ಮಂಗಳೂರಿನ ಹವ್ಯಾಸಿ ಬೈಕ್ ರೈಡರ್‌ನಿಂದ ಮೂರು ದೇಶಗಳ ಸುತ್ತಾಟ !

Update: 2020-02-26 11:52 GMT

ಮಂಗಳೂರು : ಮನುಷ್ಯನ ಹವ್ಯಾಸ ಕೂಡಾ ಹಲವಾರು ರೀತಿಯ ಸಾಧನೆಗಳಿಗೆ ಕಾರಣವಾಗುತ್ತದೆ. ಅದಕ್ಕೆ ಪೂರಕವೆಂಬಂತೆ, ಮಂಗಳೂರು ಬುಲ್ಸ್ ಕ್ಲಬ್‌ನ ಸದಸ್ಯರೂ ಆಗಿರುವ ಸಯ್ಯದ್ ಮುಹಮ್ಮದ್ ಸಲೀಂ ಅವರು 39 ದಿನಗಳಲ್ಲಿ ಭಾರತ ಸೇರಿ ಮೂರು ದೇಶಗಳಿಗೆ 12,635 ಕಿ.ಮೀ. ಬೈಕ್ ಪ್ರಯಾಣದ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. 

ಮೂಲತ: ಉಳ್ಳಾಲ ನಿವಾಸಿ, ಪ್ರಸ್ತುತ ಗಲ್ಫ್ ಉದ್ಯೋಗಿಯಾಗಿರುವ ಸಲೀಂ ಅವರು ತಮ್ಮ ಈ ಒಂಟಿ ಬೈಕ್ ರೈಡ್‌ನಲ್ಲಿ ದೇಶದ ಪ್ರಮುಖ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುವ ಜತೆಗೆ 100ಕ್ಕೂ ಅಧಿಕ ಪ್ರಮುಖ ನಗರಗಳಿಗೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಈ 39 ದಿನಗಳ ಅಂತರ್‌ ರಾಷ್ಟ್ರೀಯ ಪ್ರಯಾಣದ ವೇಳೆ ಕೆಲವೊಮ್ಮೆ ದಿನವೊಂದಕ್ಕೆ 500 ಕಿ.ಮೀ.ರವರೆಗೆ (ಸರಾಸರಿ ವೇಗ 80 ಕಿ.ಮೀ.) ಕ್ರಮಿಸಿದ್ದರೆ, ಕೆಲ ದಿನಗಳಲ್ಲಿ 50 ಕಿ.ಮೀ.ಗಳಷ್ಟೇ ಕ್ರಮಿಸಿದ್ದೂ ಇದೆಯಂತೆ.

ಬೈಕ್‌ರೈಡ್ ಎಂದರೆ 29ರ ಹರೆಯದ ಸಯ್ಯದ್ ಸಲೀಂರವರಿಗೆ ಒಂದು ರೀತಿಯ ಹುಚ್ಚು. ಕಳೆದ ಐದು ವರ್ಷಗಳಿಂದ ಈ ಬೈಕ್‌ರೈಡ್ ಗೀಳು ತಮ್ಮದಾಗಿಸಿಕೊಂಡಿರುವ ಇವರಿಗೆ ‘ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350’ ಸಾಥ್ ನೀಡುತ್ತಿದೆ. 2020ರ ಜನವರಿ 8ರಂದು ಕದ್ರಿ ಪಾರ್ಕ್ ಬಳಿ ಮಂಗಳೂರು ಬುಲ್ಸ್ ಕ್ಲಬ್‌ನ ಸದಸ್ಯರು ಸಲೀಂರನ್ನು ಒಂಟಿ ಬೈಕ್ ಪ್ರಯಾಣಕ್ಕೆ ಬೀಳ್ಕೊಟ್ಟಿದ್ದು, ಅದೇ ಜಾಗದಲ್ಲಿ ಫೆ. 15ರಂದು ಅವರನ್ನು ಬರಮಾಡಿಕೊಂಡಿದ್ದಾರೆ.

