ಆಲಿಘಡ್ ವಿವಿಯಲ್ಲಿ ದಾಂಧಲೆ, ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ

Update: 2020-02-24 12:59 GMT

ಹೊಸದಿಲ್ಲಿ, ಫೆ. 24 : ಆಲಿಘಡ್ ಮುಸ್ಲಿಂ ವಿವಿಯ ವಿದ್ಯಾರ್ಥಿಗಳ ಮೇಲೆ ಅನಗತ್ಯವಾಗಿ ಲಾಠಿ ಬೀಸಿದ ಹಾಗು ವಿವಿ ಆವರಣದಲ್ಲಿ ಮೋಟರ್ ಸೈಕಲ್ ಗಳಿಗೆ ಹಾನಿಮಾಡಿ ದಾಂಧಲೆ ಮಾಡಿದ ಪೊಲೀಸರನ್ನು ಗುರುತಿಸಿ ಅವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ. ಜೊತೆಗೆ ವಿವಿಯ ಆರ್ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವಂತೆಯೂ ನಿರ್ದೇಶನ ನೀಡಿದೆ. 

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ( ಎನ್ನೆಚ್ಚಾರ್ಸಿ ) ಶಿಫಾರಸಿನ ಮೇರೆಗೆ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಹಾಗು ನ್ಯಾ. ಸಮಿತ್ ಗೋಪಾಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. 

ಮೊಹಮ್ಮದ್ ಅಮನ್ ಖಾನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠ ಕಳೆದ ತಿಂಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎನ್ನೆಚ್ಚಾರ್ಸಿಗೆ ಸೂಚಿಸಿತ್ತು. 

ಡಿಸೆಂಬರ್ 13, 2019 ರಿಂದ ವಿವಿಯಲ್ಲಿ ಶಾಂತಿಯುತವಾಗಿ ಎನ್ನಾರ್ಸಿ ಹಾಗು ಸಿಎಎ ವಿರುದ್ಧ  ಪ್ರತಿಭಟನೆ ನಡೆಯುತ್ತಿದ್ದರೂ ಡಿಸೆಂಬರ್ 15 ರಂದು ಪ್ಯಾರಾ ಮಿಲಿಟರಿ ಹಾಗು ರಾಜ್ಯ ಪೊಲೀಸರು ಅನಗತ್ಯವಾಗಿ ವಿವಿಯೊಳಗೆ ಬಂದು ಲಾಠಿಚಾರ್ಜ್ , ಪೆಲೆಟ್ ಹಾಗು ರಬ್ಬರ್ ಬುಲೆಟ್ ಗಳನ್ನು ಬಳಸಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News