ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳು ರಾಷ್ಟ್ರಗೀತೆ, ವಂದೇಮಾತರಂ ಹಾಡುವಂತೆ ದಿಲ್ಲಿ ಪೊಲೀಸರಿಂದ ಬಲವಂತ

Update: 2020-02-26 10:27 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 30 ಸೆಕೆಂಡ್ ಅವಧಿಯ ವೀಡಿಯೋವೊಂದರಲ್ಲಿ ಐದು ಮಂದಿ ಗಾಯಾಳುಗಳು ರಸ್ತೆಯಲ್ಲಿ ಬಿದ್ದುಕೊಂಡಿದ್ದರೆ ಅವರನ್ನು ಸುತ್ತುವರಿದಿರುವ ಪೊಲೀಸರು ಅವರಿಗೆ ರಾಷ್ಟ್ರಗೀತೆ ಹಾಡುವಂತೆ ಸೂಚಿಸುತ್ತಿರುವುದು ಕೇಳಿಸುತ್ತಿದೆ.

ಒಬ್ಬ ಪೊಲೀಸ್ ಸಿಬ್ಬಂದಿ ಘಟನೆಯನ್ನು ತನ್ನ ಮೊಬೈಲ್ ಫೋನ್‍ ನಲ್ಲಿ ಚಿತ್ರೀಕರಿಸುತ್ತಿರುವಂತೆಯೇ "ವಂದೇ ಮಾತರಂ ಹಾಡಿ'' ಎಂದು ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಹೇಳುತ್ತಿರುವುದು ಕೇಳಿಸುತ್ತದೆ. ಈ ನಡುವೆ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಅವರಿಗೆ `ಆಝಾದಿ' ಘೋಷಣೆ ಕೂಗುವಂತೆ ಸೂಚಿಸಿ ವ್ಯಂಗ್ಯವಾಡುತ್ತಾನೆ.

ಈ ಘಟನೆ ಎಲ್ಲಿ ನಡೆದಿದೆಯೆಂಬುದರ ಕುರಿತಂತೆ ಸ್ಪಷ್ಟನೆಯಿಲ್ಲವಾದರೂ ಅದು ಹಲವರ ತೀಕ್ಷ್ಣ ಪ್ರತಿಕ್ರಿಯೆಗೆ ಗುರಿಯಾಗಿದೆ. ಸಮಾಜವಾದಿ ಪಕ್ಷದ ಮಾಜಿ ಸಂಸದ ಹಾಗೂ ಪತ್ರಕರ್ತ ಶಾಹಿದ್ ಸಿದ್ದೀಖಿ ಟ್ವೀಟ್ ಮಾಡಿ ಗಾಯಾಳುಗಳು `ಮುಸ್ಲಿಂ ಹುಡುಗರು' ಎಂದಿದ್ದಾರೆ. "ಮುಸ್ಲಿಂ ಹುಡುಗರಿಗೆ ಥಳಿಸಿ ದಿಲ್ಲಿ ಪೊಲೀಸರು ರಾಷ್ಟ್ರಗೀತೆ ಹಾಡುವಂತೆ ಬಲವಂತಪಡಿಸಿದರು.  ಪೊಲೀಸರು ಹಾಗೂ ಗೂಂಡಾಗಳ ನಡುವೆ ವ್ಯತ್ಯಾಸವಿಲ್ಲ. ಇಂದಿನ ಭಾರತದ ಭಯಾನಕ ವಾಸ್ತವವಿದು'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಶಾಹೀನ್ ಬಾಗ್‍ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಾದ ಅಧಿಕೃತ ಟ್ವಿಟರ್ ಹ್ಯಾಂಡಲ್ `ಶಾಹೀನ್‍ಬಾಗ್ ಅಫಿಶಿಯಲ್' ಟ್ವೀಟ್ ಮಾಡಿ ``ಈ ಘಟನೆ ಮೌಜ್‍ ಪುರ್‍ ನಲ್ಲಿ ನಡೆದಿದೆ, ಸಂರಕ್ಷಕರೇ ದಾಳಿಕೋರರಾದಾಗ ನಾವೇನು ಮಾಡುವುದು. ಮನುಷ್ಯರಿಗೆ ಅಗೌರವ ತೋರುತ್ತಿರುವ ದಿಲ್ಲಿ ಪೊಲೀಸರ ವರ್ತನೆ ನಾಚಿಕೆಗೇಡು, ದಿಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುವ ರೀತಿ ಇದೇನು?'' ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ, ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಇಶಾನ್ ತರೂರ್ ಕೂಡ ಈ ವೀಡಿಯೋ ಶೇರ್ ಮಾಡಿದ್ದಾರೆ.

ಇನ್ನೊಂದೆಡೆ ಬಿಜೆಪಿ ಬೆಂಬಲಿಗ , ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿ ದಿಲ್ಲಿ ಪೊಲೀಸರು ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ ಎಂದಿದ್ದಾರೆ. "ಈ ನಟರಿಗೆ ದ್ವೇಷ, ಭಾರತ ವಿರೋಧಿ ದಂಗೆಗಳಲ್ಲಿ ಬಾಲಿವುಡಿಯಾಸ್ ತರಬೇತಿ ನೀಡಿದ್ದಾರೆ. ಆದರೆ ದಿಲ್ಲಿ ಪೊಲೀಸರು ಅವರುಗೆ ಹಾಡಲು ಕಲಿಸಿದ್ದಾರೆ, ಏಕೆಂದರೆ ಹಾಡು ಹಾಗೂ ನೃತ್ಯವಿಲ್ಲದೆ ಯಾವುದೇ ಸಿನೆಮಾ ಸಂಪೂರ್ಣವಾಗದು..'' ಎಂದು ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News