ಒಂಟಿ ಬೈಕ್ ಪಯಣ ಇದೇ ಮೊದಲಲ್ಲ

ಅಂದ ಹಾಗೆ, ಸಲೀಂರವರು ತಮ್ಮ ಮಂಗಳೂರು ಬುಲ್ಸ್ ಕ್ಲಬ್ ಸದಸ್ಯರ ಜತೆ ಹಲವು ಬಾರಿ ಗುಂಪಾಗಿ ಹಲವು ರಾಜ್ಯಗಳಿಗೆ ಬೈಕ್ ಪ್ರಯಾಣ ನಡೆಸಿದ್ದಾರೆ. ಬೈಕ್‌ನಲ್ಲಿ ಒಂಟಿ ಪ್ರಯಾಣವೂ ಇದೇ ಮೊದಲಲ್ಲ. 2018ರ ಜನವರಿಯಲ್ಲಿ 38 ಗಂಟೆಗಳ ಮಂಗಳೂರಿನಿಂದ ಮುಂಬೈವರೆಗೆ 2210 ಕಿ.ಮೀ. ಪ್ರಯಾಣವನ್ನೂ ಇವರು ಮಾಡಿದ್ದಾರೆ. ಅದೇ ವರ್ಷ ಆಗಸ್ಟ್‌ನಲ್ಲಿ ಹೈದರಾಬಾದ್‌ಗೆ ನಾಲ್ಕು ದಿನಗಳ 2500 ಕಿ.ಮೀ. ಹೈದರಾಬಾದ್ ಪ್ರಯಾಣವನ್ನೂ ಇವರು ಮಾಡಿದ್ದಾರೆ.

‘‘ಬೈಕ್ ಪ್ರಯಾಣ ನನ್ನ ಹವ್ಯಾಸ. ದೇಶದ ವಿವಿಧ ಕಡೆ ಬೈಕ್ ಪ್ರಯಾಣ ಮಾಡಿದ್ದ ನನಗೆ ದೇಶದ ಗಡಿ ದಾಟಿ ಬೈಕ್ ಪ್ರಯಾಣಿಸಬೇಕೆಂಬ ಬಯಕೆಯಿತ್ತು. ಅದೀಗ ಈಡೇರಿದೆ’’ ಎನ್ನುತ್ತಾರೆ ಸಲೀಂ.

‘ಜನವರಿ 8ರಂದು ಬೆಳಗ್ಗೆ ಕದ್ರಿ ಪಾರ್ಕ್‌ನಿಂದ ಪ್ರಯಾಣ ಆರಂಭಿಸಿದ್ದೆ. ಮಂಗಳೂರು ಬುಲ್ಸ್ ಕ್ಲಬ್‌ನ ನನ್ನ ಸ್ನೇಹಿತರು ನನ್ನನ್ನು ಶುಭ ಹಾರೈಸಿ ಕಳುಹಿಸಿಕೊಟ್ಟಿದ್ದು. ಅಲ್ಲಿಂದ ಚಳ್ಳಕೆರೆ, ಹೈದರಾಬಾದ್, ನಾಗ್ಪುರ, ಶಿನೋರಿ, ವಾರಣಾಸಿ ತಲುಪಿದೆ. ಅಲ್ಲಿಂದ ಸನೋಲಿ ಮೂಲಕ ನೇಪಾಳವನ್ನು ಪ್ರವೇಶಿಸಿ ಅಲ್ಲಿ ಚಿತ್‌ವನ್ ಕಾಡಿನಲ್ಲಿ ಸುತ್ತಾಡಿದೆ. ಅಲ್ಲಿಂದ ಕಾಠ್ಮಂಡು ಬಳಿಕ ಪೊಖಾರಾ, ಜೊಮ್‌ಸಮ್‌ಗೆ ಭೇಟಿ ನೀಡಿ ಹಿಮಾಲಯ ಪರ್ವತದ ಹಿಮದಲ್ಲಿ ಸುಮಾರು 3 ಕಿ.ಮೀ. ಪ್ರಯಾಣಿಸಿದೆ’’ ಎನ್ನುತ್ತಾರೆ ಸಲೀಂ.

