ದಿಟ್ಟ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ 'ಮೆಕ್‍ ಗಿಲ್ ಮೆಡಲ್'ಗೆ ಆಯ್ಕೆಯಾದ ರಾಣಾ ಅಯ್ಯೂಬ್

Update: 2020-02-25 11:10 GMT

ಹೊಸದಿಲ್ಲಿ: ಪತ್ರಕರ್ತೆ, 'ದಿ ವಾಷಿಂಗ್ಟನ್ ಪೋಸ್ಟ್'ನ ಗ್ಲೋಬಲ್ ಒಪಿನಿಯನ್ಸ್ ಬರಹಗಾರ್ತಿಯಾಗಿರುವ ರಾಣಾ ಅಯ್ಯೂಬ್ ಅವರು 2020ನೇ ಸಾಲಿನ 'ಮೆಕ್‍ ಗಿಲ್ ಮೆಡಲ್ ಫಾರ್ ಜರ್ನಲಿಸ್ಟಿಕ್ ಕರೇಜ್' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಎಪ್ರಿಲ್ 22ರಂದು ಜಾರ್ಜಿಯಾದ ದಿ ಗ್ರೇಡಿ ಕಾಲೇಜ್ ಆಫ್ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯುನಿಕೇಶನ್ಸ್‍ ನಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಐವತ್ತರ ಹಾಗೂ 60ರ ದಶಕಗಳಲ್ಲಿ ಜನಾಂಗೀಯ ಬೇಧಭಾವವನ್ನು ಪ್ರಶ್ನಿಸಿ ಬರೆಯುತ್ತಿದ್ದ ಸಂಪಾದಕೀಯಗಳಿಂದಾಗಿ 'ದಕ್ಷಿಣದ ಆತ್ಮಸಾಕ್ಷಿ' ಎಂದು ಬಣ್ಣಿಸಲ್ಪಟ್ಟಿದ್ದ ಅಟ್ಲಾಂಟ ಕಾನ್‍ ಸ್ಟಿಟ್ಯೂಶನ್ ಇದರ ಮಾಜಿ ಸಂಪಾದಕ ರಾಲ್ಫ್ ಮೆಕ್‍ ಗಿಲ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

"ಸತ್ಯವನ್ನು ಮಾತನಾಡಲು ಜನಪ್ರಿಯವಲ್ಲದ ಹೋರಾಟವನ್ನು ಮಾಡುತ್ತಿರುವ ಎಲ್ಲಾ ಪತ್ರಕರ್ತರ ಪರವಾಗಿ ನಾನು ಈ ಪ್ರಶಸ್ತಿ ಸ್ವೀಕರಿಸುತ್ತೇನೆ. ಇದು ನನ್ನ ಪಾಲಿಗೆ ದೊಡ್ಡ ಗೌರವ'' ಎಂದು ಪ್ರಶಸ್ತಿಗೆ ತಾವು ಆಯ್ಕೆಯಾಗಿರುವುದನ್ನು ತಿಳಿದ ನಂತರ ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ 'ದಿ ತೆಹಲ್ಕಾ'ದಲ್ಲಿ ತನಿಖಾ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ರಾಣಾ ಅಯ್ಯೂಬ್ 2002ರ ಗುಜರಾತ್ ದಂಗೆಗಳ ವೇಳೆಯ ತನ್ನ ವರದಿಗಳಿಗಾಗಿ ಖ್ಯಾತಿ ಪಡೆದವರು. "ಗುಜರಾತ್ ಫೈಲ್ಸ್-ಅನಾಟಮಿ ಆಫ್ ಎ ಕವರ್ ಅಪ್' ಎಂಬ ಕೃತಿಯನ್ನೂ ಅವರು ಬರೆದಿದ್ದಾರೆ. ಗುಜರಾತ್ ದಂಗೆಗಳಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪಾತ್ರದ ಕುರಿತಂತೆ ಈ ಕೃತಿ  ಪ್ರಶ್ನಿಸಿದೆ.

ತಮ್ಮ ವೃತ್ತಿ ಜೀವನದಲ್ಲಿ ಅವರು ತಾವು ಬರೆದ ಬರಹಗಳಿಗಾಗಿ ಸಾಕಷ್ಟು ಬೆದರಿಕೆಗಳನ್ನು ಹಾಗೂ ಆನ್ಲೈನ್ ನಿಂದನೆಗಳನ್ನೂ ಎದುರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News