ಯುದ್ಧದಿಂದ ಸುಸ್ತಾಗಿರುವ ತಾಲಿಬಾನ್ ಶಾಂತಿ ಬಯಸುತ್ತಿದೆ: ಡೊನಾಲ್ಡ್ ಟ್ರಂಪ್

Update: 2020-02-24 16:59 GMT

ವಾಶಿಂಗ್ಟನ್,ಫೆ.24: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಯುದ್ಧದಿಂದಾಗಿ ಬಸವಳಿದಿದ್ದು, ಅಮೆರಿಕದೊಂದಿಗೆ ಶಾಂತಿ ಒಪ್ಪಂದವನ್ನು ಬಯಸುತ್ತಿದ್ದಾರೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ತನ್ನ ಚೊಚ್ಚಲ ಭೇಟಿಗಾಗಿ ರವಿವಾರ ವಾಶಿಂಗ್ಟನ್‌ನಿಂದ ನಿರ್ಗಮಿಸುವ ಮೊದಲು ಸುದ್ದಿಗಾರರ ಜೊತೆ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಮರಳಲು ಅಮೆರಿಕ ಪಡೆಗಳಿಗೆ ಇದು ಸಕಾಲವಾಗಿದೆಯೆಂದು ಟ್ರಂಪ್ ಹೇಳಿದರು. “ನಾವು 19 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದೇವೆ. ಅವರು ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ. ನಾವು ಕೂಡಾ ಅವರೊದಿಗೆ ಒಪ್ಪಂದವನ್ನು ಬಯಸಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ತಾಲಿಬಾನ್ ಜೊತೆ ಅಮೆರಿಕ ಶಾಂತಿ ಒಪ್ಪಂದವನ್ನು ಏರ್ಪಡಿಸುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದುರ.

‘‘ (ಅಮೆರಿಕ ಯೋಧರಿಗೆ) ಮನೆಗೆ ಮರಳಲು ಸಕಾಲ. ನಾವು ಶಾಂತಿ ಒಪ್ಪಂದವನ್ನು ಏರ್ಪಡಿಸಲು ಬಯಸಿದ್ದೇವೆ. ತಾಲಿಬಾನ್ ಕೂಡಾ ಒಪ್ಪಂದವನ್ನು ಮಾಡಿಕೊಳ್ಳಲು ಬಯಸಿದೆ. ಅವರು ಯುದ್ಧದಿಂದ ಸುಸ್ತಾಗಿ ಹೋಗಿದ್ದಾರೆ’’ ಎಂದು ಟ್ರಂಪ್ ಹೇಳಿದರು.

ಮುಂದಿನ ವಾರ ತಾಲಿಬಾನ್ ಜೊತೆ ಶಾಂತಿ ಒಪ್ಪಂದಯೇರ್ಪಟ್ಟಲ್ಲಿ ತಾನು ಅದಕ್ಕೆ ಸಹಿಹಾಕುವುದಾಗಿ ಅಮೆರಿಕ ಅಧ್ಯಕ್ಷರು ತಿಳಿಸಿದರು.

18 ವರ್ಷಗಳ ಸುದೀರ್ಘ ಕದನವನ್ನು ಕೊನೆಗೊಳಿಸುವ ಉದ್ದೇಶದಿಂದ ಅಮೆರಿಕ ಹಾಗೂ ತಾಲಿಬಾನ್ ನಡುವೆ ಶಾಂತಿ ಒಪ್ಪಂದ ರೂಪುಗೊಳ್ಳುವ ಸಾಧ್ಯತೆಯಿದ್ದು, ಇದಕ್ಕೆ ಪೂರ್ವಭಾವಿಯಾಗಿ ತಾಲಿಬಾನ್ ಏಳು ದಿನಗಳ ಕಾಲ ಕದನವಿರಾಮ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News