‘‘ಬೈಕ್‌ನಲ್ಲಿ ಹಿಮದ ಮೇಲೆ ಪ್ರಯಾಣ ಅಪಾಯಕಾರಿ. ಅಲ್ಲಿನ ಪೊಲೀಸ್ ಸಿಬ್ಬಂದಿ ಇಂತಹ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ಆದರೆ ನಮ್ಮದೇ ರಿಸ್ಕ್ ಮೇಲೆ ನಾವು ಪ್ರಯಾಣಿಸಬೇಕಾಗುತ್ತದೆ. ನಾನು ಆ ರಿಸ್ಕ್ ತೆಗೆದುಕೊಂಡು ಪ್ರಯಾಣಿಸಿದೆ. ಅದೊಂದು ನನ್ನ ಜೀವನದ ಅದ್ಭುತ ಅನುಭವ’’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರವರು.

ಸಲೀಂರವರು, ತಮ್ಮ ಬೈಕ್ ಪ್ರಯಾಣದ ಬಗ್ಗೆ ಸಂಕ್ಷಿಪ್ತವಾಗಿ ವಿವರ ನೀಡುತ್ತಾ, ಜೊಮ್‌ಸಮ್‌ನಿಂದ ಮತ್ತೆ ಪೊಖಾರಗೆ ಆಗಮಿಸಿ ಅಲ್ಲಿ ಪಾಮೆ ಸರೋವರಕ್ಕೆ ಆಗಮಿಸಿದೆ. ನಾಲ್ಕು ದಿನಗಳ ಬಿಒಬಿಎಂಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮತ್ತೆ ಪಾಮೆ ಸರೋವರದಿಂದ ಚಂದ್ರಪುರ ನಗರ, ಸಿಲಿಗುರಿ, ಡಾರ್ಜಲಿಂಗ್‌ಗೆ ಪ್ರಯಾಣ ಬೆಳೆಸಿದೆ. ಅಲ್ಲಿಂದ ಸಿಕ್ಕಿಂ, ಅಲ್ಲಿಂದ ಗ್ಯಾಂಗ್ಟಕ್ ತಲುಪಿದೆ.

ಅಲ್ಲಿಂದ ಲಾಚುಂಗ್‌ಗೆ ಅನುಮತಿ ಪಡೆಯಬೇಕಾಯಿತು. ಆದರೆ ಆರಂಭದಲ್ಲಿ ಅಲ್ಲಿ ಬೈಕ್ ಪ್ರಯಾಣಕ್ಕೆ ನನಗೆ ಅನುಮತಿ ನಿರಾಕರಿಸಲಾಯಿತು. ಎರಡು ದಿನಗಳ ಸತತ ಮನವಿಯ ಬಳಿಕ ಲಾಚುಂಗ್‌ಗೆ ಅನುಮತಿ ದೊರೆಯಿತು. ಅಲ್ಲಿ ಒಂದು ದಿನದ ಪ್ರಯಾಣದ ಬಳಿಕ ಮರು ದಿನ ಅಲ್ಲಿ ಮತ್ತೆ ಕಟಾವೊಗೆ ಅನುಮತಿ ಪಡೆಯಬೇಕಾಯಿತು. ಆದರೆ ಅದು ಕೂಡಾ ಹಿಮಚ್ಛಾದಿತ ಪ್ರದೇಶವಾಗಿರುವುದರಿಂದ ಬೈಕ್ ಪ್ರವೇಶ ದೊರೆಯಲಿಲ್ಲ. ಹಾಗಾಗಿ ಮರುದಿನ ಅಲ್ಲಿಂದ ಗ್ಯಾಂಗ್ಟಕ್‌ಗೆ ವಾಪಾಸಾದೆ.‘‘ಆರಂಭದಲ್ಲಿ ಸಿಲಿಗುರಿಯಿಂದ ನೇರವಾಗಿ ಭೂತಾನ್‌ಗೆ ಹೋಗುವ ಯೋಜನೆ ನನ್ನದಾಗಿತ್ತು. ಆದರೆ ಅದನು ಕೊನೆ ಘಳಿಗೆಯಲ್ಲಿ ರದ್ದು ಮಾಡಿ ಡಾರ್ಜಲಿಂಗ್ ಮತ್ತು ಲಾಚುಂಗ್‌ಗೆ ಪ್ರಯಾಣ ಮಾಡಿದ್ದೆ.

