸಲಾಗಿತ್ತು. ಪಕ್ಷದೊಳಗಿನ ಗುಂಪುಗಾರಿಕೆಯಿಂದ ತಂತ್ರಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ  ಯಶಸ್ವಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆಗ ಶ್ರೀಧರನ್ ಪಿಳ್ಳೆ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದರು. ಆದರೆ ಈಗ ಕೆ.ಸುರೇಂದ್ರನ್ ರಾಜ್ಯಾಧ್ಯಕ್ಷರಾಗುವ ಮೂಲಕ ಮತ್ತೊಂದು ಬಣ ಹಿಡಿತ ಸಾಧಿಸಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News