ಕುನಾಲ್ ಕಾಮ್ರಾ ಮೇಲೆ ನಿರ್ಬಂಧ ಹೇರಲು ಇತರ ಏರ್ ಲೈನ್ಸ್ ಗೆ ಸೂಚಿಸಿದ ಡಿಜಿಸಿಎಗೆ ದಿಲ್ಲಿ ಹೈಕೋರ್ಟ್ ತರಾಟೆ

Update: 2020-02-25 08:10 GMT

ಹೊಸದಿಲ್ಲಿ:  ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಕಿರುಕುಳ ನೀಡಿದ್ದಾರೆಂಬ  ಆರೋಪ ಎದುರಿಸುತ್ತಿರುವ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧದ ತನಿಖೆ ಬಾಕಿಯಿರುವಂತೆಯೇ ಇತರ ವಿಮಾನಯಾನ ಸಂಸ್ಥೆಗಳಿಗೂ ಅವರ ಮೇಲೆ ನಿಷೇಧ ಹೇರುವಂತೆ ಸೂಚಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು ದಿಲ್ಲಿ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.

ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಮುನ್ನ ಡಿಜಿಸಿಎ ಕಾಮ್ರಾ ಅವರ ದೂರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಕಾಮ್ರಾ ಅವರ ಅಪೀಲಿನ ಮೇಲಿನ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಹೇಳಿದೆ.

ಜನವರಿ 28ರಂದು ನಡೆದ ಘಟನೆಯ ಬೆನ್ನಲ್ಲೇ ಇಂಡಿಗೋ 'ಅಸ್ವೀಕಾರಾರ್ಹ ನಡತೆಗಾಗಿ' ಕಾಮ್ರಾ ಮೇಲೆ ತನ್ನ ವಿಮಾನಗಳಲ್ಲಿ ಪ್ರಯಾಣಿಸುವುದಕ್ಕೆ ಆರು ತಿಂಗಳ ನಿಷೇಧ ಹೇರಿತ್ತು. ನಂತರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇತರ ವಿಮಾನಯಾನ ಸಂಸ್ಥೆಗಳಿಗೂ ಇಂತಹುದೇ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ ಬೆನ್ನಲ್ಲೇ ಏರ್ ಇಂಡಿಯಾ, ಗೋ ಏರ್ ಹಾಗೂ ಸ್ಪೈಸ್ ಜೆಟ್ ಕೂಡ ಮುಂದಿನ ಆದೇಶದ ತನಕ ಅವರ ಮೇಲೆ ನಿಷೇಧ ಹೇರಿದ್ದವು.

ಇಂಡಿಗೋಗೆ ಕಾನೂನು ನೋಟಿಸ್ ಕೂಡ ಜಾರಿಗೊಳಿಸಿದ್ದ ಕಾಮ್ರಾ ಬೇಷರತ್ ಕ್ಷಮೆ, ನಿಷೇಧ ವಾಪಸ್ ಪಡೆಯಬೇಕು ಹಾಗೂ ರೂ 25 ಲಕ್ಷ ಪರಿಹಾರ ನೀಡಬೇಕೆಂಬ ಬೇಡಿಕೆಯಿರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News