ಕೊರೊನಾ ವೈರಸ್‌ನ ಭೀತಿಯಿಂದಾಗಿ ನಾನು ಆ ಸಂದರ್ಭ ನನ್ನ ಪ್ರಯಾಣದ ದಿಕ್ಕನ್ನು ಬದಲಿಸಬೇಕಾಯಿತು. ಬಳಿಕ ಒಂದು ವಾರದ ಬಳಿಕ ಗ್ಯಾಂಗ್ಟಕ್‌ಗೆ ಹಿಂತಿರುಗಿದಾಗ, ಅಲ್ಲಿ ಮುಂಬೈನಿಂದ ಬಂದಿದ್ದ ಇಬ್ಬರು ನನ್ನಲ್ಲಿ ಮಾತನಾಡಿ ನನ್ನ ಬೈಕ್ ರೈಡ್ ಬಗ್ಗೆ ವಿಚಾರಿಸಿದರು. ಹೀಗೆ ಆತ್ಮೀಯರಾದ ಅವರು, ತಾವು ಭೂತಾನ್‌ಗೆ ಪ್ರವಾಸಕ್ಕೆ ಹೊರಟಿರುವುದಾಗಿ ತಿಳಿಸಿದಾಗ ನಾನೂ ಕೂಡಾ ಬೈಕ್‌ನಲ್ಲಿ ಭೂತಾನ್‌ಗೆ ತೆರಳಲು ನಿರ್ಧರಿಸಿ ಗ್ಯಾಂಗ್ಟಕ್‌ನಿಂದ ಅಸ್ಸಾಂ ಮಾರ್ಗವಾಗಿ, ಭಾರತ- ಭೂತಾನ್ ಗಡಿ ಭಾಗ ಜೈಗಾಂನ್‌ಗೆ ಪ್ರವೇಶಿಸಿದೆ. 

ಭೂತಾನ್‌ನಲ್ಲಿ ಕೊರೋನಾ ವೈರಸ್ ಕಟ್ಟುನಿಟ್ಟಿನ ತಪಾಸಣೆ !

