ಶಾಹೀನ್‌ಬಾಗ್ ಪ್ರತಿಭಟನೆ: ಸೀಲ್ ಮಾಡಿದ ಕವರ್‌ನಲ್ಲಿ ಸುಪ್ರೀಂಗೆ ವರದಿ

Update: 2020-02-24 17:36 GMT

ಹೊಸದಿಲ್ಲಿ, ಫೆ.24: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ತಮ್ಮ ವರದಿಯನ್ನು ಸುಪ್ರೀಂಕೋರ್ಟ್‌ನಿಂದ ನೇಮಕವಾಗಿರುವ ಸಂವಾದಕರು ಸೀಲ್ ಮಾಡಿದ ಕವರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ವರದಿಯಾಗಿದೆ. ನ್ಯಾಯವಾದಿಗಳಾದ ಸಾಧನಾ ರಾಮಚಂದ್ರನ್ ಮತ್ತು ಸಂಜಯ್ ಹೆಗ್ಡೆ ತಮ್ಮ ವರದಿಯನ್ನು ನ್ಯಾಯಾಧೀಶರಾದ ಎಸ್‌ಕೆ ಕೌಲ್ ಮತ್ತು ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠದೆದುರು ಸಲ್ಲಿಸಿದ್ದು, ಇದನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಫೆಬ್ರವರಿ 26ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

 ಈ ಹಂತದಲ್ಲಿ ಸಂವಾದಕರ ವರದಿಯನ್ನು ಅರ್ಜಿದಾರರು, ಕೇಂದ್ರ ಸರಕಾರ ಮತ್ತು ದಿಲ್ಲಿ ಪೊಲೀಸರ ಪ್ರತಿನಿಧಿ ವಕೀಲರಿಗೆ ತೋರಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ವರದಿಯ ಪ್ರತಿಯನ್ನು ನೀಡಬೇಕೆಂಬ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಪೀಠ, “ನಾವು ಇಲ್ಲಿದ್ದೇವೆ, ಎಲ್ಲರೂ ಇಲ್ಲಿಯೇ ಇದ್ದಾರೆ. ಮೊದಲು ವರದಿಯನ್ನು ನಾವು ಅಧ್ಯಯನ ನಡೆಸುತ್ತೇವೆ. ವರದಿಯ ಪ್ರತಿ ಈಗ ನ್ಯಾಯಾಲಯಕ್ಕೆ ಮಾತ್ರ ಸಲ್ಲುತ್ತದೆ” ಎಂದು ಹೇಳಿತು.

 ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯುತ್ತಿದ್ದರೂ ಪೊಲೀಸರು ಅನಗತ್ಯವಾಗಿ ರಸ್ತೆ ತಡೆ ನಿರ್ಮಿಸಿದ್ದಾರೆ ಎಂದು ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್ ನಲ್ಲಿ ತಿಳಿಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ತಮಗೆ ಮತ್ತು ಮುಂದಿನ ತಲೆಮಾರಿನವರ ಅಸ್ತಿತ್ವಕ್ಕೆ ಮರಣಗಂಟೆಯಾಗಲಿದ್ದು ಪ್ರತಿಭಟನೆ ಹತಾಶೆಯ ಮತ್ತು ಅನಿವಾರ್ಯ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯ ಪಟ್ಟಿರುವುದಾಗಿ ಹಬೀಬುಲ್ಲಾ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ನಖ್ವಿ ಮತ್ತು ಭೀಮ್‌ಸೇನೆ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರೂ ಸುಪ್ರೀಂಕೋರ್ಟ್‌ಗೆ ಜಂಟಿಯಾಗಿ ಸಲ್ಲಿಸಿರುವ ಅಫಿದವಿತ್ ನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಹೀನ್‌ಬಾಗ್‌ನಲ್ಲಿ ಶಾಂತರೀತಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚನ್ನು ರಾಜಕೀಯ ಮುಖಂಡರ ಆಜ್ಞೆಯಂತೆ ಹಿಂಸಾಚಾರ ಮತ್ತು ದಾಂಧಲೆ ಎಬ್ಬಿಸಿ ನಂದಿಸಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News