×
Ad

'ಆಧಾರ್ ತೋರಿಸು' ಎಂದು ವಲಸೆ ಕಾರ್ಮಿಕನನ್ನು ಬೆದರಿಸಿ ಕೆನ್ನೆಗೆ ಬಾರಿಸಿದ ಆಟೋ ಚಾಲಕ !

Update: 2020-02-24 16:00 IST

ತಿರುವನಂತಪುರಂ: ವಲಸೆ ಕಾರ್ಮಿಕನೊಬ್ಬನಿಗೆ ಆಧಾರ್ ತೋರಿಸುವಂತೆ ಆದೇಶಿಸಿ ಕೆನ್ನೆಗೆ ಹೊಡೆದ ಆಟೋರಿಕ್ಷಾ ಚಾಲಕನೊಬ್ಬನ ಕೃತ್ಯ  ಸ್ಥಳೀಯರೊಬ್ಬರಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ವೈರಲ್ ಆಗಿದೆ. ಘಟನೆ ತಿರುವನಂತಪುರಂನ ಮುಕ್ಕೋಲ ಎಂಬಲ್ಲಿ ನಡೆದಿದೆ. ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತನನ್ನು 25 ವರ್ಷದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಗೌತಮ್ ಮಂಡಲ್ ಎಂದು ಗುರುತಿಸಲಾಗಿದ್ದು, ವೀಡಿಯೋದಲ್ಲಿ ಆತ ತನ್ನ ಕಿಸೆಯಲ್ಲಿ ತನ್ನ ಆಧಾರ್ ಕಾರ್ಡ್ ಹುಡುಕುತ್ತಿದ್ದಂತೆಯೇ ಆಟೋ ಚಾಲಕ ಸುರೇಶ್ ಆತನ ಕೆನ್ನೆಗೆ ಬಾರಿಸುವುದು ಕಾಣುಸುತ್ತದೆ.

ಗೌತಮ್ ತನ್ನ ಮೊಬೈಲ್ ಫೋನ್ ರಿಚಾರ್ಜ್ ಮಾಡಿ ಅಂಗಡಿಯೊಂದರಿಂದ ಹೊರಬರುತ್ತಿದ್ದಂತೆಯೆ "ನೀನೆಲ್ಲಿಯವ, ನಿನ್ನ ಆಧಾರ್ ಕಾರ್ಡ್ ತೋರಿಸು'' ಎಂದು ಆಟೋ ಚಾಲಕ ಆತನಿಗೆ ಹೇಳುತ್ತಾನೆ. ನಂತರ ತನ್ನ ಆಟೋದಲ್ಲಿದ್ದ ಪರ್ಸ್‍ನಿಂದ ಆಧಾರ್ ತೆಗೆದು ಅದನ್ನು ಕಾರ್ಮಿಕನಿಗೆ ತೋರಿಸಿ ಆತನ ಕಾರ್ಡ್ ತೋರಿಸುವಂತೆ ಹೇಳುತ್ತಾನೆ. ಆಗ ಕಾರ್ಮಿಕ "ನಿನಗೆ ನನ್ನ ಐಡಿ ಬೇಕೇನು?'' ಎಂದು ಮಲಯಾಳಂನಲ್ಲಿ ಹೇಳಿ ತನ್ನ ಪರ್ಸ್ ತೆಗೆಯುತ್ತಿರುವಂತೆಯೇ ರಿಕ್ಷಾ ಚಾಲಕ ಆತನ ಕೆನ್ನೆಗೆ ಬಾರಿಸುತ್ತಾನೆ. ಕೊನೆಗೆ ಆತನ ಕಾರ್ಮಿಕರ ಐಡಿ ಕಾರ್ಡ್ ಪಡೆದು ಅದನ್ನು ಠಾಣೆಯಲ್ಲಿ ವಾಪಸ್ ಪಡೆದುಕೋ ಎಂದು ಹೇಳುತ್ತಾ ಹೊರನಡೆಯುತ್ತಿರುವುದು ಕಾಣಿಸುತ್ತದೆ.

ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News