ಜೈಗಾಂನ್‌ನಲ್ಲಿ ಒಂದು ದಿನವಿದ್ದೆ. ಭೂತನ್ ಪ್ರವೇಶಿಸುವ ಪ್ರವೇಶ ದ್ವಾರದಲ್ಲಿ ಕೊರೊನಾ ವೈರಸ್ ಸ್ಕಾನಿಂಗ್ ಮಾಡಲಾಗುತ್ತದೆ. ನಮ್ಮ ವೈಯಕ್ತಿಕವಾದ ಸಂಪೂರ್ಣ ಮಾಹಿತಿಯನ್ನು ಅಲ್ಲಿ ಒದಗಿಸಬೇಕು. ಮತ್ತೆ ಯಂತ್ರದ ಮೂಲಕ ನಮ್ಮ ಆರೋಗ್ಯದ ತಪಾಸಣೆ ನಡೆಸಲಾಗುತ್ತದೆ. ಸ್ವಲ್ಪ ಜ್ವರವಿದ್ದಲ್ಲಿ ವಾಪಾಸು ಕಳುಹಿಸಲಾಗುತ್ತದೆ. ನಾವು ಎಲ್ಲಿ ಯಾವ ಹೊಟೇಲ್‌ನಲ್ಲಿ ಉಳಿದುಕೊಳ್ಳುತ್ತೇವೆಂಬ ಬಗ್ಗೆಯೂ ನಾವು ಅಲ್ಲಿ ಮಾಹಿತಿ ಒದಗಿಸಬೇಕಾಗುತ್ತದೆ. ಪಾಸ್‌ಪೋರ್ಟ್ ಪರಿಶೀಲಿಸಿ, ಅನುಮತಿ ನೀಡಲಾಗುತ್ತದೆ. ಹೀಗೆ ಅಲ್ಲಿಂದ ಅನುಮತಿ ಪಡೆದು ಭೂತನ್ ಥಿಂಪುವಿಲ್ಲಿ ರಾತ್ರಿ ಉಳಿದುಕೊಂಡೆ. ಮರು ದಿನ ಥಿಂಪುನಲ್ಲಿ ತಿರುಗಾಡಿ, ಅಲ್ಲಿಂದ ಪಾರೊಗೆ ತೆರಳಿದೆ. ಅಲ್ಲಿ ಟೈಗರ್‌ನೆಸ್ಟ್‌ಗೆ (ಬೌದ್ಧ ಕ್ಷೇತ್ರ) ಹೋಗುವ ಯೋಜನೆ ಇತ್ತು. ಆದರೆ ಅಲ್ಲಿಗೆ ಬೈಕ್ ಪ್ರಯಾಣ ಮಾಡುವ ಹಾಗಿಲ್ಲ. ಅಲ್ಲಿ ಎರಡು ಗಂಟೆ ಕಾಲುದಾರಿಯಲ್ಲಿ ಪ್ರಯಾಣಸಬೇಕು. ಅಲ್ಲಿ ಬೆಳಗ್ಗೆ ಏರು ಹೊತ್ತಿಗೆ ಪ್ರಯಾಣಿಸಬೇಕಾಗುತ್ತದೆ. ಆದರೆ ನನ್ನ ಸಮಯಾವಕಾಶ ಸರಿಹೊಂದದ ಕಾರಣ ನಾನು ಅಲ್ಲಿನ ಟ್ರೆಕ್ಕಿಂಗ್ ರದ್ದುಗೊಳಿಸಿ, ಅಲ್ಲಿಂದ ಬೈಕ್‌ನಲ್ಲಿ ಪಾರೊನಲ್ಲಿ ಸುತ್ತಾಡಿದೆ.

ನೈಟ್‌ವರ್ಕ್ ಕೈಕೊಟ್ಟಾಗ....!

ಅಲ್ಲಿಂದ ಸಂಜೆ ಹೊತ್ತು 6 ಗಂಟೆಗೆ ಜೈಗಾಂನ್‌ಗೆ ಹಿಂತಿರುಗಿದೆ. ಅಲ್ಲಿನ ಫ್ರೀ ಝೋನ್ (ಮುಕ್ತ ವಲಯ) ಪ್ರದೇಶದಲ್ಲಿ ಸುಮಾರು 5 ಕಿ.ಮೀ. ಯಾವುದೇ ರೀತಿಯ ಅನುಮತಿ ಇಲ್ಲದೆ ತಿರುಗಾಡುವ ಅವಕಾಶ ಇದೆ. ಅಲ್ಲಿಂದ ನಾನು ಆಗ್ರಾಕ್ಕೆ ಹೋಗುವ ಆಲೋಚನೆ ಮಾಡಿದ್ದೆ. ಅದು ಸುಮಾರು 1400 ಕಿ.ಮೀ. ಪ್ರಯಾಣ. ಆದರೆ ನನ್ನ ಬೈಕ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ, ನಾನು 100 ಕಿ.ಮೀ.ಗೂ ಸಮಯ ನೆಟ್‌ವರ್ಕ್ ತಪ್ಪಿ, ದಾರಿ ತಪ್ಪಿ ಪ್ರಯಾಣಿಸಬೇಕಾಯಿತು. ನನ್ನ ಪ್ರಯಾಣ ನನಗರಿವಿಲ್ಲದೆ ಪಶ್ಚಿಮ ಬಂಗಾಲದ ಕೊಲ್ಕತ್ತಾ ಕಡೆ ತೆರಳಿತ್ತು. ಅಲ್ಲಿ ಬೈಕ್ ಸರ್ವಿಸ್ ಮಾಡಿಸಿ ಅಲ್ಲಿಂದ ಬಿಹಾರದ ಮುಝಫರ್‌ಪುರ್‌ನಲ್ಲಿ ರಾತ್ರಿ ಕಳೆದೆ.

