'ಗೂಂಡಾಗಳು ರಿವಾಲ್ವರ್, ಕತ್ತಿಗಳನ್ನು ಹಿಡಿದು ನಿಂತಿದ್ದಾರೆ': ದಿಲ್ಲಿ ಜನರಿಂದ ಸಹಾಯಕ್ಕೆ ಮೊರೆ

Update: 2020-02-26 10:27 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಏಳು ಮಂದಿ ಬಲಿಯಾಗಿ, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಿಂಸಾತ್ಮಕ ಘಟನೆಗಳು, ದಾಳಿ, ಲೂಟಿ ಪ್ರಕರಣಗಳು ಮಂಗಳವಾರವೂ ಮುಂದುವರಿದಿವೆ.

ದಿಲ್ಲಿಯ ಯಮುನಾ ವಿಹಾರ್ ಹಾಗೂ ಅಶೋಕ್ ನಗರ್ ಪ್ರದೇಶದ ಹಲವಾರು ನಿವಾಸಿಗಳು ಎಸ್‍ಒಎಸ್ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

'ಶಸ್ತ್ರಾಸ್ತ್ರಗಳನ್ನು ಹಿಡಿದ ಗುಂಪುಗಳು ರಸ್ತೆಗಳಲ್ಲಿ ಅಲೆದಾಡುತ್ತಿವೆ ಸಹಾಯ ಮಾಡಿ' ಎಂದು ದಿಲ್ಲಿ ಪೊಲೀಸರಿಗೆ ಹಲವರು ಮೊರೆಯಿಟ್ಟಿದ್ದಾರೆ. ಹಸೀಬಾ ಅಮೀನ್ ಎಂಬವರು ಶಿವ್ ವಿಹಾರ್ ಪ್ರದೇಶದಿಂದ ಟ್ವೀಟ್ ಮಾಡಿ, "ಮೂರು ಬಸ್ಸುಗಳಲ್ಲಿ ಗೂಂಡಾಗಳು ಬಂದಿದ್ದಾರೆ.  ಒಬ್ಬ ಹಿರಿಯ ಬಿಜೆಪಿ ನಾಯಕ ಅವರನ್ನು ಕರೆ ತಂದರು. ಪರಿಸ್ಥಿತಿ ರಾತ್ರಿ ನಿಯಂತ್ರಣದಲ್ಲಿತ್ತು, ಆದರೆ ಈ ಗೂಂಡಾಗಳು ಕೈಗಳಲ್ಲಿ ರಿವಾಲ್ವರ್ ಹಾಗೂ ಕತ್ತಿಗಳನ್ನು ಹಿಡಿದುಕೊಂಡು ಬ್ಯಾರಿಕೇಡ್‍ ನ ಒಂದು ಬದಿಯಲ್ಲಿ ನಿಂತಿದ್ದಾರೆ. ಇನ್ನೊಂದು ಬದಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಬರಿಗೈಯ್ಯಲ್ಲಿ ನಿಂತಿದ್ದಾರೆ. ಶಾಂತಿಗಾಗಿ ಮನವಿ ಮಾಡುತ್ತಿರುವ ಪ್ರತಿಭಟನಾಕಾರರನ್ನು ಗೂಂಡಾಗಳು ನಿಂದಿಸುತ್ತಿದ್ದಾರೆ'' ಎಂದು ಬರೆದಿದ್ದಾರೆ.

ಆದಿತ್ಯ ಮೆನನ್ ಎಂಬವರು ಯಮುನಾ ವಿಹಾರ್ ಹಾಗೂ ವಿಜಯ್ ಪಾರ್ಕ್ ಪ್ರದೇಶದಿಂದ ಟ್ವೀಟ್ ಮಾಡಿ "ಹಿಂದುತ್ವ ಗುಂಪು ಮುಸ್ಲಿಂ ಪ್ರದೇಶಗಳನ್ನು ಸ್ವಚ್ಛಂದವಾಗಿ ಪ್ರವೇಶಿಸುತ್ತಿವೆ'' ಎಂದು  ಬರೆದಿದ್ದಾರೆ.

ನಿಕೋಲಾ ಕರೀಂ ಎಂಬವರು ಟ್ವೀಟ್ ಮಾಡಿ "ಗೋಕುಲ್‍ಪುರಿಯಲ್ಲಿ ಜನರ ಒಂದು ಗುಂಪು ಕೈಗಳಲ್ಲಿ ಬೆತ್ತ, ಕಲ್ಲುಗಳನ್ನು ಹಿಡಿದುಕೊಂಡು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆಂದು ಬಿಬಿಸಿ ವರದಿ ತಿಳಿಸಿದೆ'' ಎಂದು ಬಿಬಿಸಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

``ನಾಗರಿಕರೆಂದು ಹೇಳಿಕೊಂಡವರಿಂದ ಗುಂಡು ಹಾರಾಟ ಸತತವಾಗಿ ಯಮುನಾ ವಿಹಾರ್ ಪ್ರದೇಶದಲ್ಲಿ ನಡೆಯುತ್ತಿದೆ'' ಎಂದು ದಿಲ್ಲಿ ಸುಧಾರ್ ಮಂಚ್ ಟ್ವೀಟ್ ಮಾಡಿದೆ.

ಮೋಹಿತ್ ಕುಮಾರ್ ರೋಹಟ್ಗಿ ತಮ್ಮ ಎಸ್‍ಒಎಸ್ ಟ್ವೀಟ್‍ ನಲ್ಲಿ ``ಯಮುನಾ ವಿಹಾರ್ ಸಿ-12ನೇ ಬ್ಲಾಕ್ ನಲ್ಲಿ ಭಾರೀ ಗುಂಡಿನ ದಾಳಿ ನಡೆಯುತ್ತಿದೆ. ತುರ್ತು ಸಹಾಯ ಬೇಕು'' ಎಂದಿದ್ದಾರೆ.

ಬಿಬಿಸಿ ವರದಿಗಾರ್ತಿ ಯೋಗಿತಾ ಲಿಮಯೆ ಟ್ವೀಟ್ ಮಾಡಿ ಯಮುನಾ ವಿಹಾರ್‍ನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಉಲ್ಲೇಖಿಸಿ ಚಿತ್ರೀಕರಣ ನಡೆಸದಂತೆ ತಮ್ಮನ್ನು ತಡೆಯಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News