ಹಿಂಸಾಚಾರದ ವೇಳೆ ಪೊಲೀಸರು ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದರು: ಕೇಜ್ರಿವಾಲ್

Update: 2020-02-26 10:32 GMT

ಹೊಸದಿಲ್ಲಿ, ಫೆ.25: ರಾಷ್ಟ್ರ ರಾಜಧಾನಿದೊಳಗೆ ಪ್ರವೇಶಿಸಿ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿರುವ ‘ಹೊರಗಿನವರು’ ಬರುವುದನ್ನು ತಡೆಯಲು ನಗರದ ಗಡಿ ಪ್ರದೇಶಗಳನ್ನು ಮುಚ್ಚಬೇಕೆಂದು ಆಗ್ರಹಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಿಂಸಾಚಾರದ ವೇಳೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸದೇ ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದರು ಎಂದು ದೂರಿದ್ದಾರೆ.

 ಪೌರತ್ವ ಕಾಯ್ದೆ ಪರ ಹಾಗೂ ವಿರೋಧಿ ಗುಂಪುಗಳ ಮಧ್ಯೆ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಏಳು ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ‘‘ಪೊಲೀಸ್ ಸಿಬ್ಬಂದಿಗಳು ಹಿಂಸಾಚಾರ ತಡೆಯಲು ಏನೂ ಮಾಡಲಿಲ್ಲ. ಏಕೆಂದರೆ ಅವರಿಗೆ ಹಿರಿಯ ಅಧಿಕಾರಿಗಳ ಆದೇಶ ಬಂದಿರಲಿಲ್ಲ. ನಾನು ಈ ವಿಚಾರವನ್ನು ಗೃಹ ಸಚಿವ ಅಮಿತ್ ಶಾ ಜೀ ಬಳಿ ಪ್ರಸ್ತಾವಿಸಿದ್ದೇನೆ. ಮೇಲಧಿಕಾರಿಗಳ ಆದೇಶವಿಲ್ಲದೆ ಪೊಲೀಸರು ಲಾಠಿ ಚಾರ್ಜ್ ಆಗಲಿ, ಅಶ್ರುವಾಯುವಾಗಲಿ ಸಿಡಿಸುವ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’’ ಎಂದು ಸುದ್ದಿಗಾರರಿಗೆ ಕೇಜ್ರಿವಾಲ್ ತಿಳಿಸಿದರು.

 ‘‘ಹಿಂಸಾಚಾರಕ್ಕೆ ಬಲಿಯಾಗಿರುವ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಇತರ ಎಲ್ಲರೂ ನಮ್ಮ ವರೇ. ಅವರೆಲ್ಲರೂ ದಿಲ್ಲಿಯ ಜನರಾಗಿದ್ದಾರೆ. ಇದು ಉತ್ತಮ ಪರಿಸ್ಥಿತಿಯಲ್ಲ. ಕೆಲವರ ಮನೆಗಳು ಹಾಗೂ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ’’ ಎಂದರು ಕೇಜ್ರಿವಾಲ್ ಹೇಳಿದರು.

‘‘ಹಿಂಸಾಚಾರ ಪೀಡಿತ ಪ್ರದೇಶದ ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸಿದ್ದೇನೆ. ಹೊರಗಿನವರು ಬಂದು ಪರಿಸ್ಥಿತಿಯನ್ನು ಕೆಟ್ಟ ಸ್ಥಿತಿಗೆ ತಂದಿದ್ದಾರೆ ಎಂದು ಸಭೆಯಲ್ಲಿ ಎಲ್ಲರೂ ಹೇಳಿದ್ದಾರೆ. ಕೆಲವು ಸಮಯದ ತನಕ ದಿಲ್ಲಿಯ ಗಡಿಯನ್ನು ಬಂದ್ ಮಾಡಬೇಕಾದ ಅಗತ್ಯವಿದೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News