ಅಂದು ಅಲ್ಲಿ ತೀವ್ರತೆರನಾದ ಚಳಿಯಿಂದಾಗಿ ಬೈಕ್ ಸವಾರಿ ಸಾಧ್ಯವಾಗದೆ ಅಲ್ಲೇ ಉಳಿದುಕೊಂಡೆ. ಮರುದಿನ ಬೆಳಗ್ಗೆ ಅಲ್ಲಿಂದ ಲಕ್ನೋ ಮಾರ್ಗವಾಗಿ ಆಗ್ರಾ ತಲುಪಿದೆ.

ತಾಜ್‌ಮಹಲ್‌ಗೊಂದು ಗಿರಕಿ...

ಆಗ್ರಾಕ್ಕೆ ಭೇಟಿ ನೀಡಿದ ಬಳಿಕ ತಾಜ್‌ಮಹಲ್‌ಗೆ ಪ್ರವೇಶ ಮಾಡದಿರುವುದುಂಟೇ. ಹಾಗಾಗಿ ಅದೊಂದು ಅಪರೂಪದ ಮಹಲಿನ ಅಂದ ಚಂದವನ್ನು ನಾನು ಕಣ್ಣು ತುಂಬಿಸಿಕೊಂಡೆ. ತಾಜ್‌ಮಹಲ್‌ಗೆ ಇದು ನನ್ನ ಪ್ರಥಮ ಭೇಟಿ. ಈ ಹಿಂದೆಯೂ ದೇಶದ ಹಲವು ಪ್ರದೇಶಗಳಿಗೆ ಬೈಕ್ ಪ್ರಯಾಣ ಬೆಳೆಸಿದ್ದರೂ ತಾಜ್‌ಮಹಲ್‌ಗೆ ಭೇಟಿ ನೀಡುವ ಅವಕಾಶ ದೊರಕಿರಲಿಲ್ಲ.

ಬೀದಿ ಬದಿಯ ಸವಿಯೆಂದರೆ ಚಪ್ಪನ್ ಸ್ಟ್ರೀಟ್- ಸರಫಾ ಸ್ಟ್ರೀಟ್!

ಮರುದಿನವೂ ಅಲ್ಲಿದ್ದು, ಕೆಂಪುಕೋಟೆಗೆ ಭೇಟಿ ನೀಡಿದೆ. ಅಲ್ಲಿನ ಕೆಲವು ಸುತ್ತಮುತ್ತಲಿನ ಕೆಲ ಪ್ರದೇಶಗಳಿಗೆ ಭೇಟಿ ನೀಡಿದೆ. ಮರು ದಿನ ಅಲ್ಲಿಂದ ಇಂದೋರ್‌ಗೆ ಪ್ರಯಾಣ, ಅಲ್ಲಿ ರಾತ್ರಿ ಉಳಿದು, ಅಲ್ಲಿ ಮತ್ತೆ ಬೈಕ್‌ನ ತಾಂತ್ರಿಕ ದೋಷದ ಕಾರಣ ಗುನಾದಲ್ಲಿ ಉಳಿದು ಮರುದಿನ ಇಂದೋರ್‌ಗೆ ತಲುಪಿದೆ. ಇಂದೋರ್‌ನಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ರಾತ್ರಿ ಚಪ್ಪನ್‌ಸ್ಟ್ರೀಟ್‌ಗೆ ಭೇಟಿ ನೀಡಿದೆ. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಅಲ್ಲಿನ ಬೀದಿ ಬದಿಯ ಆಹಾರ ಮಳಿಗೆಗಳಲ್ಲಿ ರುಚಿಕರ ಆಹಾರಗಳನ್ನು ಸವಿದೆ. ಬಳಿಕ ಅಲ್ಲಿಂದ ಸರಫಾ ಸ್ಟ್ರೀಟ್‌ನ ಬೀದಿ ಬದಿ ಆಹಾರ ಮಳಿಗೆಗೆ ಭೇಟಿ ನೀಡಿದೆ. ಇಲ್ಲಿ ರಾತ್ರಿ 10ರಿಂದ ಬೆಳಗ್ಗೆ 4 ಗಂಟೆಯವರೆಗೆ ಸುಮಾರು 1ಕಿ.ಮೀನುದ್ದಕ್ಕೂ ಬೀದಿ ಬದಿ ಆಹಾರ ಮಳಿಗೆಗಳು ಕಾರ್ಯಾಚರಿಸುತ್ತವೆಯಂತೆ.

