ದಕ್ಷಿಣ ಕೊರಿಯದಲ್ಲಿ 1,000 ಸಮೀಪಿಸುತ್ತಿರುವ ಕೊರೋನ ಸೋಂಕು

Update: 2020-02-25 15:27 GMT

ಸಿಯೋಲ್ (ದಕ್ಷಿಣ ಕೊರಿಯ), ಫೆ. 25: ದಕ್ಷಿಣ ಕೊರಿಯದಲ್ಲಿ ನೂತನ-ಕೊರೋನವೈರಸ್ ಸೋಂಕು ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ದೇಶದ ಅಧ್ಯಕ್ಷ ಮೂನ್ ಜೇ-ಇನ್ ಮಂಗಳವಾರ ಹೇಳಿದ್ದಾರೆ.

ದೇಶದಲ್ಲಿ ಮಾರಕ ಸೋಂಕಿನ ಕೇಂದ್ರ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕೊರಿಯದಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,000ವನ್ನು ಸಮೀಪಿಸಿದೆ.

ದೇಶದಲ್ಲಿ 144 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ರೋಗದ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 977ನ್ನು ತಲುಪಿದೆ ಎಂದು ಕೊರಿಯ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ. ಇದು ಚೀನಾದ ಬಳಿಕ ದೇಶವೊಂದರಲ್ಲಿ ಸೋಂಕಿಗೊಳಗಾಗಿರುವ ಗರಿಷ್ಠ ಸಂಖ್ಯೆಯಾಗಿದೆ.

ಮಾರಕ ರೋಗದ ಸೋಂಕು ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಜಗತ್ತಿನ 12ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ದಕ್ಷಿಣ ಕೊರಿಯದಲ್ಲಿ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ.

ದಕ್ಷಿಣ ಕೊರಿಯದ ಸೋಂಕು ಪ್ರಕರಣಗಳ ಪೈಕಿ 80 ಶೇಕಡಕ್ಕೂ ಅಧಿಕ ಪ್ರಕರಣಗಳು ದೇಶದ ನಾಲ್ಕನೇ ಅತಿ ದೊಡ್ಡ ನಗರ ಡೇಗು ಮತ್ತು ನೆರೆಯ ನಾರ್ತ್ ಗಯಾಂಗ್‌ಸ್ಯಾಂಗ್ ರಾಜ್ಯದಲ್ಲಿ ವರದಿಯಾಗಿವೆ.

25 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ಡೇಗು ನಗರದ ರಸ್ತೆಗಳು ಹಲವು ದಿನಗಳಿಂದ ಹೆಚ್ಚು-ಕಡಿಮೆ ನಿರ್ಜನವಾಗಿವೆ. ಕೆಲವು ಅಂಗಡಿಗಳಲ್ಲಿ ಮುಖಕವಚಗಳನ್ನು ಖರೀದಿಸಲು ಜನರು ಉದ್ದನೆ ಸರತಿ ಸಾಲುಗಳಲ್ಲಿ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News