ಬೆಳಗ್ಗೆ ಹೊತ್ತು ಈ ದಾರಿಯುದ್ದಕ್ಕೂ ಚಿನ್ನಾಭರಣ ಮಳಿಗೆಗಳು ತೆರೆದಿರುತ್ತವೆ. ರಾತ್ರಿ 10 ಗಂಟೆಯ ಬಳಿಕ ಇಲ್ಲಿ ವಿವಿಧ ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಸೇರಿದಂತೆ ಆಹಾರ ಪ್ರಿಯರಿಗೆ ವೈವಿಧ್ಯಮಯ ತಿಂಡಿ ತಿನಿಸುಗಳು ಲಭ್ಯ. ಅಲ್ಲಿ ನಾನು ‘ಜಿನ್ನಿ ದೋಸೆ’ ಹಾಗೂ ಜಿಲೇಬಿ ಸವಿದೆ. ಇಲ್ಲಿ ಒಂದು ಬೃಹದಾಕಾರಾದ ಜಿಲೇಬಿಗೆ 100 ರೂ!

ಅಲ್ಲಿ ರಾತ್ರಿಯೆಲ್ಲಾ ಸುತ್ತಾಡಿ ಅಲ್ಲಿ ರಾತ್ರಿ ವಾಸ್ತವ್ಯವಿದ್ದು, ಮರುದಿನ ಪುಣೆಗೆ ಆಗಮಿಸಿದೆ. ಇಲ್ಲಿಗೆ ಆಗಮಿಸುವ ದಾರಿಯಲ್ಲಿ ಗೂಗಲ್‌ನಲ್ಲಿ ತೋರಿಸಿದ ದಾರಿ ತಪ್ಪಾಗಿ ಅದು ಶಾರ್ಟ್‌ಕಟ್ ರೂಟ್ ಪ್ರವೇಶಿಸಿದೆ. ಆದರೆ ಆ ರೂಟ್ ಸುಮಾರು 80 ಕಿ.ಮೀ ಕಿರಿದಾದ ಒಳ ದಾರಿಯಲ್ಲಿ ನಾನು ಹೊಲ, ಮನೆಯಂಗಳದ ಮೂಲಕ ಬೈಕ್ ರೈಡ್ ಮಾಡುವಂತಾಯಿತು. ಅಲ್ಲಿ ಯಾರಲ್ಲಿ ಹೈವೇ ಕೇಳಿದರೂ ಯಾರಿಗೂ ಗೊತ್ತಿಲ್ಲ. ಬಂದ ದಾರಿಗೆ ಹಿಂತಿರುಗಬೇಕೆಂದರು. ಅದಾಗಲೇ 40 ಕಿ.ಮೀ. ಬಂದಾಗಿತ್ತು. ಅಂತೂ ಕೊನೆಗೂ ನಾಸಿಕ್‌ಗೆ ಹೋಗುವ ದಾರಿ ಗೊತ್ತಾಗಿ ಒಳದಾರಿ ಮೂಲಕ ಪುಣೆ ಹೈವೇ ಪ್ರವೇಶಿಸಿದೆ. ಶಾರ್ಟ್ ಕಟ್ ದಾರಿ ಸುಮಾರು 80 ಕಿ.ಮೀ. ನನಗೆ ನಷ್ಟ ಮಾಡಿದ್ದರೂ, ಮತ್ತೊಂದು ಒಳದಾರಿ ನನ್ನ 110 ಕಿ.ಮೀ. ಹಾಗೂ ಸುಮಾರು 2 ಗಂಟೆಗಳನ್ನು ಉಳಿಸಿತ್ತು.

ಅಲ್ಲಿಂದ ಪುಣೆಗೆ ಆಗಮಿಸಿದೆ. ಮಂಗಳೂರು ಬುಲ್ಸ್‌ನ ಸದಸ್ಯರಾದ ಶ್ರೀನಾಥ್ ಗಣೇಶ್ ಅಯ್ಯರ್ ಅಲ್ಲಿ ತಮ್ಮ ಪತ್ನಿ ಶೆಫಾಲಿ ಐಯ್ಯರ್ ಜತೆ ವಾಸ್ತವ್ಯವಿದ್ದಾರೆ. ಅವರು ನನ್ನನ್ನು ಆದರದಿಂದ ಬರಮಾಡಿಕೊಂಡು ಆತಿಥ್ಯ ನೀಡಿದರು. ಕದ್ರಿ ಪಾರ್ಕ್‌ನಿಂದ ಮಂಗಳೂರು ಬುಲ್ಸ್ ಕ್ಲಬ್‌ನ ಸದಸ್ಯರು ಬೀಳ್ಕೊಟ್ಟಿದ್ದರು.

ಮರುದಿನ ಬೆಳಗ್ಗೆ ಅವರ ಮನೆಯಲ್ಲಿ ಉಪಹಾರ ಸೇವಿಸಿ ಪುಣೆ ಸುತ್ತಾಡಿದೆ. ಮಧ್ಯಾಹ್ನದಿಂದ ಮತ್ತೆ ಪ್ರಯಾಣ ಆರಂಭಿಸಿ ಸತಾರ್‌ಗೆ ಆಗಮಿಸಿದೆ. ಸತಾರ್‌ನಿಂದ ನೇರವಾಗಿ ಮನೆಯ ದಾರಿ ಹಿಡಿದೆ. ರಾತ್ರಿ ಬೆಳಗಾಂನಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಬೆಳಗ್ಗೆ ಮಂಗಳೂರು ಕಡೆ ಪ್ರಯಾಣ ಬೆಳೆಸಿದೆ.

ಮಂಗಳೂರು ಎಲ್ಲಿ ನಾನು ಪ್ರಯಾಣ ಆರಂಭಿಸಿದ್ದೆನೋ ಅಲ್ಲಿ ನನ್ನ ಸ್ನೇಹಿತರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿದರು.

‘‘ನನ್ನ ಪ್ರಯಾಣಕ್ಕೆ ದಾರಿಯುದ್ದಕ್ಕೂ ನಾನು ಭೇಟಿಯಾದ ನಗರಗಳಲ್ಲಿ ಜನರೆಲ್ಲಾ ಆತ್ಮೀಯವಾಗಿ ಮಾತನಾಡಿಸಿ, ಊಟ, ತಿಂಡಿ, ಪಾನೀಯ ನೀಡಿ ಸತ್ಕರಿಸಿದ್ದಾರೆ. ಕೆಲವರು ತಮ್ಮ ಮನೆಯಲ್ಲಿ ವಿಶ್ರಾಂತಿ ಮಾಡುವಂತೆಯೂ ಒತ್ತಾಯಿಸಿದ್ದಿದೆ. ಡಾರ್ಜಲಿಂಗ್‌ನಲ್ಲಿ ದಂಪತಿಯೊಂದು ನಾನು ದಕ್ಷಿಣ ಭಾರತದಿಂದ ಬಂದಿದ್ದು ಅರಿತು ಖುಷಿಯಲ್ಲಿಯೇ ನನ್ನನ್ನು ಕರೆದು ಚಹಾ ತಿಂಡಿ, ಊಟ ನೀಡಿದರು. ತಮ್ಮ ಮಗ ತಮಿಳುನಾಡಿನಲ್ಲಿ ಉದ್ಯೋಗದಲ್ಲಿರುವುದನು ತಿಳಿಸಿ, ನೀನೂ ನಮ್ಮ ಮಗನಂತೆ. ಇಂದು ರಾತ್ರಿ ಇಲ್ಲೇ ಇದ್ದು ನಾಳೆ ಹೋಗುವಂತೆ ಆತ್ಮೀಯತೆ ತೋರಿಸಿದ್ದರು’’

- ಸಯ್ಯದ್ ಮುಹಮ್ಮದ್ ಸಲೀಂ.

Full View

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News